ಬೆಂಗಳೂರು : ಪತ್ರಿಕಾ ವೃತ್ತಿಯಲ್ಲಿರುವ ಬಹಳಷ್ಟು ಜನರು ಪ್ರವೃತ್ತಿಯಾಗಿ ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಂಡಿರುವುದು ಮಹತ್ವದ ಬೆಳವಣಿಗೆ ಎಂದು ಸಾಹಿತಿ ಜೋಗಿ ಅಭಿಪ್ರಾಯಪಟ್ಟರು.
ನಯನ ಸಭಾಂಗಣದಲ್ಲಿ ಶನಿವಾರ ಹಿರಿಯ ಪತ್ರಕರ್ತ ಪ್ರಕಾಶ್ ಜಿ. ಅವರು ರಚಿಸಿದ ‘ನನ್ಸಿರಿ’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿಸಿಕೊಂಡವರಲ್ಲಿ ಶಿಕ್ಷಕರು ಮತ್ತು ಪತ್ರಕರ್ತರ ಸಂಖ್ಯೆ ಹೆಚ್ಚಿದೆ. ಬೂಕರ್ ಪ್ರಶಸ್ತಿಗೆ ಪಾತ್ರರಾದ ಬಾನುಮುಷ್ತಾಕ್ ಹಾಗೂ ಅವರ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾಭಾಸ್ತಿ ಇಬ್ಬರೂ ಪತ್ರಕರ್ತರು ಎನ್ನುವುದನ್ನು ಸಾಹಿತ್ಯಲೋಕ ಗಮನಿಸುತ್ತಿದೆ ಎಂದರು.
ಸಾಹಿತ್ಯಕ್ಕೆ ಭಿನ್ನ ಬರಹಗಳು ಹೆಚ್ಚೆಚ್ಚು ಬರಬೇಕೆಂದರೆ ಉತ್ತಮ ಭಾಷಾ ಸಂವಹನ ಕೌಶಲ್ಯ ಹೊಂದಿರುವ ವರದಿಗಾರರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಧ್ಯಾನಸ್ಥ ಸ್ಥಿತಿಯಲ್ಲಿದ್ದರೆ ಮಾತ್ರವೇ ಬರವಣಿಗೆ ಮಾಡಲು ಸಾಧ್ಯ. ನಿತ್ಯವೂ ಓದು ಮತ್ತು ಬರೆಯುವ ಹವ್ಯಾಸವನ್ನು ತಪ್ಪದೇ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಮಾತನಾಡಿ, ತಾವು ನೋಡಿದ ಸಂಗತಿಗಳನ್ನು, ಸಮಾಜದಲ್ಲಿ ಆಗುತ್ತಿರುವ ಬದಲಾವಣೆ, ತಲ್ಲಣಗಳನ್ನು ನನ್ಸಿರಿ ಕಾದಂಬರಿ ರೂಪಕ್ಕೆ ತರುವಲ್ಲಿ ಪ್ರಕಾಶ್ ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕ್ರಿಯಾಶೀಲ ವರದಿಗಾರರಾಗಿರುವ ಪ್ರಕಾಶ್, ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೂ ತೆರೆದುಕೊಂಡಿದ್ದಾರೆ ಎಂದು ಹೇಳಿದರು.
ಕೃತಿ ಕತೃ ಪ್ರಕಾಶ್ ಮಾತನಾಡಿ, ಇದು ತಮ್ಮ ಚೊಚ್ಚಲ ಪ್ರಯತ್ನವಾಗಿದ್ದು, ಈ ನಿಟ್ಟಿನಲ್ಲಿ ಸಹಕಾರ ನೀಡಿ, ಬೆನ್ನು ತಟ್ಟಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ಕೃತಿ ಪರಿಚಯಿಸಿದರು. ಜನಮಿತ್ರ ಪತ್ರಿಕೆ ಸಂಪಾದಕ ಎಚ್.ಬಿ. ಮದನಗೌಡ, ರವಿ ನಾಕಲಗೋಡು. ಪತ್ರಕರ್ತ ತಿಮ್ಮಪ್ಪಭಟ್ ಸೇರಿ ಹಲವು ಹಿರಿಯ ಪತ್ರಕರ್ತರು ಶುಭ ಹಾರೈಸಿದರು.