ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸಿದ್ದರಾಮಯ್ಯ ಎ-1 ಆರೋಪಿಯನ್ನಾಗಿಸಿ ಕೂಡಲೇ ಬಂಧಿಸಿ: ಬಿ. ಶ್ರೀರಾಮುಲು

KannadaprabhaNewsNetwork |  
Published : Jun 07, 2025, 12:07 AM IST
ಬಳ್ಳಾರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಬಿ.ಶ್ರೀರಾಮುಲು ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.  | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎ-1 ಆರೋಪಿಯನ್ನಾಗಿಸಿ ಕೂಡಲೇ ಬಂಧಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ.

ಬಳ್ಳಾರಿ: ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎ-1 ಆರೋಪಿಯನ್ನಾಗಿಸಿ ಕೂಡಲೇ ಬಂಧಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ.

11 ಜನ ಅಮಾಯಕರು ಪ್ರಾಣ ಕಳೆದುಕೊಳ್ಳಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿಯೇ ಜನರ ಸಾವು-ನೋವುಗಳು ಸಂಭವಿಸಿವೆ. ಹೀಗಾಗಿ ಪ್ರಕರಣದ ಎ-1 ಆರೋಪಿಯನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎ-2 ಆರೋಪಿಯನ್ನಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎ-3 ಆರೋಪಿಯನ್ನಾಗಿ ಗೃಹ ಸಚಿವರನ್ನು ಬಂಧಿಸಬೇಕು ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಲ್ತುಳಿತ ಪ್ರಕರಣದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜನರ ಸಾವು-ನೋವುಗಳಿಗೆ ಅಧಿಕಾರಿಗಳ ಜತೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಹ ಕಾರಣರಾಗಿದ್ದಾರೆ. ತಪ್ಪಿತಸ್ಥ ಎಲ್ಲರ ಮೇಲೂ ಕ್ರಮಗಳಾಗಬೇಕು. ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದ್ದು, ಪ್ರಕರಣದ ಪೂರ್ಣ ಹೊಣೆಗಾರಿಕೆಯನ್ನು ಮೂವರು ಹೊರಬೇಕು. ಘಟನೆ ಕುರಿತು ನಿವೃತ್ತ ನ್ಯಾಯಾಧೀಶರಿಂದ, ಸಿಐಡಿಯಿಂದ ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸಬೇಕು. ಮೃತರ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಯಾವುದೇ ಮುಂಜಾಗ್ರತೆ ಇಲ್ಲದ ಕಾರಣಕ್ಕಾಗಿಯೇ ಇಷ್ಟು ದೊಡ್ಡ ದುರಂತ ಸಂಭವಿಸಿದೆ. ವರ್ಕ್‌ ಫ್ರಮ್ ಹೋಮ್ ಎನ್ನುವಂತೆ ಎಲ್ಲರೂ ಮನೆಯಲ್ಲಿ ಕುಳಿತು ಕಾರ್ಯನಿರ್ವಹಿಸಿದ್ದಾರೆ. ಇದರ ಹೊಣೆಗಾರಿಕೆಯನ್ನು ಹೊತ್ತು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಘಟನೆಗೂ ನಮಗೆ ಸಂಬಂಧವಿಲ್ಲ ಎನ್ನುವ ಮುಖ್ಯಮಂತ್ರಿ, ಆರ್‌ಸಿಬಿ ತಂಡ ಬೆಂಗಳೂರಿಗೆ ಬರುವಂತೆ ಟ್ವೀಟ್ ಮಾಡಿದ್ದಾರೆ. ವಿಧಾನಸೌಧದ ಮುಂದೆಯೇ ವೇದಿಕೆ ನಿರ್ಮಿಸಿ ಮೊಮ್ಮಕ್ಕಳ ಜತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಪುಗ್ಸಟ್ಟೆ ಪ್ರಚಾರಕ್ಕಾಗಿ ಅಮಾಯಕರ ಜೀವಗಳನ್ನು ಬಲಿ ಪಡೆದಿದ್ದಾರೆ. ಫೋಟೋ ಶೂಟ್‌ ಭರಾಟೆಯಲ್ಲಿ ಜನರ ರಕ್ಷಣೆ ಮರೆತು ಸಿಎಂ, ಡಿಸಿಎಂ ಹಾಗೂ ಗೃಹಸಚಿವರು ವರ್ತಿಸಿದ್ದಾರೆ ಎಂದು ಶ್ರೀರಾಮುಲು ಟೀಕಿಸಿದರು.

ಹೊಸಪೇಟೆಯಲ್ಲಿ ಸಾಧನ ಸಮಾವೇಶಕ್ಕೆ ಇಡೀ ಸರ್ಕಾರವೇ ಅನೇಕ ಬಾರಿ ಭೇಟಿ ನೀಡಿ ಸರ್ವೆ ಮಾಡಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೊಸಪೇಟೆಯಲ್ಲಿಯೇ ವಾಸ್ತವ್ಯ ಹೂಡಿದರು. ಪಕ್ಷದ ಕಾರ್ಯಕ್ರಮಕ್ಕೆ ಈ ಪರಿ ಕಾಳಜಿ ತೋರಿಸಿರುವ ಸಿಎಂ, ಡಿಸಿಎಂ ಅವರಿಗೆ ವಿಜಯೋತ್ಸವಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ಏನಾದರೂ ಅವಘಡ ಆಗಬಹುದು ಎಂಬ ಪ್ರಾಥಮಿಕ ತಿಳಿವಳಿಕೆ ಸಹ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರು ಸಭಾಪತಿಗಳೊಂದಿಗೆ ಚರ್ಚಿಸಿ, ಮೂರು ದಿನಗಳ ಕಾಲ ವಿಶೇಷ ಜಂಟಿ ಅಧಿವೇಶನ ಕರೆಯಬೇಕು. ಸಿಎಂ ಅವರು ರಾಜ್ಯದ ಜನತೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಶ್ರೀರಾಮುಲು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಶ್ರೀನಿವಾಸ ಮೋತ್ಕರ್, ಮಲ್ಲನಗೌಡ, ರೇಖಾ ಮಲ್ಲನಗೌಡ, ಇಬ್ರಾಹಿಂಬಾಬು, ಗೋವಿಂದರಾಜು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!