;Resize=(412,232))
ಬೆಂಗಳೂರು : ವಿಧಾನಸೌಧ ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ವ್ಯಕ್ತಿಯೊಬ್ಬನ ಬ್ಯಾಗಿನಲ್ಲಿ ₹6 ಲಕ್ಷ ನಗದು ಪತ್ತೆ ಆಗಿದ್ದು, ಪೊಲೀಸರು ಆತನನ್ನು ವಿಧಾನಸೌಧದ ಒಳಗೆ ಬಿಡಲು ನಿರಾಕರಿಸಿದ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಕೆಂಗಲ್ ಗೇಟ್ ಮೂಲಕ ಇಂಡಿ ಮೂಲದ ವ್ಯಕ್ತಿಯೊಬ್ಬ ವಿಧಾನಸೌಧ ಪ್ರವೇಶಿಸುವಾಗ ಪೊಲೀಸರು ಆತನ ಬ್ಯಾಗ್ ತಪಾಸಣೆ ನಡೆಸಿದಾಗ ₹6 ಲಕ್ಷ ಮೊತ್ತದ ಹಣ ಪತ್ತೆಯಾಗಿದೆ.
ಇಂಡಿ ಕ್ಷೇತ್ರದ ಶಾಸಕರ ಲೆಟರ್ ಹೆಡ್ ಪಡೆಯಲು ಇಲ್ಲಿಗೆ ಬಂದಿರುವುದಾಗಿ ಆತ ಹೇಳಿದ್ದಾನೆ. ಬ್ಯಾಗ್‌ನಲ್ಲಿ ₹6 ಲಕ್ಷ ಹಣವನ್ನು ಇಟ್ಟುಕೊಂಡಿದ್ದ. ಇಷ್ಟು ದೊಡ್ಡ ಮೊತ್ತದ ಹಣದೊಂದಿಗೆ ಒಳಗೆ ಹೋಗುವಂತಿಲ್ಲ, ವಾಪಸ್ ಹೋಗಿ ಎಂದು ಪೊಲೀಸರು ಸೂಚಿಸಿದರೂ ಶಾಸಕರನ್ನು ನೋಡಲೇಬೇಕು ಎಂದು ಯುವಕ ಹಟ ಹಿಡಿದಿದ್ದ ಎನ್ನಲಾಗಿದೆ. ನಂತರ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಪೊಲೀಸರ ವಿಚಾರಣೆ ವೇಳೆ ಆತ ನಮ್ಮ ಸಂಬಂಧಿಕರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಆಸ್ಪತ್ರೆಯ ಬಿಲ್ ಪಾವತಿಸಲು ಇಷ್ಟೊಂದು ಹಣ ತಂದಿದ್ದೇನೆ ಎಂದು ತಿಳಿಸಿದ್ದಾನೆ. ಇದರ ಜತೆಗೆ ಶಾಸಕರ ಬಳಿ ಕೆಲಸವಿದ್ದಿದ್ದರಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾನೆ. ವಿಚಾರಣೆ ನಡೆಸಿದ ನಂತರ ಆತನನ್ನು ಬಿಟ್ಟುಕಳುಹಿಸಲಾಯಿತು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.