ಬರಹಗಾರರು ನಿರ್ದೇಶನಕ್ಕೆ ಬರಬೇಕು : ಗಣೇಶ್ ಅರಸು ಅಂತಾರೆ ಜೊತೆ ಗಣೇಶ್‌ ಹೊಸ ಸಿನಿಮಾ ಮುಹೂರ್ತ

Published : Apr 09, 2025, 12:47 PM IST
Golden Star Ganesh

ಸಾರಾಂಶ

ಅರಸು ಅಂತಾರೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಗಣೇಶ್‌ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಸಂದರ್ಭದಲ್ಲಿ ಗಣೇಶ್‌, ‘ರವಿಶಂಕರ್‌ ಮೂಲಕ ನನಗೆ ಬಂದ ಈ ಆಫರ್‌ ಬಗ್ಗೆ ಹಿಂದೆಲ್ಲೂ ಹೇಳಿಲ್ಲ

ಸಿನಿವಾರ್ತೆ

‘ಹಾಸ್ಯ ನಟ ರವಿಶಂಕರ ಗೌಡ ನನಗೆ ಬಹಳ ಕಾಲದಿಂದ ಆತ್ಮೀಯ. ನನಗೆ ಜನಪ್ರಿಯತೆ ತಂದುಕೊಟ್ಟ ಕಾಮಿಡಿ ಟೈಮ್‌ ನಿರೂಪಣೆಗೆ ಮೊದಲು ಕರೆ ಹೋಗಿದ್ದು ರವಿಶಂಕರ್‌ಗೆ. ಆದರೆ ಆತ ಸಿಲ್ಲಿಲಲ್ಲಿ ಸೀರಿಯಲ್‌ನಲ್ಲಿ ಬ್ಯುಸಿ ಇದ್ದ ಕಾರಣ ನನ್ನ ನಂಬರ್‌ ಕೊಟ್ಟಿದ್ದಾನೆ. ಹೀಗೆ ನನಗೆ ಮನರಂಜನಾ ಮಾಧ್ಯಮಕ್ಕೆ ಬರಲು ಅವಕಾಶ ಸಿಕ್ಕಿತು’ ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೇಳಿದ್ದಾರೆ.

ಅರಸು ಅಂತಾರೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಗಣೇಶ್‌ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಸಂದರ್ಭದಲ್ಲಿ ಗಣೇಶ್‌, ‘ರವಿಶಂಕರ್‌ ಮೂಲಕ ನನಗೆ ಬಂದ ಈ ಆಫರ್‌ ಬಗ್ಗೆ ಹಿಂದೆಲ್ಲೂ ಹೇಳಿಲ್ಲ. ಆತ ಹಾಗೂ ನನ್ನ ನಡುವಿನ ಸ್ನೇಹ ಇಂದೂ ಹಾಗೇ ಇದೆ. ಆದರೆ ಆತನ ನಟನೆಯ ಸಿನಿಮಾ ಸಂಖ್ಯೆ ಸಾವಿರದ ಸಮೀಪ ಬಂದಿವೆ. ನಾನಿನ್ನೂ ನಲವತ್ತೈದರ ಆಸುಪಾಸಿನಲ್ಲಿದ್ದೇನೆ’ ಎಂದರು.

‘ಉತ್ತಮ ಬರಹಗಾರ ನಿರ್ದೇಶಕನಾಗಿ ಸಿಗಲು ಕಲಾವಿದರಿಗೆ ಯೋಗ ಇರಬೇಕು. ಅರಸು ಅಂತಾರೆ ಅದ್ಭುತ ಬರಹಗಾರ. ಅವರು 2019ರಲ್ಲಿ ಸಿನಿಮಾ ಮಾಡುವ ಬಗ್ಗೆ ನನಗೆ ಮೆಸೇಜ್‌ ಮಾಡಿದ್ದರು. ಈಗ ಅವರೊಂದಿಗೆ ಸಿನಿಮಾ ಮಾಡಲು ಕಾಲ ಕೂಡಿಬಂದಿದೆ. ಹೆಚ್ಚು ಹೆಚ್ಚು ಬರಹಗಾರರು ನಿರ್ದೇಶನ ಕ್ಷೇತ್ರಕ್ಕೆ ಬರಬೇಕು. ಆಗಲೇ ಸ್ಟ್ರಾಂಗ್‌ ಕಂಟೆಂಟ್‌ ಬರಲು ಸಾಧ್ಯ, ಆ ಮೂಲಕ ಈ ಕಾಲದ ಪ್ರೇಕ್ಷಕರನ್ನು ಥೇಟರಿಗೆ ಕರೆತರಲು ಸಾಧ್ಯ’ ಎಂದು ಗಣೇಶ್‌ ಹೇಳಿದರು.

‘ಹನುಮಾನ್’ ಖ್ಯಾತಿಯ ನಟಿ ಅಮೃತಾ ಅಯ್ಯರ್‌, ‘ಗಣೇಶ್‌ ಅವರಂಥಾ ಸ್ಟಾರ್‌ ನಟನೊಂದಿಗೆ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಖುಷಿ ಇದೆ. ಮನಸ್ಸಿಗೆ ಮುದ ನೀಡುವಂಥಾ ಈ ಸಿನಿಮಾದ ಕಥೆ ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ’ ಎಂದರು.

ನಿರ್ದೇಶಕ ಅರಸು ಅಂತಾರೆ, ‘ಸಿನಿಮಾದ ಟೈಟಲ್‌ ಅನ್ನು ಶೀಘ್ರ ಟೀಸರ್‌ ಮೂಲಕ ರಿವೀಲ್‌ ಮಾಡಲಾಗುವುದು’ ಎಂದರು. ರವಿ ಭದ್ರಾವತಿ ನಿರ್ಮಾಪಕರು. ನಿರ್ಮಾಪಕ ಉದಯ್‌ ಮೆಹ್ತಾ, ಕಲಾವಿದರಾದ ರಂಗಾಯಣ ರಘು, ರವಿಶಂಕರ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಗುತ್ತಿಗೆದಾರರಿಂದಲೇ ಕಮಿಷನ್‌ ಕೇಳಿದ ಗುತ್ತಿಗೆದಾರರು! : ಇಬ್ಬರು ಅಮಾನತು