ಯುಜಿಸಿ ನಿಯಮಾವಳಿ -2025 ವಾಪಸ್‌ ಪಡೆಯಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

Published : Feb 06, 2025, 10:39 AM IST
Siddaramaiah

ಸಾರಾಂಶ

ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ(ಯುಜಿಸಿ) ಕರಡು ನಿಯಮಾವಳಿ-2025ರ ಮೂಲಕ ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಳಿಸುವ ಕೆಲಸ ನಡೆದಿದೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಈ ಕರಡನ್ನು ಕೂಡಲೇ ವಾಪಸ್‌ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರು: ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ(ಯುಜಿಸಿ) ಕರಡು ನಿಯಮಾವಳಿ-2025ರ ಮೂಲಕ ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಳಿಸುವ ಕೆಲಸ ನಡೆದಿದೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಈ ಕರಡನ್ನು ಕೂಡಲೇ ವಾಪಸ್‌ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಮಂಡಿನೋವಿನ ಸಮಸ್ಯೆಯಿಂದ ವಿಶ್ರಾಂತಿಯಲ್ಲಿರುವ ಅವರು, ಬುಧವಾರ ನಗರದಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಚಿವ ಸಮಾವೇಶಕ್ಕೆ ಕಳುಹಿಸಿದ್ದ ವಿಡಿಯೋ ಸಂದೇಶದಲ್ಲಿ ಈ ಆಗ್ರಹ ಮಾಡಿದ್ದಾರೆ.

ರಾಜ್ಯ ಸರ್ಕಾರಗಳಿಂದ ಸ್ಥಾಪಿತವಾದ ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರವೇ ಒಟ್ಟಾರೆ ಅಭಿವೃದ್ಧಿಗಾಗಿ, ವೇತನ ಮತ್ತು ಇತರೆ ಭತ್ಯೆಗಳು, ಮಾನವ, ಭೌತಿಕ ಮತ್ತು ತಾಂತ್ರಿಕ ಮೂಲಸೌಕರ್ಯಗಳ ಸೃಜನೆ ಮತ್ತು ನಿರ್ವಹಣೆ, ವಿದ್ಯಾರ್ಥಿಗಳಿಗೆ ನೆರವು ಕಲ್ಪಿಸುವ ಸೌಲಭ್ಯ ಇತ್ಯಾದಿಗಳನ್ನು ಒದಗಿಸುತ್ತದೆ. ಈ ಮೂಲಕ ಸಮಾಜದ ಎಲ್ಲ ವರ್ಗಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಮತ್ತು ಬದ್ಧತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಕುಲಪತಿಗಳ ನೇಮಕ, ಬೋಧಕ ವರ್ಗದ ನೇಮಕಾತಿ, ವಿದ್ಯಾರ್ಹತೆ, ಅಧಿಕಾರಾವಧಿ ಸೇರಿ ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರವನ್ನು ಮೊಟಕುಗೊಳಿಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದು ಹೇಳಿದ್ದಾರೆ.

ಯುಜಿಸಿಯ ಹೊಸ ಕರಡು ನೀತಿಗೆ ತಮ್ಮ ಸಂಪೂರ್ಣ ವಿರೋಧ ಹಾಗೂ ಅಸಮಾಧಾನವಿದೆ. ಕೇಂದ್ರದ ಈ ನಡೆ ರಾಜ್ಯ ಸರ್ಕಾರದ ಸಂಸ್ಥೆಗಳನ್ನು ಅಲಕ್ಷಿಸಿ ಶಿಕ್ಷಣದ ಮೇಲೆ ಕೇಂದ್ರದ ನಿಯಂತ್ರಣ ಸಾಧಿಸುವ ವಿಸ್ತೃತ ಕಾರ್ಯಸೂಚಿಯ ಭಾಗವಾಗಿದೆ. ಇದನ್ನು ಅನುಮೋದಿಸಿದರೆ ವಿಶ್ವವಿದ್ಯಾಲಯಗಳು ವಿದ್ವಾಂಸರಿಲ್ಲದೆ ರಾಜಕೀಯ ಆಪ್ತರಿಂದ ತುಂಬಿಹೋಗಬಹುದು. ಯುಜಿಸಿ ಮತ್ತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಉತ್ಸುಕವಾಗಿವೆ. ಯುಜಿಸಿ ತಕ್ಷಣವೇ ತನ್ನ ಕರಡು ನಿಯಮಗಳನ್ನು ಹಿಂಪಡೆದು ಯಾವುದೇ ಬದಲಾವಣೆಗಳನ್ನು ತರುವ ಮುನ್ನ ರಾಜ್ಯ ಮಟ್ಟದಲ್ಲಿ ಸಮಾಲೋಚನಾ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು