‘ಜೀಪ್‌ ರೇಸ್‌’ ನಡೆಸುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ -ಸಕಲೇಶಪುರದ ಬೆಳ್ಳೂರು ಗ್ರಾಮದಲ್ಲಿ ಘಟನೆ

ಸಾರಾಂಶ

ಅರಣ್ಯ ಪ್ರದೇಶದಲ್ಲಿ ಜೀಪ್‌ ರೇಸ್‌ ನಡೆಯುವಾಗ ಕಾಡಾನೆಯೊಂದು ದಾಳಿ ಮಾಡಿದ್ದು, ಒಂಟಿಸಲಗದ ದಾಳಿಯಿಂದ ಯುವಕನೊಬ್ಬ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

 ಹಾಸನ : ಅರಣ್ಯ ಪ್ರದೇಶದಲ್ಲಿ ಜೀಪ್‌ ರೇಸ್‌ ನಡೆಯುವಾಗ ಕಾಡಾನೆಯೊಂದು ದಾಳಿ ಮಾಡಿದ್ದು, ಒಂಟಿಸಲಗದ ದಾಳಿಯಿಂದ ಯುವಕನೊಬ್ಬ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

ಕೇರಳದಿಂದ ಬಂದ ಕೆಲವರು ಸಕಲೇಶಪುರ ತಾಲೂಕಿನ ಬೆಳ್ಳೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ರಜಾದಿನವಾದ ಭಾನುವಾರ ಜೀಪ್‌ ರೇಸ್‌ ಆಯೋಜಿಸಿದ್ದರು. ಕೇರಳದ ಕೆಲ ಶ್ರೀಮಂತರು ಸೇರಿ ಇಲ್ಲಿನ ಅರಣ್ಯ ಪ್ರದೇಶಕ್ಕೆ ಬಂದು, ಮೋಜಿಗಾಗಿ ಈ ಜೀಪ್‌ ರೇಸ್‌ ಆಯೋಜನೆ ಮಾಡಿದ್ದು, ಅದರಲ್ಲಿ ಈ ಯುವಕ ಭಾಗವಹಿಸಿದ್ದ. ಕೇರಳದಿಂದ ಸುಮಾರು ಹತ್ತು ಜೀಪುಗಳು ಹಾಗೂ ಚಾಲಕರು ಈ ರೇಸ್‌ಗೆ ಸ್ಪರ್ಧಿಗಳಾಗಿ ಆಗಮಿಸಿದ್ದರು.

ಆಯೋಜಕರು ರೇಸ್‌ಗಾಗಿ ಟ್ರ್ಯಾಕ್‌ ನಿರ್ಮಿಸಿ, ಟೆಂಟ್‌ಗಳನ್ನೂ ಹಾಕಿದ್ದರು. ಆದರೆ, ಇದಕ್ಕಾಗಿ ಅರಣ್ಯ ಇಲಾಖೆಯ ಅನುಮತಿ ಪಡೆದಿರಲಿಲ್ಲ. ಅಕ್ರಮವಾಗಿ ಈ ಜೀಪ್‌ ರೇಸ್‌ ಆಯೋಜನೆಯಾಗಿತ್ತು. ಹೀಗಾಗಿ, ಯಾವುದೇ ಮುನ್ನೆಚ್ಚರಿಕೆ, ಸುರಕ್ಷಿತ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹೇಮಾವತಿ ನದಿ ದಡದ ಬಯಲಿನಲ್ಲಿ ಈ ಜೀಪ್ ಡರ್ಟ್ ರೇಸ್ ಆಯೋಜನೆಯಾಗಿತ್ತು.

ರೇಸ್‌ ಆರಂಭವಾಗುತ್ತಿದ್ದಂತೆ ಜೀಪುಗಳ ಶಬ್ಧಕ್ಕೆ ಕಾಡಾನೆಯೊಂದು ಗಲಿಬಿಲಿಗೊಂಡಿತು. ಇದ್ದಕ್ಕಿದ್ದಂತೆ ಓಡುತ್ತಾ ಬಂದು ಜೀಪ್‌ ಮೇಲೆ ದಾಳಿ ಮಾಡಿತು. ಜೀಪ್‌ವೊಂದರಲ್ಲಿದ್ದ ಯುವಕನನ್ನು ಅಟ್ಟಾಡಿಸಿ, ತುಳಿಯಲು ಈ ಒಂಟಿಸಲಗ ಯತ್ನಿಸಿತು. ಇದರಿಂದ ಭಯಭೀತನಾದ ಯುವಕ, ಕಾಡಾನೆ ಅಟ್ಟಾಡಿಸುವಾಗ ಧೈರ್ಯದಿಂದ ಜೀಪನ್ನು ಹಿಂದೆ, ಮುಂದೆ ಓಡಾಡಿಸಿ, ಜೀವ ಉಳಿಸಿಕೊಂಡ. ಈ ವೇಳೆ ಅಲ್ಲಿದ್ದವರು ಈತನ ಸಹಾಯಕ್ಕೆ ಬಂದರು.

ಉಳಿದ ಸ್ಪರ್ಧಿಗಳು ಜೋರಾಗಿ ಕಿರುಚುತ್ತಾ, ಜೋರಾಗಿ ವಾಹನಗಳ ಹಾರ್ನ್ ಹೊಡೆಯುತ್ತಾ ಕಾಡಾನೆಯನ್ನು ಓಡಿಸಲು ಯತ್ನಿಸಿದರು. ಜನರ ಕಿರುಚಾಟ ಹಾಗೂ ಜೀಪುಗಳ ಕರ್ಕಶ ಶಬ್ಧದಿಂದ ಆನೆ ಹೆದರಿ ಓಡಿ ಹೋಯಿತು. ಬಳಿಕ, ಎಲ್ಲರೂ ನಿಟ್ಟುಸಿರು ಬಿಟ್ಟರು. ಬಳಿಕ, ರೇಸ್‌ ಮುಂದುವರಿಯಿತು.

ಕೇರಳ ಮೂಲದ ಈ ಯುವಕ ಸಕಲೇಶಪುರದ ಹಾನುಬಾಳ್ ನಲ್ಲಿ ವಾಸವಾಗಿದ್ದಾನೆ. ಈ ಜೀಪ್ ರೇಸ್ ಗೆ ಸ್ಪರ್ಧಿಯಾಗಿ ಬಂದಿದ್ದ. ಅದೃಷ್ಟವಶಾತ್ ಗಾಯಗೊಳ್ಳದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Share this article