ತ.ನಾಡಿಗೆ 2000 ಕ್ಯು. ನೀರಷ್ಟೇ ಬಿಡ್ತೀವಿ : ರಾಜ್ಯ

Published : Oct 03, 2026, 06:51 AM IST
KRS Dam

ಸಾರಾಂಶ

ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಬರ ಪರಿಸ್ಥಿತಿ ಮತ್ತು ಜಲಾಶಯಗಳಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ ದಿನಕ್ಕೆ 4000 ಕ್ಯುಸೆಕ್‌ನಿಂದ 2000 ಕ್ಯುಸೆಕ್‌ಗೆ ಇಳಿಸುವಂತೆ ಕೋರಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಅಧಿಕೃತ ಮನವಿ

ಬೆಂಗಳೂರು : ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಬರ ಪರಿಸ್ಥಿತಿ ಮತ್ತು ಜಲಾಶಯಗಳಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ ದಿನಕ್ಕೆ 4000 ಕ್ಯುಸೆಕ್‌ನಿಂದ 2000 ಕ್ಯುಸೆಕ್‌ಗೆ ಇಳಿಸುವಂತೆ ಕೋರಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ರಾಜ್ಯ ಸರ್ಕಾರ ಅಧಿಕೃತ ಮನವಿ ಸಲ್ಲಿಸಿದೆ.

ಕಳೆದ ಸೆ.24ರಂದು ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಮುಂದಿನ 15 ದಿನಗಳ ಕಾಲ ತಮಿಳುನಾಡಿನ ಬಿಳಿಗುಂಡ್ಲುವಿಗೆ ದಿನಕ್ಕೆ 4000 ಕ್ಯುಸೆಕ್‌ ನೀರು ಹರಿಸಲು ಪ್ರಾಧಿಕಾರ ನಿರ್ದೇಶನ ನೀಡಿತ್ತು. ಸದ್ಯದ ಸ್ಥಿತಿಯಲ್ಲಿ ಆ ಆದೇಶವನ್ನು ಮರುಪರಿಶೀಲಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮುಗಿದಿದ್ದು, ಕೆಆರ್‌ಎಸ್‌, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕುಸಿದಿದೆ. ಪ್ರಸ್ತುತ ನಾಲ್ಕೂ ಜಲಾಶಯಗಳಲ್ಲಿ ಬಳಕೆಗೆ ಲಭ್ಯವಿರುವ ನೀರು ಕೇವಲ 49 ಟಿಎಂಸಿ ಮಾತ್ರ. 2027ರ ಜೂನ್‌ವರೆಗೆ ರಾಜ್ಯದ ಕುಡಿಯುವ ನೀರಿನ ಅಗತ್ಯ, ಪರಿಸರ ಸಂರಕ್ಷಣೆ ಮತ್ತು ನೀರು ಆವಿಯಾಗುವಿಕೆಯ ನಷ್ಟ ಸರಿದೂಗಿಸಲು ಪ್ರಸ್ತುತ ಇರುವ ನೀರನ್ನು ಎಚ್ಚರಿಕೆಯಿಂದ ಕಾಯ್ದಿರಿಸುವ ಅನಿವಾರ್ಯತೆಯಿದೆ. ಹೀಗಾಗಿ ತಮಿಳುನಾಡಿಗೆ ದಿನಕ್ಕೆ 4000 ಕ್ಯುಸೆಕ್‌ ಬದಲು 2000 ಕ್ಯುಸೆಕ್‌ ಹರಿಸಲು ಆದೇಶ ಮಾರ್ಪಡಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ನಿರ್ಧಾರ ಮರುಪರಿಶೀಲಿಸಲು ಮನವಿ:

ಕಾವೇರಿ ಕಣಿವೆಯ 47 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಆದರೂ, ಪ್ರಸಕ್ತ ಜಲ ವರ್ಷದಲ್ಲಿ ಈವರೆಗೆ ಪ್ರಾಧಿಕಾರದ ಎಲ್ಲ ನಿರ್ದೇಶನಗಳನ್ನು ಕರ್ನಾಟಕ ಕಟ್ಟುನಿಟ್ಟಾಗಿ ಪಾಲಿಸಿದೆ.

44.21 ಟಿಎಂಸಿ ನೀರು ದಾಖಲಾಗಿದೆ

ಈ ವರ್ಷದ ಜೂ.1ರಿಂದ ಸೆ.30ರವರೆಗೆ ಬಿಳಿಗುಂಡ್ಲುವಿನಲ್ಲಿ 44.21 ಟಿಎಂಸಿ ನೀರು ದಾಖಲಾಗಿದೆ. ಅಲ್ಲದೆ, ತಮಿಳುನಾಡಿಗೆ ಈಶಾನ್ಯ ಮಾನ್ಸೂನ್‌ ಅನುಕೂಲವಾಗಲಿದ್ದು, ಈ ಬಾರಿ ಈಶಾನ್ಯ ಮಾನ್ಸೂನ್‌ ಸಾಮಾನ್ಯ ಅಥವಾ ಉತ್ತಮವಾಗಿರುವ ಸಾಧ್ಯತೆಗಳಿವೆ. ಇದರಿಂದ ತಮಿಳುನಾಡು ಭಾಗದಲ್ಲಿ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಕೆಆರ್‌ಎಸ್‌, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಿಡಬ್ಲ್ಯುಎಂಎ ತನ್ನ ಹಿಂದಿನ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಯುದ್ಧಪೀಡಿತ ಪ್ರದೇಶದಂತಿರುವ ಇಂದಿರಾ ನಗರ ಪುಟ್‌ಪಾತ್!
ಹೆಬ್ಬಾಳ ಎಲಿವೇಟೆಡ್‌ನಿಂದ ಹಾನಿ ಇಲ್ಲ : ಬಿಡಿಎ