;Resize=(412,232))
ವಿಧಾನ ಪರಿಷತ್ : ‘ಯಾವ ದೇವರಿಗೆ ಪೂಜೆ ಮಾಡಿಸಿಕೊಂಡು ಬಂದಿದ್ದೀರಿ ನಮಗೂ ಸ್ವಲ್ಪ ಹೇಳಿ. ನಾವೂ ಅಲ್ಲೇ ಹೋಗಿ ಪೂಜೆ ಮಾಡಿಸಿಕೊಂಡು ಬರ್ತೇವೆ..!’
ಇದು ಅನುದಾನಿತ ಶಿಕ್ಷಕರ ಬಡ್ತಿ ಸೇರಿ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವ ವೇಳೆ ಸದಸ್ಯರೆಲ್ಲರೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಸದಸ್ಯ ಸಿ.ಟಿ.ರವಿ ಸಚಿವರನ್ನು ಕೇಳಿದ ಬಗೆ.
ಅನುದಾನಿತ ಶಿಕ್ಷಕರ ಸಮಸ್ಯೆಗಳ ಕುರಿತು ಭೋಜೇಗೌಡ, ಪುಟ್ಟಣ್ಣ, ಸಂಕನೂರು ಸೇರಿ ಹಲವು ಸದಸ್ಯರು ಸದನದ ಗಮನಕ್ಕೆ ತಂದರು. ಜತೆಗೆ ಮಧು ಬಂಗಾರಪ್ಪ ತೆಗೆದುಕೊಂಡು ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಗ ಮಧ್ಯಪ್ರವೇಶಿಸಿದ ಸಿ.ಟಿ.ರವಿ, ಇವತ್ತು ಯಾವ ದೇವರಿಗೆ ಪೂಜೆ ಮಾಡಿಸಿಕೊಂಡು ಬಂದಿದ್ದು, ನಿಮ್ಮನ್ನು ಇಷ್ಟೊಂದು ಹೊಗಳ್ತಾ ಇದ್ದಾರೆ. ಏನಾದರೂ ಮ್ಯಾಚ್ ಫಿಕ್ಸಿಂಗ್ ಆಗಿದೆಯಾ? ಎಂದರು.
ಇನ್ನು ಸಭಾಪತಿ ಸ್ಥಾನದಲ್ಲಿದ್ದ ಕೆ.ಪ್ರಾಣೇಶ ಅವರು, ಮಧು ಬಂಗಾರಪ್ಪ ಅವರು ಕುಳಿತ ಆಸನದ ವಾಸ್ತು ಚೆನ್ನಾಗಿರಬಹುದು. ಅಲ್ಲೇ ಕುಳಿತಂದಿನಿಂದಲೂ ಅವರ ಮೇಲೆ ಆರೋಪಗಳು ಬರುತ್ತಿಲ್ಲ ಎಂದು ಕಿಚಾಯಿಸಿದರು. ಅದಕ್ಕೆ ಮಧು ಬಂಗಾರಪ್ಪ, ಇಲ್ಲಿಗೆ ಬರುವ ಮುನ್ನವೇ ಯಾರ್ಯಾರು ಪ್ರಶ್ನೆ ಕೇಳಿದ್ದರೋ ಆ ಸದಸ್ಯರೊಂದಿಗೆ ಸಭೆ ನಡೆಸಿ, ಇಲಾಖೆ ಕೈಗೊಂಡ ಕ್ರಮದ ಬಗ್ಗೆ ವಿವರಿಸಿದ್ದೆ ಅಷ್ಟೇ ಸಾರ್, ನಾನು ವಾಸ್ತು ನಂಬುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಜತೆಗೆ ನಾ ಯಾವ ದೇವರಿಗೂ ಪೂಜೆ ಮಾಡಿಲ್ಲ. ಆದರೆ ಈ ಇಲಾಖೆಗೆ ಬಂದ ಮೇಲೆ ಮಕ್ಕಳನ್ನೇ ದೇವರೆಂದು ಭಾವಿಸಿ ಕೆಲಸ ಮಾಡುತ್ತಿದ್ದೇನಷ್ಟೇ ಎಂದು ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದರು.
ಮಕ್ಕಳು ಮತದಾರರಾಗಿದ್ದರೆ, ಅವರ ಬಗ್ಗೆ ಹಾಗೂ ಶಾಲೆಗಳಿಗೆ ಮೂಲಸೌಲಭ್ಯಗಳ ಕಲ್ಪಿಸುವ ಬಗ್ಗೆಯೂ ಚರ್ಚೆಯಾಗ್ತಾ ಇತ್ತು ಅಲ್ವೆ?. ಇದು ಸದಸ್ಯ ಎನ್.ರವಿಕುಮಾರ್ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕಾಲೆಳೆದ ಪರಿ.
ಪರಿಷತ್‌ನಲ್ಲಿ ಬರೀ ಶಿಕ್ಷಕರ ಸಮಸ್ಯೆ ಬಗ್ಗೆ ಚರ್ಚೆಯಾಗುತ್ತಿತ್ತು. ಆಗ ಎನ್.ರವಿಕುಮಾರ್ ಮಧ್ಯೆ ಪ್ರವೇಶಿಸಿ, ಶಿಕ್ಷಕರ ಸಮಸ್ಯೆ ಬಗ್ಗೆ ಚರ್ಚೆಯಾಗುತ್ತಿದೆ ಒಳ್ಳೆಯದೇ. ಆದರೆ ಮಕ್ಕಳ ಬಗ್ಗೆ ಚರ್ಚೆಯಾಗುವುದೇ ಇಲ್ಲ. ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ಕುರಿತು ಚರ್ಚೆಯಾಗಲ್ಲ. ಒಂದು ವೇಳೆ ಮಕ್ಕಳು ಏನಾದರೂ ಮತದಾರರಾಗಿದ್ದರೆ ಚರ್ಚೆಯಾಗುತ್ತಿತ್ತು ಏನೋ? ಎಂದರು. ಅದಕ್ಕೆ ಸಚಿವರು, ಮಕ್ಕಳ ಬಗ್ಗೆಯೂ ಅಷ್ಟೇ ನಮ್ಮ ಸರ್ಕಾರಕ್ಕೆ ಕಾಳಜಿ ಇದೆ ಎಂದು ಸಮಾಜಾಯಿಷಿ ನೀಡಿದರು.