ಭಾರತ ಕಸದ ತೊಟ್ಟಿ ಆಗಲು ಬಿಡಲ್ಲ: ಜೋಶಿ

Published : Jul 17, 2026, 09:32 AM IST
Pralhad Joshi

ಸಾರಾಂಶ

ಜಾಗತಿಕ ಮಾರುಕಟ್ಟೆಗೆ ಭಾರತವು ಕಸದ ತೊಟ್ಟಿ ಆಗಲು ಬಿಡುವುದಿಲ್ಲ. ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಆಮದು ಮಾಡಿಕೊಳ್ಳುವಂತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದರು.

 ಬೆಂಗಳೂರು :  ಜಾಗತಿಕ ಮಾರುಕಟ್ಟೆಗೆ ಭಾರತವು ಕಸದ ತೊಟ್ಟಿ ಆಗಲು ಬಿಡುವುದಿಲ್ಲ. ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಆಮದು ಮಾಡಿಕೊಳ್ಳುವಂತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದರು.

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಬ್ರಿಕ್ಸ್‌ನ 11 ಸದಸ್ಯ ರಾಷ್ಟ್ರಗಳ 5ನೇ ಶೃಂಗಸಭೆಗೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುಣಮಟ್ಟದ ವಸ್ತುಗಳ ಆಮದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಸಾಯನಿಕಯುಕ್ತ ಮಕ್ಕಳ ಆಟಿಕೆ ಆಮದಾಗದಂತೆ ನಿರ್ಬಂಧ ವಿಧಿಸಲಾಗಿದೆ. ಆಮದು ಮಾಡಿಕೊಳ್ಳುವಾಗ ಭಾರತವು ಕಸದ ತೊಟ್ಟಿ ಆಗದಂತೆ ‘ಗುಣಮಟ್ಟ’ಕ್ಕೆ ಒತ್ತು ನೀಡಲಾಗುತ್ತಿದೆ ಎಂದು ವಿವರಿಸಿದರು.

ಆಟಿಕೆ ಉತ್ಪಾದನೆ ಹೆಚ್ಚಳ:

ಮೊದಲು ನಾವು ಶೇ.90 ರಷ್ಟು ಆಟಿಕೆಗಳನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಬೊಂಬೆಗಳ ಉತ್ಪಾದನೆ ಹೆಚ್ಚಾಗಿದ್ದು, ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಮಾವಿನಹಣ್ಣು, ತರಕಾರಿ ಮತ್ತಿತರ ವಸ್ತುಗಳನ್ನು ರಫ್ತು ಮಾಡುವವರು ಗುಣಮಟ್ಟ ಕಾಯ್ದುಕೊಳ್ಳಬೇಕು. ಇದಕ್ಕಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಯವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತವು ವಿಶ್ವಕ್ಕೆ ಆಯುರ್ವೇದವನ್ನು ಕೊಡುಗೆಯಾಗಿ ನೀಡಿದ್ದು ಗುಣಮಟ್ಟಕ್ಕೆ ಸಂಬಂಧಿಸಿ ನಿಯಮಗಳನ್ನು ರೂಪಿಸುವ ಅಗತ್ಯವಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಮಿತಿ ರಚಿಸಿದ್ದು, ಆರ್ಯುವೇದ ಔಷಧಿಗಳ ಗುಣಮಟ್ಟ ಕುರಿತು ಸಮಿತಿ ವರದಿ ನೀಡಲಿದೆ. ನಂತರ ಜಾಗತಿಕ ಮಟ್ಟಕ್ಕೆ ನಿಯಮಗಳನ್ನು ರೂಪಿಸಲಾಗುವುದು ಎಂದರು.

11 ರಾಷ್ಟ್ರಗಳ ಒಕ್ಕೂಟ:

ಭಾರತ, ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಯುಎಇ ಸೇರಿ 11 ರಾಷ್ಟ್ರಗಳು ಬ್ರಿಕ್ಸ್‌ನಡಿ ಬರಲಿವೆ. ಸದಸ್ಯ ರಾಷ್ಟ್ರಗಳ ನಡುವೆ ಗುಣಮಟ್ಟದ ವಿಷಯದಲ್ಲಿ ಸಹಕಾರ ಬಲಪಡಿಸುವುದು ಈ ಸಭೆ ಪ್ರಮುಖ ಉದ್ದೇಶ. ಭಾರತವು ಈ ಸಭೆ ಅಧ್ಯಕ್ಷತೆ ವಹಿಸುತ್ತಿರುವುದು ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಾಗತಿಕ ವ್ಯಾಪಾರದ ಸುಮಾರು ಶೇ.26 ರಷ್ಟು ಪಾಲು

ಬ್ರಿಕ್ಸ್, ವಿಶ್ವದ ಜನಸಂಖ್ಯೆಯ ಶೇ.49.5 ರಷ್ಟು, ಜಾಗತಿಕ ಜಿಡಿಪಿಯ ಶೇ.40 ಮತ್ತು ಜಾಗತಿಕ ವ್ಯಾಪಾರದ ಸುಮಾರು ಶೇ.26 ರಷ್ಟು ಪಾಲು ಪ್ರತಿನಿಧಿಸುತ್ತಿದೆ. ಭಾರತದಲ್ಲಿ ‘ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಐಎಸ್‌)’ ರಾಷ್ಟ್ರೀಯ ಗುಣಮಟ್ಟ ಸಂಸ್ಥೆಯು ಸುಮಾರು 8 ದಶಕಗಳಿಂದಲೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ ವಾಣಿಜ್ಯ ಚಟುವಟಿಕೆಗಳನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಡೈರೆಕ್ಟರ್‌ ಜನರಲ್‌ ಸಂಜಯ್‌ ಗರ್ಗ್‌, ಅಧಿಕಾರಿಗಳಾದ ರೀನಾ ಗರ್ಗ್‌, ಶಂಭು ಎಲ್‌. ಅಕ್ಕಿ, ನಿಧಿ ಖರೆ ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರಿ ಕಚೇರಿಗಳಲ್ಲಿ ನೀರು, ವಿದ್ಯುತ್‌ ಮಿತಬಳಕೆಗೆ ಸೂಚನೆ
7ನೇ ಕ್ಲಾಸ್‌ವರೆಗೆ ಇಂಗ್ಲಿಷ್‌ ಮೀಡಿಯಂ, ಎಂಟನೇ ತರಗತಿಗೆ ಕನ್ನಡ ಮಾಧ್ಯಮ!