;Resize=(412,232))
ಬೆಂಗಳೂರು : ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಳಗಿನ ವಾಯು ವಿಹಾರ ಮುಗಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ಗ್ರೇಟ್ ಡ್ಯಾನ್ ತಳಿಯ ಸಾಕು ನಾಯಿಯೊಂದು ಭೀಕರ ದಾಳಿ ನಡೆಸಿದೆ. ನಾಯಿ ದಾಳಿಯಿಂದ ತೀವ್ರವಾಗಿ ಗಾಯವಾಗಿರುವ ಮಹಿಳೆಯ ಮುಖ, ಕುತ್ತಿಗೆ, ಕಾಲುಗಳು ಸೇರಿದಂತೆ ದೇಹದ ವಿವಿಧೆಡೆ 50 ಹೊಲಿಗೆಗಳನ್ನು ಹಾಕಲಾಗಿದೆ.
ಜ.26ರ ಬೆಳಗ್ಗೆ 6.45ರಲ್ಲಿ ಅಮರೇಶ್ ರೆಡ್ಡಿ ಎಂಬುವರಿಗೆ ಸೇರಿದ ಸಾಕು ನಾಯಿಯು ಸ್ಥಳೀಯ ನಿವಾಸಿಯಾಗಿರುವ ಶಾಲಿನಿ ದುಬೆ ಅವರ ಮೇಲೆ ದಾಳಿ ನಡೆಸಿದೆ. ಈ ಘಟನೆಯ ದೃಶ್ಯವು ಮನೆಯೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಾಯು ವಿಹಾರ ಮುಗಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಿನಿಯವರ ಮೇಲೆ ಮನೆಯ ಗೇಟ್‌ನಿಂದ ಹೊರಗೆ ಬರುವ ನಾಯಿ ಏಕಾಏಕಿ ದಾಳಿ ನಡೆಸಿದೆ. ಕೆಳಗೆ ಬಿದ್ದ ಶಾಲಿನಿ ಅವರ ಮುಖ, ಕುತ್ತಿಗೆ, ಕಾಲು ಸೇರಿದಂತೆ ಹಲವೆಡೆ ಕಚ್ಚಲು ಆರಂಭಿಸುತ್ತದೆ. ಆಗ ವ್ಯಕ್ತಿಯೊಬ್ಬರು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಆದರೆ, ಭಾರಿ ಗಾತ್ರದ ನಾಯಿ ತನ್ನ ದಾಳಿಯನ್ನು ಮುಂದುವರಿಸುತ್ತದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೆ ಸಿಕ್ಕ ಸಿಕ್ಕಲ್ಲಿ ಕಚ್ಚುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅದಾದ ಬಳಿಕ ಅದೇ ಮನೆಯ ಗೇಟ್‌ನಿಂದ ಹೊರ ಬರುವ ಒಬ್ಬ ಮಹಿಳೆ ಸೊಳ್ಳೆ ಹೊಡೆಯುವ ಬ್ಯಾಟ್‌ನಿಂದ ನಾಯಿಯನ್ನು ಓಡಿಸಲು ಪ್ರಯತ್ನಿಸುತ್ತಾರೆ. ಇಬ್ಬರ ಪ್ರಯತ್ನದ ಬಳಿಕ ಅಂತಿಮವಾಗಿ ನಾಯಿ ದೂರವಾಗುತ್ತದೆ. ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಮಹಿಳೆಗೆ ಆಸ್ಪತ್ರೆ ಒಳ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯವನ್ನು ಮಾನಿಟರ್ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಯಿ ಮಾಲೀಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ನಾಯಿಗೆ ಮಾಲೀಕರು ಮೊದಲ ‘ಡಾಗ್ ಮುಜಲ್’ ಬಳಸಿ ಮುಚ್ಚಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು, ದೈತ್ಯ ಗಾತ್ರದ ನಾಯಿಯನ್ನು ಹಿಡಿದುಕೊಳ್ಳಲು, ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಸಾಕುವುದು ಏಕೆ? ಇಂತಹ ಬೇಜವಾಬ್ದಾರಿಯುತ ನಾಯಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.