ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು, ಇದೀಗ ವರದಿಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಮುಂದಾಗಿದೆ.
ಬೆಂಗಳೂರು : ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು, ಇದೀಗ ವರದಿಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಮುಂದಾಗಿದೆ.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆ ಹೆಚ್ಚಾಗಿದ್ದರೂ ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಮೀಕ್ಷೆಯಲ್ಲಿ ಸಮುದಾಯವನ್ನು ಸರಿಯಾಗಿ ‘ಲೆಕ್ಕ’ ಹಾಕಿಲ್ಲ. ವೈಜ್ಞಾನಿಕ ಸಮೀಕ್ಷೆ ನಡೆದಿಲ್ಲ. ಮನೆ-ಮನೆಗೆ ಗಣತಿಕಾರರು ಸರಿಯಾಗಿ ಭೇಟಿ ನೀಡಿಲ್ಲ ಎಂದು ಮಹಾಸಭೆಯು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿತ್ತು.
ಇದೀಗ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವರದಿ ಮಂಡನೆಯಾಗಿದ್ದು, ಜಾತಿವಾರು ಜನಸಂಖ್ಯೆಯ ಅಂಕಿ- ಅಂಶಗಳು ಬಹಿರಂಗವಾಗಿವೆ. ಇದರಲ್ಲಿ ವೀರಶೈವ ಲಿಂಗಾಯತರ ಸಂಖ್ಯೆಯನ್ನು ಬಹಳಷ್ಟು ಕಡಿಮೆ ತೋರಿಸಿರುವ ಹಿನ್ನೆಲೆಯಲ್ಲಿ ಏ. 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಮುದಾಯದ ಸಚಿವರು ಯಾವ ಅಂಕಿ-ಅಂಶ ಆಧರಿಸಿ ತಮ್ಮ ವಾದ ಮಂಡಿಸಬೇಕು ಎಂದು ಸದರಿ ಸಚಿವರಿಗೆ ಮಾರ್ಗದರ್ಶನ ಮಾಡಲು ಮಹಾಸಭಾದಿಂದಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಸಚಿವರಿಗೆ ದಾಖಲೆ ನೀಡಿಕೆ:
ಈ ಹಿಂದಿನ ಆಯೋಗಗಳು ನೀಡಿದ್ದ ವರದಿಯಲ್ಲಿ ರಾಜ್ಯದಲ್ಲಿದ್ದ ಸಮುದಾಯದ ಜನಸಂಖ್ಯೆ, ಮಹಾಸಭಾದ ಬಳಿಯೂ ಇರುವ ಮಾಹಿತಿ ಮತ್ತಿತರ ದಾಖಲೆಗಳನ್ನು ಸಮಿತಿಗೆ ಮಹಾಸಭೆಯು ಹಸ್ತಾಂತರಿಸಲಿದೆ. ಸಮಿತಿಯು ತಕ್ಷಣ ಸಭೆ ಸೇರಿ ಚರ್ಚಿಸಿ ವರದಿಯೊಂದನ್ನು ಸಿದ್ಧಪಡಿಸಲಿದೆ. ಈ ವರದಿಯನ್ನು ಏ.17 ರಂದು ನಡೆಯುವ ಸಚಿವ ಸಂಪುಟ ಸಭೆಗೂ ಮುನ್ನ ಸಮುದಾಯದ ಸಚಿವರಿಗೆ ನೀಡಿ ಸಂಪುಟ ಸಭೆಯಲ್ಲಿ ಯಾವ ರೀತಿ ‘ಮಾತನಾಡಬೇಕು’ ಎಂದು ಸೂಚಿಸಲು ಮಹಾಸಭಾ ಮುಂದಾಗಿದೆ ಎಂದು ತಿಳಿದುಬಂದಿದೆ.
ಮಹಾಸಭೆಯಿಂದ ಪ್ರತ್ಯೇಕ ಗಣತಿ?
ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಅಸಮಾಧಾನ ಹೊಂದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು, ತನ್ನದೇ ಸಂಪನ್ಮೂಲ ಬಳಸಿಕೊಂಡು ಶೀಘ್ರದಲ್ಲೇ ರಾಜ್ಯಾದ್ಯಂತ ಸಮುದಾಯದ ಸಮೀಕ್ಷೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಯಾವ್ಯಾವ ತಾಲೂಕಿನಲ್ಲಿ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಮಹಾಸಭಾ ಬಳಿ ಮಾಹಿತಿ ಇದೆ. ನಿಖರ ಅಂಕಿ ಅಂಶ ಸಂಗ್ರಹಿಸಲು ಈಗಾಗಲೇ ‘ಸಾಫ್ಟ್‌ವೇರ್’ ಸಿದ್ಧಪಡಿಸಿದ್ದು ಶೀಘ್ರದಲ್ಲೇ ಸಮೀಕ್ಷೆಗೆ ಚಾಲನೆಯನ್ನೂ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.