ಅರೆಸ್ಟ್ ವಾರೆಂಟ್ ಹೊರಡಿಸಿದ್ದರೂ ಅದಾನಿಯನ್ನು ರಕ್ಷಿಸುತ್ತಿರುವವರು ಯಾರು: ಮುಖ್ಯಮಂತ್ರಿ ಸಿದ್ದರಾಮಯ್ಯ

Published : Nov 23, 2024, 11:43 AM IST
cm siddaramaiah

ಸಾರಾಂಶ

ಅರೆಸ್ಟ್ ವಾರೆಂಟ್ ಹೊರಡಿಸಿದ್ದರೂ ಉದ್ಯಮಿ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರು : ಅರೆಸ್ಟ್ ವಾರೆಂಟ್ ಹೊರಡಿಸಿದ್ದರೂ ಉದ್ಯಮಿ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ಪದೇ ಪದೆ ಹರಾಜಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಅದಾನಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ. ನಿಮಗೆ ಗೊತ್ತಿಲ್ವಾ? ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.ಸರ್ಕಾರಿ ನೌಕರರಿಗೆ, ತೆರಿಗೆ ಕಟ್ಟುವವರಿಗೆ

ಬಿಪಿಎಲ್ ಕಾರ್ಡ್ ಕೊಡಬೇಕಾ?:

ವಕ್ಫ್‌ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಸರ್ಕಾರಿ ನೌಕರರಿಗೂ, ಬಿಪಿಎಲ್‌ ಕಾರ್ಡ್‌ ಕೊಡಬೇಕಾ?. ಆದಾಯ ತೆರಿಗೆ ಕಟ್ಟುವವರಿಗೆ ಬಿಪಿಎಲ್‌ ಕಾರ್ಡ್ ಕೊಡಬೇಕಾ? ಎಂದು ಕಿಡಿಕಾರಿದರು.

ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡಬಾರದು ಅಂತ ನಿಯಮಾವಳಿ, ಗೈಡ್ ಲೈನ್ ರಚಿಸಿದ್ದೇ ಬಿಜೆಪಿ‌. ಈಗ ನಾವು ಅಂಥವರ ಬಿಪಿಎಲ್‌ ಕಾರ್ಡ್‌ ರದ್ದು ಮಾಡುತ್ತಿದ್ದಂತೆ ಬಿಜೆಪಿಯವರೇ ಪ್ರತಿಭಟನೆ ಮಾಡಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು. ಇದನ್ನು ಬಿಜೆಪಿ ವಿರೋಧಿಸಿತ್ತು. ಹಿಂದಿನ‌ ಕೇಂದ್ರ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರು ಆಹಾರ ಭದ್ರತೆ ಕಾಯ್ದೆಯನ್ನು ವಿರೋಧಿಸಿದ್ದರು. ಈಗ ಅನ್ಯಾಯ ಅನ್ಯಾಯ ಅಂತ ಸುಳ್ ಸುಳ್ಳೇ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಮೊದಲಿಗೆ ರಾಜ್ಯದ ಜನರಿಗೆ ಏಳು ಕೆ.ಜಿ. ಅಕ್ಕಿ ಕೊಟ್ಟವರು ನಾವು. ಇದನ್ನು ಐದು ಕೆ.ಜಿ.ಗೆ ಇಳಿಸಿದ್ದು ಯಡಿಯೂರಪ್ಪ. ಈಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ ಈ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅಕ್ಕಿ ಪ್ರಮಾಣವನ್ನು ಐದು ಕೆ.ಜಿ.ಗೆ ಇಳಿಸಿದ್ದನ್ನು ಹತ್ತು ಕೆ.ಜಿ.ಗೆ ಏರಿಸಿದ್ದು ನಾವು. ಈ ಸತ್ಯ ರಾಜ್ಯದ ಜನರಿಗೆ ಗೊತ್ತಿದೆ ಎಂದರು.

ನಬಾರ್ಡ್ ಮೂಲಕ ರೈತರಿಗೆ ಅನ್ಯಾಯವಾದರೂ ಮಣ್ಣಿನ ಮಗ ಎಚ್ಡಿಕೆ ಏನು ಮಾಡುತ್ತಿದ್ದಾರೆ?:

ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಿಎಂ, ನಬಾರ್ಡ್ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದು ಸರಿ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮಣ್ಣಿನ ಮಗ ಎಚ್.ಡಿ.ಕುಮಾರಸ್ವಾಮಿ ಅವರು ಏನ್ ಮಾಡ್ತಾ ಇದಾರೆ ಎಂದು ಪ್ರಶ್ನಿಸಿದರು.

ಪ್ರಹ್ಲಾದ್ ಜೋಶಿಯವರು ಈ ಅನ್ಯಾಯ ಸರಿ ಎಂದು ಹೇಳಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ರೈತರಿಗೆ ಕೇಂದ್ರ ಅನ್ಯಾಯ ಮಾಡಿದ್ದು ಸರಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದರೆ ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಎಚ್.ಡಿ.ಕುಮಾರಸ್ವಾಮಿಯವರು ಉಸಿರೇ ಬಿಡ್ತಿಲ್ಲವಲ್ಲ ಏಕೆ ಎಂದು ಪ್ರಶ್ನಿಸಿದರು.

ರಾಜ್ಯದ ರೈತರಿಗೆ ಕೇಂದ್ರ ಮಾಡಿದ ಅನ್ಯಾಯ ಸರಿಯಾ?. ರೈತರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ಶೇ. 58 ರಷ್ಟು ರಾಜ್ಯಕ್ಕೆ ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ ಎಂದರು.

ವರ್ಷದಿಂದ ವರ್ಷಕ್ಕೆ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಕೊಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಆದರೆ ಈ ಬಾರಿ ಕಡಿತಗೊಳಿಸಿದೆ. ರೈತರಿಗೆ ಶೇ.4.5 ಬಡ್ಡಿದರದಲ್ಲಿ ನಬಾರ್ಡ್ ರಾಜ್ಯದ ರೈತರಿಗೆ ಸಾಲ ಕೊಡುತ್ತದೆ. ಈ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೆ ಈಗ ನಬಾರ್ಡ್ ಸಾಲದ ಪ್ರಮಾಣ ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕ್ ಗಳ ಬಳಿ ಸಾಲಕ್ಕೆ ಹೋಗಿ ಶೇ.10 ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕೆ ಆಗುವ ನಷ್ಟ ಎಂದರು.

ಇಷ್ಟು ದೊಡ್ಡ ಪ್ರಮಾಣದ ಅನ್ಯಾಯವನ್ನು ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಿಂದಲೇ ಆಯ್ಕೆ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಅನ್ಯಾಯ ಸರಿ ಪಡಿಸಿ ಎಂದು ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಲಿ ಎಂದು ಅವರು ಸವಾಲು ಹಾಕಿದರು.‌

ರಾಜ್ಯದಲ್ಲಿ ಮೂರೂ ಸ್ಥಾನ ಗೆಲ್ತೇವೆ:

ಉಪ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಗೆಲ್ಲುತ್ತೇವೆ. ಚನ್ನಪಟ್ಟಣದಲ್ಲೂ ಗೆಲ್ಲುತ್ತೇವೆ. ಎಷ್ಟು ಅಂತರದಲ್ಲಿ ಎಂದು ಹೇಳಲು ಸಾಧ್ಯವಿಲ್ಲ. ನಾನು ಶಾಸ್ತ್ರ ಹೇಳುವುದಿಲ್ಲ. ನಾನೂ ಎರಡು ದಿನ ಅಲ್ಲಿ ಪ್ರಚಾರ ಮಾಡಿದ್ದೇನೆ ಎಂದರು.

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಕ್ಲೋಸ್‌ ಫೈಟ್ ಇದೆ. ರಾಜ್ಯದಲ್ಲಿ ನಡೆದಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲೂ ನಾವು ಗೆಲ್ತೇವೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು. ಗೆಲುವಿಗೆ ಹತ್ತಿರದಲ್ಲಿದ್ದೇವೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ನಾನು ಎಲ್ಲಾ ಕಡೆ ಪ್ರಚಾರಕ್ಕೆ ಹೋಗಿಲ್ಲ, ಹಾಗಾಗಿ ಹೆಚ್ಚು ಗೊತ್ತಿಲ್ಲ ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೃತಕ ಬುದ್ದಿಮತ್ತೆ ಯುಗದಲ್ಲಿ ಕೌಶಲ್ಯಕ್ಕೆ ಮನ್ನಣೆ
ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ