ಮದುವೆಯಾಗಿ 7 ವರ್ಷವಾದ್ರೂ ಮೊದಲ ರಾತ್ರಿಗೆ ಒಪ್ಪದೆ ಮೊಂಡಾಟ : ಮಹಿಳೆಗೆ ವಿಚ್ಛೇದನ ಕಾಯಂ

Published : Dec 09, 2024, 10:13 AM IST
Karnataka highcourt

ಸಾರಾಂಶ

ತನ್ನ ಅಂತಸ್ತಿಗೆ ತಕ್ಕಂತೆ ಆರತಕ್ಷತೆ ಮಾಡಿಕೊಡದಕ್ಕೆ ಗಂಡನ ಮೇಲೆ ಮುನಿಸಿಕೊಂಡು ಮದುವೆಯಾಗಿ ಏಳು ವರ್ಷ ಕಳೆದರೂ ಮೊದಲ ರಾತ್ರಿಗೆ ಒಪ್ಪದ ಮಹಿಳೆಗೆ ಹೈಕೋರ್ಟ್‌ ವಿಚ್ಛೇದನ ಮಂಜೂರಾತಿಯನ್ನು ಕಾಯಂಗೊಳಿಸಿದೆ.

ವೆಂಕಟೇಶ್ ಕಲಿಪಿ

 ಬೆಂಳೂರು : ತನ್ನ ಅಂತಸ್ತಿಗೆ ತಕ್ಕಂತೆ ಆರತಕ್ಷತೆ ಮಾಡಿಕೊಡದಕ್ಕೆ ಗಂಡನ ಮೇಲೆ ಮುನಿಸಿಕೊಂಡು ಮದುವೆಯಾಗಿ ಏಳು ವರ್ಷ ಕಳೆದರೂ ಮೊದಲ ರಾತ್ರಿಗೆ ಒಪ್ಪದ ಮಹಿಳೆಗೆ ಹೈಕೋರ್ಟ್‌ ವಿಚ್ಛೇದನ ಮಂಜೂರಾತಿಯನ್ನು ಕಾಯಂಗೊಳಿಸಿದೆ.

ವಿನಾ ಕಾರಣ ದೂಷಿಸುತ್ತಾ ಬೆಡ್‌ ರೂಂನಲ್ಲಿ ಪತಿ ಮೇಲೆ ಹಲ್ಲೆ ನಡೆಸಿದ ಮತ್ತು ಬೇರೊಂದು ವರನನ್ನು ಹುಡುಕಿ ವಿವಾಹವಾಗಲು ವಿಚ್ಛೇದನ ನೀಡುವಂತೆ 127 ಪುಟಗಳ ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಪತ್ನಿಯ ವರ್ತನೆಯನ್ನು ಪರಿಗಣಿಸಿದ ಹೈಕೋರ್ಟ್‌, ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ಆದೇಶ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌, ಈ ಪ್ರಕರಣದಲ್ಲಿ 2018ರ ಜುಲೈನಿಂದ 2019ರ ನವೆಂಬರ್‌ವರೆಗೆ ಪತ್ನಿ ಕಳುಹಿಸಿರುವ ವಾಟ್ಸ್‌ ಆ್ಯಪ್‌ ಸಂದೇಶಗಳನ್ನು ಪತಿ ಹೈಕೋರ್ಟ್‌ ಮುಂದಿಟ್ಟಿದ್ದಾರೆ. ಆ ಸಂದೇಶಗಳು ಬರೋಬ್ಬರಿ 127 ಪುಟಗಳಷ್ಟಿದೆ. ಪತಿಯೊಂದಿಗೆ ವೈವಾಹಿಕ ಜೀವನ ನಡೆಸಲು ಪತ್ನಿಗೆ ಆಸಕ್ತಿ ಇಲ್ಲ ಎಂಬುದು ಆಕೆ ಕಳುಹಿಸಿರುವ ಸಂದೇಶಗಳಿಂದ ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಒಂದಲ್ಲಾ ಒಂದು ಕಾರಣಕ್ಕೆ ಪತಿ, ಆತನ ಪೋಷಕರು ಮತ್ತು ಹತ್ತಿರದ ಸಂಬಂಧಿಕರನ್ನು ಪತ್ನಿ ದೂರುತ್ತಿದ್ದರು. ಅಪಘಾತದಿಂದ ತನ್ನ ತಂದೆ ಸಾವನ್ನಪ್ಪಿದರೆ, ಅದಕ್ಕೆ ಪತಿಯೇ ಹೊಣೆ ಎಂದು ದೂಷಿಸಿದ್ದಲ್ಲದೆ, ತನ್ನ ಕನಸುಗಳನ್ನು ಪತಿ ಕೊಂದಿದ್ದಾರೆ ಎಂದು ದೂರಿದ್ದಾರೆ. ವಿಚ್ಛೇದನ ನೀಡಿದರೆ ಇಬ್ಬರು ಸಂತೋಷದಿಂದ ಪ್ರತ್ಯೇಕವಾಗಿ ಜೀವಿಸಬಹುದು. ಮತ್ತೊಂದು ವರನನ್ನು ಹುಡುಕಿ ಮದುವೆಯಾಗಬಹುದು. ಈಗಾಗಲೇ ವರನನ್ನು ಹುಡುಕುವಂತೆ ಮಧ್ಯವರ್ತಿಗೂ ಹೇಳಲಾಗಿದೆ ಎಂದು ಪತ್ನಿ ಸಂದೇಶದಲ್ಲಿ ಪತಿಗೆ ಪದೇ ಪದೇ ಬಲವಂತ ಮಾಡಿದ್ದಾರೆ ಎಂದು ಹೈಕೋರ್ಟ್‌ ಆದೇಶದಲ್ಲಿ ವಿವರಿಸಿದೆ.

ಅಂತಿಮವಾಗಿ ಪತ್ನಿಯ ಈ ಎಲ್ಲಾ ಸಂದೇಶಗಳನ್ನು ನೋಡಿದರೆ, ವೈವಾಹಿಕ ಜೀವನ ನಡೆಸಲು ಆಕೆಗೆ ಆಸಕ್ತಿ ಇಲ್ಲ ಎಂಬುದನ್ನು ಯಾವುದೇ ವಿವೇಕಯುತ ಮನುಷ್ಯನಿಗೆ ಸ್ಪಷ್ಟವಾಗಿ ತಿಳಿಯುತ್ತದೆ. ಇನ್ನೂ 2017ರಲ್ಲಿ ವೈವಾಹಿಕ ಜೀವನ ನಡೆಸಲು ಪತ್ನಿ ಅವಕಾಶವೇ ನೀಡಿಲ್ಲ. ಇದರಿಂದ ಪತ್ನಿಯ ಕೈಗಳಿಂದ ಪತಿ ಕಿರುಕುಳ ಅನುಭವಿಸುವುದು, ವೈವಾಹಿಕ ಜೀವನ ದುಸ್ವಪ್ನವಾಗಿರುವುದು ಸಾಬೀತಾಗಿದೆ. ಕಿರುಕುಳ ನೀಡಲೆಂದೇ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬ ಪತಿಯ ವಾದವೂ ಸತ್ಯವಾಗಿರುವ ಸಾಧ್ಯತೆಯಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯವು ವಿವಾಹ ವಿಚ್ಛೇದನ ಮಂಜೂರಾತಿಯನ್ನು ಕಾಯಂಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣವೇನು?

ಪೋಷಕರ ನಿಶ್ಚಯದಂತೆ ರವಿ ಮತ್ತು ಸೌಮ್ಯ (ಹೆಸರು ಬದಲಿಸಲಾಗಿದೆ) 2017ರ ಸೆ.27ರಂದು ಮದುವೆಯಾಗಿದ್ದರು. ಆದರೆ, 2019ರಲ್ಲಿ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ರವಿ, ಮದುವೆ ನಂತರ ನನ್ನ ಮನಗೆ ಬಂದ ಪತ್ನಿ, ತನ್ನ ಅಂತಸ್ತು ಹಾಗೂ ಕನಸಿಗೆ ತಕ್ಕಂತೆ ಅದ್ದೂರಿಯಾಗಿ ಆರಕ್ಷತೆ ಮಾಡಿಲ್ಲ ಎಂದು ಆಕ್ಷೇಪಿಸಿ ಮೊದಲ ರಾತ್ರಿಗೆ ಒಪ್ಪಿರಲಿಲ್ಲ. ತದ ನಂತರ ಒಂದಲ್ಲ ಒಂದು ಕಾರಣ ನೀಡಿ ಮೊದಲ ರಾತ್ರಿಯನ್ನು ಮಂದೂಡುತ್ತಲೇ ಬಂದರು. ಜೊತೆಗೆ ಹಲವು ಕಾರಣ ನೀಡಿ ನನ್ನನ್ನು ನಿಂದಿಸುತ್ತಿದ್ದರು. ಕೆಲ ಸಂದರ್ಭದಲ್ಲಂತೂ ಬೆಡ್‌ ರೂಂನಲ್ಲಿ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಜತೆಗೆ, ಕಡಿಮೆ ವೇತನ ಪಡೆಯುತ್ತಿದ್ದು, ತನ್ನ ಕನಸುಗಳನ್ನು ಈಡೇರಿಸಲು ಹಣ ಖರ್ಚು ಮಾಡುವ ಪರಿಸ್ಥಿತಿಯಲ್ಲಿ ನೀನು ಇಲ್ಲ. ಹಾಗಾಗಿ, ತವರು ಮನೆಗೆ ಕಳುಹಿಸುವಂತೆ ಪತ್ನಿ ನನಗೆ ಒತ್ತಾಯಿಸುತ್ತಿದ್ದರು. ಮದುವೆ ಆದ ಕೆಲ ತಿಂಗಳ ನಂತರ ಅಪಘಾತದಿಂದ ಪತ್ನಿಯ ತಂದೆ ಸಾವನ್ನಪ್ಪಿದ್ದರೆ, ಅದಕ್ಕೂ ನಾನೇ ಕಾರಣ ಎಂದು ದೂಷಿಸಿದರು. ಸದಾ ನನ್ನನ್ನು ಅನುಮಾನಿಸುತ್ತಾ, ಫೋನ್‌ ಪರಿಶೀಲಿಸುತ್ತಿದ್ದರು. ಮಹಿಳಾ ಸಹೋದ್ಯೋಗಿ ಫೋನ್‌ನಲ್ಲಿ ಮಾತನಾಡಿದರೆ ಸಾಕು, ಅವರೊಂದಿಗೆ ಅಕ್ರಮ ಸಂಬಂಧ ಕಟ್ಟುತ್ತಿದ್ದರು. ತನಗೆ ವಿವಾಹ ಸಂಬಂಧ ಮುಂದುವರಿಸಲು ಇಷ್ಟವಿಲ್ಲ. ಅದಕ್ಕಾಗಿ ವಿಚ್ಛೇದನ ನೀಡುವಂತೆ ನನಗೆ ಒತ್ತಾಯಿಸಿ ಪತ್ನಿ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸುತ್ತಿದ್ದರು. ಆ ಮೂಲಕ ನನಗೆ ಕಿರುಕುಳ ನೀಡಿ ಜೀವನವನ್ನೇ ದುಸ್ವಪ್ನವಾಗಿಸಿದ್ದಾರೆ. ಈ ಎಲ್ಲಾ ಸಂಗತಿ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ರವಿ ಕೋರಿದ್ದರು.

ಆ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು 2022ರ ಜ.30ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಪತ್ನಿ, ಪತಿಯನ್ನು ನಾನು ಪ್ರೀತಿಸುತ್ತಿದ್ದೇನೆ. ವೈವಾಹಕ ಜೀವನ ಮುಂದುವರಿಸಲು ಬಯಸುತ್ತಿದ್ದೇನೆ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 30 ಮಂದಿ ತಂಡ ರಚಿಸಿದ ಸರ್ಕಾರ
ಗ್ರಾಪಂಗಳಲ್ಲಿ 10 ವರ್ಷಗಳಲ್ಲಿ ₹50000 ಕೋಟಿ ಅಕ್ರಮ: ಶಾಸಕ