ಯೋಗೀಶಗೌಡ ಹತ್ಯೆ ಪ್ರಕರಣ : ವಿನಯ ಕುಲಕರ್ಣಿ ಶರಣು, ಮತ್ತೆ ಜೈಲುಪಾಲು

Published : Jun 14, 2025, 05:52 AM IST
Vinay kulkarni

ಸಾರಾಂಶ

ಧಾರವಾಡದ ಮಾಜಿ ಜಿಪಂ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದ ಆರೋಪಿ ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿ ಮತ್ತೆ ಜೈಲು ಪಾಲಾಗಿದ್ದಾರೆ.

 ಬೆಂಗಳೂರು : ಧಾರವಾಡದ ಮಾಜಿ ಜಿಪಂ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದ ಆರೋಪಿ ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿ ಮತ್ತೆ ಜೈಲು ಪಾಲಾಗಿದ್ದಾರೆ.

ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಬಳಿಕ ಸಿಬಿಐ ಅಧಿಕಾರಿಗಳು ವಿನಯ್‌ ಕುಲಕರ್ಣಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಬಿಟ್ಟರು.

ವಾರದ ಹಿಂದೆಯಷ್ಟೇ ಸುಪ್ರೀಂ ಕೋರ್ಟ್‌ ವಿನಯ್‌ ಕುಲಕರ್ಣಿ ಅವರ ಜಾಮೀನು ರದ್ದು ಮಾಡಿತ್ತು. ಜತೆಗೆ, ಏಳು ದಿನದೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ಸೂಚಿಸಿತ್ತು. ಅದರಂತೆ ವಿನಯ್ ಕುಲಕರ್ಣಿ ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ವಿಚಾರಣೆ ಮಾಡಿದ ನ್ಯಾಯಾಲಯವು ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳಿಗೆ ಒಪ್ಪಿಸಿತು.

ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಗಂಗಾಧರ ಶೆಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ವಿನಯ್‌ ಕುಲಕರ್ಣಿ ಜಾಮೀನು ರದ್ದಾಗಿತ್ತು. ವಾರದೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿತ್ತು. ಅದರಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದಾಗ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದರು.

ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಚಂದ್ರಶೇಖರ್‌ ಎಂಬ ಆರೋಪಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ಇದು ಸಮಾಜಕ್ಕೆ ಒಳ್ಳೆಯ ಸಂದೇಶ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಆಗುತ್ತದೆ. ಸಾಕ್ಷಿಗಳಿಗೆ ಪ್ರತ್ಯೇಕ ಅಥವಾ ಪರೋಕ್ಷ ಬೆದರಿಕೆ ಹಾಕುವ ಕೆಲಸಗಳಾಗುತ್ತಿವೆ. ಅಂಥವರ ವಿರುದ್ಧ ನ್ಯಾಯಾಲಯ ಕ್ರಮ ಕೈಗೊಳ್ಳುತ್ತಿದೆ. ಪ್ರಕರಣದ 9ನೇ ಆರೋಪಿ ಅಶ್ವಥ್‌ ಎಂಬಾತ ಮಹಿಳಾ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ್ದ. ಹೀಗಾಗಿ ಸಾಕ್ಷಿದಾರರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದೆವು. ಕೇಂದ್ರ ಸಂಸ್ಥೆಯಿಂದ ಆ ಮಹಿಳೆಗೆ ರಕ್ಷಣೆ ನೀಡಲು ನ್ಯಾಯಾಲಯ ಆದೇಶಿಸಿದೆ ಎಂದು ಹೇಳಿದರು.

ಶರಣಾಗತಿಗೆ ಸಮಯ ವಿಸ್ತರಣೆ ಕೋರಿದ್ದ ವಿನಯ್ ಅರ್ಜಿ ವಜಾ

 ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಲು ಸಮಯಾವಕಾಶ ವಿಸ್ತರಣೆ ಕೋರಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

2016ರಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ನಾಯಕ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ ಕುಲಕರ್ಣಿ ಅವರು ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ಜೂ.6ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಜಾಮೀನು ರದ್ದುಗೊಳಿಸಿ, ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಶರಣಾಗಲು ಸಮಯ ವಿಸ್ತರಿಸುವಂತೆ ಅವರು ಮನವಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಮಿಶ್ರಾ ನೇತೃತ್ವದ ಪೀಠ, ಅವರ ಮನವಿಯನ್ನು ತಳ್ಳಿಹಾಕಿದೆ. ಇದರಿಂದಾಗಿ ವಿನಯ್‌ ಕುಲಕರ್ಣಿಗೆ ಮತ್ತೆ ಹಿನ್ನಡೆಯಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ