ಜಿದ್ದಿಗೆ ಬಿದ್ದು ಟನಲ್‌ ರಸ್ತೆ : ತೇಜಸ್ವಿ ಸೂರ್ಯ ಕಿಡಿ

Published : Oct 30, 2025, 06:58 AM IST
Tejasvi surya

ಸಾರಾಂಶ

ಸಾರ್ವಜನಿಕರು, ತಜ್ಞರ ಅಭಿಪ್ರಾಯ ಕೇಳದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಿದ್ದಿಗೆ ಬಿದ್ದು ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹರಿಹಾಯ್ದಿದ್ದಾರೆ.

 ಬೆಂಗಳೂರು :  ಸಾರ್ವಜನಿಕರು, ತಜ್ಞರ ಅಭಿಪ್ರಾಯ ಕೇಳದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಿದ್ದಿಗೆ ಬಿದ್ದು ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹರಿಹಾಯ್ದಿದ್ದಾರೆ.

ನಗರದಲ್ಲಿ 43 ಸಾವಿರ ಕೋಟಿ ರು. ವೆಚ್ಚ ಮಾಡಿ 18 ಕಿ.ಮೀ. ಸುರಂಗ ರಸ್ತೆ ನಿರ್ಮಿಸಿದರೆ ಇಡೀ ನಗರದ ಟ್ರಾಫಿಕ್‌ ಜಾಮ್‌ ಕಡಿಮೆ ಆಗಲಿದೆಯೇ? ಡಿಪಿಆರ್‌ನಲ್ಲಿಯೇ ಸುರಂಗ ರಸ್ತೆಯ 22 ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಲಿದೆ ಎಂದೂ ಅವರು ಖಾರವಾಗಿ ಹೇಳಿದ್ದಾರೆ.

ಬುಧವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಾತ್ಯಕ್ಷಿಕೆ ಮೂಲಕ ಟನಲ್‌ ಯೋಜನೆಯಿಂದ ಆಗುವ ಅನಾನುಕೂಲತೆಗಳ ಬಗ್ಗೆ ವಿವರ ನೀಡಿದರು.

ಟನಲ್‌ ಯೋಜನೆಯಿಂದ ಹೊಸದಾಗಿ 22 ಸೃಷ್ಟಿಯಾಗುವ ಟ್ರಾಫಿಕ್‌ ಜಾಮ್‌ ಸ್ಥಳಗಳಲ್ಲಿ ಕೈಗೊಳ್ಳುವ ಪರಿಹಾರದ ಬಗ್ಗೆ ಸರ್ಕಾರದ ಬಳಿ ಉತ್ತರವಿಲ್ಲ. 18.ಕಿ.ಮೀ ಟನಲ್‌ ರಸ್ತೆಯ ಪ್ರಯಾಣಕ್ಕೆ ಪ್ರವೇಶ ಮತ್ತು ನಿರ್ಗಮನ ದ್ವಾರಕ್ಕಾಗಿ ಹೆಚ್ಚುವರಿ 1.5ರಿಂದ 2 ಕಿ.ಮೀ.ರವರೆಗೆ ಸಂಚರಿಸಬೇಕಿದೆ. ಇಡೀ ಯೋಜನೆ ಬಗ್ಗೆ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಕುರಿತು ಅಧ್ಯಯನ ನಡೆಸಿಲ್ಲ. ಬೆಂಗಳೂರಿನಲ್ಲಿ ಗಟ್ಟಿಯಾದ ಬಂಡೆಗಳಿದ್ದು, ಮೆಟ್ರೋ ಸುರಂಗ ಕೊರೆಯುವುದು ವಿಳಂಬವಾಗುತ್ತಿದೆ. ಇನ್ನೂ ನಗರಾಭಿವೃದ್ಧಿ ಇಲಾಖೆಯ ತಜ್ಞರ ಸಮಿತಿಯೇ ಯೋಜನೆಗೆ ಮಣ್ಣು ಪರೀಕ್ಷೆ ಆಗಿಲ್ಲ. ಚರಂಡಿ ವ್ಯವಸ್ಥೆ ಬಗ್ಗೆ ಯಾವುದೇ ಪ್ರಸ್ತಾಪಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದ್ಯಾವುದನ್ನೂ ಪರಿಗಣಿಸಿಲ್ಲ ಎಂದು ಆಪಾದಿಸಿದರು.

ಜತೆಗೆ, ಮುಂದಿನ 25 ವರ್ಷಗಳಲ್ಲಿ ವಾಹನ ಸಂಖ್ಯೆ ಹೆಚ್ಚಳದ ಬಗ್ಗೆ ಅಧ್ಯಯನ ನಡೆಸಿಲ್ಲ. ಸಣ್ಣ ಮಳೆ ಬಂದರೆ ಸಾಕು ಅಂಡರ್‌ ಪಾಸ್‌ಗಳಲ್ಲಿ ನೀರು ನಿಲ್ಲುತ್ತೆ. ಸುರಂಗ ರಸ್ತೆ ನಿರ್ಮಾಣದ ವೇಳೆ ಅವಘಡ ಉಂಟಾದರೆ, ವಿಪತ್ತು ನಿರ್ವಹಣೆ ಹೇಗೆ ಎಂಬುದರ ಬಗ್ಗೆ ಒಂದು ಸಾಲು ಬರೆದಿಲ್ಲ. ಏಕಾಏಕಿ ಸುರಂಗ ಅಗೆಯುವುದಕ್ಕೆ ಮುಂದಾದರೆ, ಅಲ್ಲಿರುವ ನೂರಾರು ಕಟ್ಟಡ, ಸಾವಿರಾರು ಜನ ಜೀವನ ಏನಾಗಬೇಕು ಎಂದು ಪ್ರಶ್ನಿಸಿದರು.

ಟನಲ್‌ ರಸ್ತೆಯಿಂದ ಗಂಟೆಗೆ ಒಂದು ಮಾರ್ಗದಲ್ಲಿ 1600 ರಿಂದ 1800 ಮಂದಿ ಓಡಾಡಬಹುದು. ಅದೇ ಮೆಟ್ರೋ, ಸರ್ಬಬನ್ ರೈಲು ಸೇರಿ ಸಾರ್ವಜನಿ ಸಾರಿಗೆ ವ್ಯವಸ್ಥೆ ಮಾಡಿದರೆ 10 ರಿಂದ 25 ಸಾವಿರ ಮಂದಿ ಪ್ರಯಾಣಿಸಲಿದ್ದಾರೆ. ಅದು ಕೇವಲ 50 ರಿಂದ 60 ರು. ವೆಚ್ಚದಲ್ಲಿ. ಟನಲ್‌ ರಸ್ತೆ ಸಂಚಾರ ಮಾಡಬೇಕಾದರೆ ಎರಡೂ ಮಾರ್ಗದಲ್ಲಿ ಸುಮಾರು 660 ರು. ವಚ್ಚ ಮಾಡಬೇಕಾಗಲಿದೆ ಎಂದರು.

ಡಿಕೇಶಿಗೆ ಕೊಟ್ಟ ಸಲಹೆ ಏನು?

ಸುರಂಗ ರಸ್ತೆ ಬದಲು ಏನು ಮಾಡಬಹುದು ಎಂಬುದರ ಬಗ್ಗೆ ವೈಜ್ಞಾನಿಕ ಮತ್ತು ಶಾಶ್ವತ ಪರಿಹಾರೋಪಾಯಗಳನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಲಾಗಿದೆ. ಪ್ರಮುಖವಾಗಿ ನಗರದ ಶೇ.70 ರಷ್ಟು ಮಂದಿ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತಾಗಬೇಕು. ಸಾರ್ವಜನಿಕ ಸಾರಿಗೆಗೆ ಆದ್ಯತೆ ಇರಲಿ. ಪಾದಚಾರಿಗಳು ಅಪಘಾತದಿಂದ ಮೃತಪಡುತ್ತಿರುವ ಸಂಖ್ಯೆ ದೇಶದಲ್ಲಿ ಬೆಂಗಳೂರು ಮೂರು ವರ್ಷದಿಂದ ಮೊದಲ ಸ್ಥಾನದಲ್ಲಿದ್ದು, ಪಾದಚಾರಿ ಮಾರ್ಗಕ್ಕೆ ಆದ್ಯತೆ ಕೊಡಬೇಕು ಎಂದು ತಿಳಿಸಲಾಗಿದೆ ಎಂದು ತಿಳಿಸಿದರು.

-ಬೆಂಗಳೂರಿಗೆ ಸಬರ್ಬನ್ ರೈಲು, ಮೆಟ್ರೋ, ಟ್ರ್ಯಾಮ್‍ಗಳು, ರಿಂಗ್ ರೈಲ್ ಬೇಕಿದೆ. ಹಳದಿ ಮೆಟ್ರೋ ಮಾರ್ಗ ಆರಂಭವಾದ ಬಳಿಕ ಸಿಲ್ಕ್ ಬೋರ್ಡಿನಲ್ಲಿ ಕಾರುಗಳ ಸಂಚಾರ ದಟ್ಟಣೆ ಶೇ 37ರಷ್ಟು ಕಡಿಮೆ ಆಗಿದೆ ಎಂದು ಸರ್ಕಾರವೇ ಹೇಳಿದೆ. ಇದನ್ನೇ ಗಮನಿಸುವುದಾದರೆ ಮೆಟ್ರೋ ಹೆಚ್ಚಿಸಬೇಕೇ ಅಥವಾ ಸುರಂಗ ಮಾರ್ಗ ಮಾಡಬೇಕೇ?

ನೇರಳೆ ಮೆಟ್ರೋ ಮಾರ್ಗದಿಂದ ಶೇ 12 ರಿಂದ 14ರಷ್ಟು ಸಾರಿಗೆ ದಟ್ಟಣೆ ಕಡಿಮೆಯಾಗಿದೆ. ಬೆಂಗಳೂರಿಗೆ 300 ಕಿ.ಮೀ ಮೆಟ್ರೋ ಆಗಬೇಕು. ಪ್ರತಿ 3 ನಿಮಿಷಕ್ಕೊಂದು ಮೆಟ್ರೋ ರೈಲು ಓಡಾಡುವಂತಿರಬೇಕು. 300 ಕಿಮೀ ಮೆಟ್ರೋ ಮಾರ್ಗ ಇದ್ದಾಗ ಬೆಂಗಳೂರಿನ ಯಾವುದೇ ಜಾಗದಲ್ಲಿದ್ದರೂ ಕಾಲ್ನಡಿಗೆಯಲ್ಲಿ 5 ನಿಮಿಷ ಹೋದಾಗ ಮೆಟ್ರೋ ಸ್ಟೇಷನ್ ಲಭಿಸುತ್ತದೆ. ಇದರಿಂದ ಯಾರೂ ಟ್ರಾಫಿಕ್‍ನಲ್ಲಿ ಬಳಲುವ ಸಾಧ್ಯತೆ ಇಲ್ಲ. ಖಾಸಗಿ ವಾಹನ ಮನೆಯಲ್ಲಿಟ್ಟು ಮೆಟ್ರೋದಲ್ಲಿ ಓಡಾಡುತ್ತಾರೆ ಎಂದು ತಿಳಿಸಿದರು.

1 ಕೋಟಿ ಜನ ಸಮೂಹ ಸಾರಿಗೆಯಲ್ಲಿ ಪ್ರಯಾಣ

ರಾಜ್ಯದಲ್ಲಿ ಸಬರ್ಬನ್ ರೈಲು ಯೋಜನೆ ನಿಂತು ಹೋಗಿದೆ. ಮೆಟ್ರೋ ಮತ್ತು ಸಬರ್ಬನ್ ರೈಲು ಯೋಜನೆ ಪೂರ್ಣಗೊಂಡರೆ 50 ಲಕ್ಷ ಮಂದಿ ಈ ಸಾರಿಗೆ ವ್ಯವಸ್ಥೆಯಲ್ಲಿ ಸಂಚಾರ ಮಾಡಲಿದ್ದಾರೆ. 45 ಲಕ್ಷ ಮಂದಿ ಈಗಾಗಲೇ ಬಿಎಂಟಿಸಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಅತಿ ಕಡಿಮೆ ವೆಚ್ಚದಲ್ಲಿ ಟ್ರ್ಯಾಮ್‌ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ. ರಿಂಗ್‌ ರೈಲ್ವೆ ವ್ಯವಸ್ಥೆಗೆ ಕೇಂದ್ರ ಸರ್ಕಾರ ಅನುದಾನ ನೀಡಲಿದೆ ಎಂದು ತೇಜಸ್ವಿ ಹೇಳಿದರು.

ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಇದ್ದರು.

43 ಸಾವಿರ ಕೋಟಿ ಬೇರೆ ಯೋಜನೆಗೆ ಬಳಸಿ

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುದಾನ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಸದ್ಯ ಟನಲ್‌ ಯೋಜನೆಗೆ ಮೀಸಲಿಟ್ಟಿರುವ 43 ಸಾವಿರ ಕೋಟಿ ರು. ಹಣದಲ್ಲಿ 18 ಸಾವಿರ ಕೋಟಿ ರು. ಬಳಕೆ ಮಾಡಿದರೆ ಹೊಸದಾಗಿ 78 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣ ಮಾಡಬಹುದಾಗಿದೆ. 8 ಸಾವಿರ ಕೋಟಿ ವೆಚ್ಚ ಮಾಡಿದರೆ 55 ಕಿ.ಮೀ ಟ್ರ್ಯಾಮ್‌ ಸಾರಿಗೆ ವ್ಯವಸ್ಥೆ ಮಾಡಬಹುದು. 8 ಸಾವಿರ ಕೋಟಿ ರು, ವೆಚ್ಚ ಮಾಡಿದರೆ ಹೊಸ 5,600 ಹೊಸ ಬಸ್‌ ಖರೀದಿಸಬಹುದು. 5 ಸಾವಿರ ಕೋಟಿ ರು, ಬಳಕೆ ಮಾಡಿದರೆ 286 ಕಿ.ಮೀ ರಸ್ತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ. 2,500 ಕೋಟಿ ರು. ನವೋದ್ಯಮ ಕಂಪನಿಗೆ ನೀಡಿದರೆ ಎಲ್ಲ ಸಾರಿಗೆ ವ್ಯವಸ್ಥೆ ಒಂದೇ ಸೂರಿನಡಿ ತರಬಹುದಾಗಿದೆ. ಮುಂದಿನ 2 ರಿಂದ 3 ವರ್ಷದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಬದಲಾವಣೆ ತರಬಹುದಾಗಿದೆ ಎಂದು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ