ಕರ್ನಾಟಕ ವಿದ್ಯುತ್‌ ವಿತರಣೆ ಖಾಸಗಿಗೆ?

Published : May 26, 2026, 07:01 AM IST
  Electricity

ಸಾರಾಂಶ

ಖಾಸಗಿ ವಿದ್ಯುತ್‌ ಉತ್ಪಾದನೆ ಹಾಗೂ ವಿತರಣಾ ಕಂಪನಿಯಾದ ‘ದಿ ಟಾಟಾ ಪವರ್‌ ಕಂಪೆನಿ ಲಿಮಿಟೆಡ್‌’ ರಾಜ್ಯದ ಪ್ರಮುಖ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಅರ್ಜಿ ಸಲ್ಲಿಸಿದೆ.

  ಬೆಂಗಳೂರು :  ಖಾಸಗಿ ವಿದ್ಯುತ್‌ ಉತ್ಪಾದನೆ ಹಾಗೂ ವಿತರಣಾ ಕಂಪನಿಯಾದ ‘ದಿ ಟಾಟಾ ಪವರ್‌ ಕಂಪೆನಿ ಲಿಮಿಟೆಡ್‌’ ರಾಜ್ಯದ ಪ್ರಮುಖ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಅರ್ಜಿ ಸಲ್ಲಿಸಿದೆ.

ಇದನ್ನು ರಾಜ್ಯದಲ್ಲಿ ವಿದ್ಯುತ್‌ ವಿತರಣೆ ಖಾಸಗೀಕರಣದ ಪ್ರಥಮ ಹೆಜ್ಜೆ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

2003ರ ವಿದ್ಯುತ್‌ ಕಾಯ್ದೆ ಸೆಕ್ಷನ್‌ 14 ಹಾಗೂ 15ರ ಅಡಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕೆಇಆರ್‌ಸಿಗೆ ದಿ ಟಾಟಾ ಪವರ್‌ ಕಂಪನಿಯಿಂದ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಕೋರಿ ಪ್ರಕಟಣೆ ಹೊರಡಿಸಿದ್ದು, ಇದು ಖಾಸಗೀಕರಣದ ಷಡ್ಯಂತ್ರ ಎಂದು ಆರೋಪಿಸಲಾಗುತ್ತಿದೆ.

ಯಾವ್ಯಾವ ಜಿಲ್ಲೆಯ ಪರವಾನಗಿಗೆ ಅರ್ಜಿ?:

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಮತ್ತು ಚಿತ್ರದುರ್ಗ ಸೇರಿ ಆರು ಜಿಲ್ಲೆ, ಮೆಸ್ಕಾಂನ (ಮಂಗಳೂರು) ಕಂದಾಯ ಜಿಲ್ಲೆಗಳಾದ ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ವ್ಯಾಪ್ತಿಯ ಪ್ರದೇಶ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ (ಸೆಸ್ಕ್) ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಹಾಸನ, ಹೆಸ್ಕಾಂನ ಮೂರು ಕಂದಾಯ ಜಿಲ್ಲೆಗಳಾದ ಬೆಳಗಾವಿ, ಉತ್ತರ ಕನ್ನಡ ಮತ್ತು ಧಾರವಾಡ ವ್ಯಾಪ್ತಿಯಲ್ಲಿ ವಿದ್ಯುತ್‌ ವಿತರಣೆಗೆ ಪರವಾನಗಿ ಕೋರಲಾಗಿದೆ.

ಈಗಾಗಲೇ ಟಾಟಾ ಪವರ್‌ ಕಂಪನಿ ಮುಂಬೈ, ಅಜ್ಮೇರ್‌ ನಗರಗಳು ಹಾಗೂ ದೆಹಲಿ, ಒಡಿಶಾ ರಾಜ್ಯಗಳ ಗ್ರಾಹಕರಿಗೆ ವಿದ್ಯುತ್‌ ಪೂರೈಸುತ್ತಿದೆ. ಟಾಟಾ ಪವರ್‌ ಡಿಸ್ಟ್ರಿಬ್ಯೂಷನ್‌-ಮುಂಬೈ ಸಂಸ್ಥೆಯು 485 ಚ.ಕಿ.ಮೀ. ವ್ಯಾಪ್ತಿಯಲ್ಲಿ 8 ಲಕ್ಷದಷ್ಟು ಗ್ರಾಹಕರನ್ನು ಹೊಂದಿದೆ. ಈ ಅನುಭವದ ಆಧಾರದ ಮೇಲೆ ರಾಜ್ಯದಲ್ಲೂ ವಿದ್ಯುತ್‌ ವಿತರಣೆಗೆ ಮುಂದಾಗಿದ್ದು, ಆಕ್ಷೇಪಣೆ ವ್ಯಕ್ತವಾಗದಿದ್ದರೆ ಪರವಾನಗಿಯೂ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇಂಧನ ಇಲಾಖೆಯೂ ವಿದ್ಯುತ್ ವಿತರಣಾ ಕಂಪನಿಗಳಲ್ಲಿನ ಪ್ರಸರಣ ನಷ್ಟ ಮತ್ತು ಆರ್ಥಿಕ ನಷ್ಟ ತಗ್ಗಿಸಲು ಖಾಸಗೀಕರಣದತ್ತ ಆಸಕ್ತಿ ತೋರುತ್ತಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

ಕೆಪಿಟಿಸಿಎಲ್‌ ಒಕ್ಕೂಟದಿಂದ ಹೋರಾಟದ ಎಚ್ಚರಿಕೆ:

ಟಾಟಾ ಪವರ್‌ ಕಂಪನಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಕೆಇಬಿ ನೌಕರರ ವಿವಿಧ ಸಂಘಗಳ ಒಕ್ಕೂಟವು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.

ಕರ್ನಾಟಕ ವಿದ್ಯುತ್‌ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ. ಬಲರಾಮ್‌ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವಿತರಣಾ ಜಾಲದ ಪರವಾನಗಿ ಕೇಳಿರುವುದನ್ನು ಖಂಡಿಸುತ್ತೇವೆ. ರಾಜ್ಯದ ಜನತೆಯ ಆಸ್ತಿಯಾಗಿರುವ ವಿದ್ಯುತ್‌ ವಲಯವನ್ನು ಖಾಸಗೀಕರಣಗೊಳಿಸುವ ಹಿಂಬಾಗಿಲ ಯತ್ನವಿದು. ಇದು ನೌಕರರು ಮಾತ್ರವಲ್ಲದೆ ರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿದೆ. ರಾಜ್ಯದ ಸಾವಿರಾರು ಕೋಟಿ ರು. ಮೌಲ್ಯದ ವಿತರಣಾ ಜಾಲ, ಉಪಕೇಂದ್ರ, ಯಂತ್ರೋಪಕರಣ ಮೂಲಸೌಕರ್ಯ ಲೂಟಿ ಹೊಡೆಯುವ ಷಡ್ಯಂತ್ರ ಇದು. ಖಾಸಗೀಕರಣದಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ದರ ಏರಿಕೆಯ ಬರೆ ಬೀಳಲಿದೆ. ಹೀಗಾಗಿ ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಹಲವೆಡೆ ಖಾಸಗೀಕರಣ:

ಈಗಾಗಲೇ ಮುಂಬೈ, ಅಜ್ಮೇರ್‌, ಗಯಾ, ಸಮಷ್ಟಿಪುರ, ಭಾಗಲ್‌ಪುರ, ಕಾನ್ಪುರ, ಗ್ವಾಲಿಯರ್‌, ಔರಂಗಾಬಾದ್‌ನಲ್ಲಿ ಖಾಸಗೀಕರಣ ಮಾಡಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಖಾಸಗೀಕರಣ ಮಾಡಿದರೆ ಸಾರ್ವಜನಿಕರು, ರೈತರು, ಇಂಧನ ಇಲಾಖೆಯ ಉದ್ಯೋಗಿಗಳು ಎಲ್ಲರೂ ಬೀದಿಗೆ ಬರಬೇಕಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ವಕ್ತಾರ ರೇಣುಕಾ ಪ್ರಸಾದ್, ಖಾಸಗಿಕರಣಕ್ಕೆ ನಮ್ಮ ವಿರೋಧವಿದೆ. ಸ್ಥಳೀಯ ಗುತ್ತಿಗೆದಾರರು, ಉದ್ದಿಮೆದಾರರು ಬೀದಿ ಪಾಲಾಗಲಿದ್ದಾರೆ. ಉತ್ತರ ಭಾರತದ ಖಾಸಗಿಯವರಿಗೆ ರಾಜ್ಯದಲ್ಲಿ ಕೆಂಪು ಹಾಸಿಗೆ ಸ್ವಾಗತ ಕೋರುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಯಾವ್ಯಾವ ಜಿಲ್ಲೆ ಮೇಲೆ ಕಣ್ಣು?

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಹಾಸನ, ಬೆಳಗಾವಿ, ಉತ್ತರ ಕನ್ನಡ ಮತ್ತು ಧಾರವಾಡ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೊಲೆ ಕೇಸಲ್ಲಿ ಮಹಿಳೆ ಎಂಬ ಕಾರಣಕ್ಕೆ ಮಾತ್ರ ಬೇಲ್‌ ನೀಡಲಾಗುವುದಿಲ್ಲ: ಹೈಕೋರ್ಟ್‌
ಬೆಂಜ್ ಕಾರಲ್ಲಿ ಯುವಕನ ಕಿಡ್ನಾಪ್‌ ಮಾಡಿದ್ದ 6 ಆರೋಪಿಗಳ ಬಂಧನ