ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Nov 05, 2025, 02:00 AM IST
 CM Siddaramaiah

ಸಾರಾಂಶ

ಭವಿಷ್ಯದಲ್ಲಿ ಕರ್ನಾಟಕವನ್ನು ವಿಶ್ವದಲ್ಲಿ ಕೌಶಲ್ಯಕ್ಕೆ ಪ್ರಸಿದ್ಧ ಪ್ರದೇಶವಾಗಿಸುವುದು ಹಾಗೂ ಬೆಂಗಳೂರನ್ನು ಭಾರತದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದ್ದು, ಅದರ ಭಾಗವಾಗಿ ಸಂಡೂರಿನಲ್ಲಿ ನೂತನ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಯೋಜಿಸಲಾಗಿದೆ - ಮುಖ್ಯಮಂತ್ರಿ ಸಿದ್ದರಾಮಯ್ಯ  

 ಬೆಂಗಳೂರು :  ಭವಿಷ್ಯದಲ್ಲಿ ಕರ್ನಾಟಕವನ್ನು ವಿಶ್ವದಲ್ಲಿ ಕೌಶಲ್ಯಕ್ಕೆ ಪ್ರಸಿದ್ಧ ಪ್ರದೇಶವಾಗಿಸುವುದು ಹಾಗೂ ಬೆಂಗಳೂರನ್ನು ಭಾರತದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದ್ದು, ಅದರ ಭಾಗವಾಗಿ ಸಂಡೂರಿನಲ್ಲಿ ನೂತನ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’ಗೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದ ಶೇ. 60ಕ್ಕಿಂತ ಹೆಚ್ಚಿನವರು 35 ವರ್ಷದೊಳಗಿನವರಾಗಿದ್ದಾರೆ. ಮುಂದಿನ ದಶಕದಲ್ಲಿ 1.2 ಕೋಟಿ ಯುವಕರು ರಾಜ್ಯದ ಸಂಪತ್ತಾಗಲಿದ್ದಾರೆ. ಅವರಿಗೆ ಸರಿಯಾದ ಕೌಶಲ್ಯ, ಮನಸ್ಥಿತಿ ಮತ್ತು ಆತ್ಮವಿಶ್ವಾಸ ತುಂಬಿದರೆ ಅಸಾಧಾರಣ ಅವಕಾಶ ಅವರದ್ದಾಗಲಿದೆ. ಸ್ಟಾರ್ಟ್‌ಅಪ್ ರಾಜಧಾನಿಯಾಗಿರುವ ಬೆಂಗಳೂರನ್ನು ದೇಶದ ಕೌಶಲ್ಯ ರಾಜಧಾನಿಯನ್ನಾಗಿಸುವುದು ನಮ್ಮ ಗುರಿ ಎಂದರು.

ಕರ್ನಾಟಕದ ಕೌಶಲ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ನೀತಿ

ಕರ್ನಾಟಕದ ಕೌಶಲ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ನೀತಿ 2025-32ನ್ನು ಬಿಡುಗಡೆ ಮಾಡಲಾಗಿದ್ದು, ಏಳು ವರ್ಷದ ಕಾರ್ಯತಂತ್ರದ ನೀಲಿನಕ್ಷೆ ರೂಪಿಸಲಾಗಿದೆ. ಇದಕ್ಕಾಗಿ 4,432 ಕೋಟಿ ರು. ಅನುದಾನ ನೀಡಲಾಗಿದೆ. 2032ರ ವೇಳೆಗೆ 30 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ, ಐಟಿಐಗಳಲ್ಲಿ ಮಹಿಳೆಯರ ಪ್ರವೇಶ ಶೇ.33ಕ್ಕೆ ಹೆಚ್ಚಳ ಹಾಗೂ ಐಎಂಸಿಕೆ ಮೂಲಕ ಜಾಗತಿಕ ಉದ್ಯೋಗಾವಕಾಶಗಳ ವೃದ್ಧಿ ಸಾಧಿಸುವ ಗುರಿ ಹೊಂದಲಾಗಿದೆ ಎಂದರು. 2032ಕ್ಕೆ 1 ಟ್ರಿಲಿಯನ್‌ ಆರ್ಥಿಕತೆ:

ಕರ್ನಾಟಕದ ಆರ್ಥಿಕತೆಗೆ ವೇಗ ನೀಡಲಾಗುತ್ತಿದೆ. 2032ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು ಒಂದು ಟ್ರಿಲಿಯನ್‌ ಡಾಲರ್‌ಗೆ ತಲುಪಿಸುವ ಗುರಿಯಿದೆ. ಅದಕ್ಕಾಗಿ ರಾಜ್ಯದ ಜನರಿಗೆ ಕೌಶಲ್ಯಭರಿತರನ್ನಾಗಿಸುವುದು ಹಾಗೂ ಭವಿಷ್ಯಕ್ಕೆ ತಯಾರಾದ ಮತ್ತು ನಾವೀನ್ಯತೆಯುಳ್ಳ ಕಾರ್ಮಿಕ ಶಕ್ತಿ ರೂಪಿಸಲಾಗುವುದು. ಯುವಯುಗ ಯೋಜನೆ ಅಡಿ ಸುಧಾರಿತ ಡಿಜಿಟಲ್‌ ಕೌಶಲ್ಯವನ್ನು 1.10 ಲಕ್ಷ ಜನರಿಗೆ ಒದಗಿಸುವ ಮೂಲಕ ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ 4ನೇ ಸ್ಥಾನದಲ್ಲಿದೆ. ಕಳೆದೆರಡು ವರ್ಷಗಳಲ್ಲಿ ರಾಜ್ಯಾದ್ಯಂತ 34 ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 1.43 ಲಕ್ಷ ಉದ್ಯೋಗಾಕಾಂಕ್ಷಿಗಳು ಅದರಲ್ಲಿ ಭಾಗವಹಿಸಿದ್ದರು. ಅದರಲ್ಲಿ 27 ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ದೊರೆತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ವಿಶ್ವವು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಸ್ಟಾರ್ಟ್ಅಪ್‌ ರಾಜಧಾನಿಯಾಗಿರುವ ಬೆಂಗಳೂರನ್ನು ಕೌಶಲ್ಯ ರಾಜಧಾನಿಯನ್ನಾಗಿಸುವುದು ಸರ್ಕಾರ ಉದ್ದೇಶ. ಅದಕ್ಕೆ ತಕ್ಕಂತೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. 2001 ಸೆ.11ರಂದು ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ದಾಳಿ ನಂತರ, ಐಟಿ-ಬಿಟಿ ಉದ್ಯಮಿಗಳಿಗೆ ಬೆಂಗಳೂರು ಹೂಡಿಕೆಯ ನೆಚ್ಚಿನ ತಾಣವಾಯಿತು. ಇಲ್ಲಿನ ಶಾಂತಿ, ಜ್ಞಾನ, ಮಾನವ ಸಂಪನ್ಮೂಲ ಹೂಡಿಕೆದಾರರನ್ನು ಹೆಚ್ಚಾಗಿ ಆಕರ್ಷಿಸಿತು. ಅದರ ಜತೆಗೆ ಇದೀಗ ಬೆಂಗಳೂರು ಕೌಶಲ್ಯ ಶೃಂಗಸಭೆಯ ಆಯೋಜನೆಯು ಕೌಶಲ್ಯಾಭಿವೃದ್ಧಿಗೆ ಕ್ಷೇತ್ರಕ್ಕೆ ಮತ್ತಷ್ಟು ವೇಗ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ಮಾರಿಷಸ್‌ನಲ್ಲಿ ಕೌಶಲ್ಯ

ಕಾರ್ಮಿಕರಿಗೆ ಬೇಡಿಕೆ

ಮಾರಿಷಸ್‌ನಲ್ಲಿನ ಕಾರ್ಮಿಕರಲ್ಲಿ ಶೇ.70ರಷ್ಟು ಮಂದಿ ಭಾರತ ಮೂಲದವರಾಗಿದ್ದಾರೆ. ಅದರಲ್ಲೂ ಕರ್ನಾಟಕದವರು ಹೆಚ್ಚಿದ್ದಾರೆ. ಹಿಂದೆಲ್ಲ ಕಾರ್ಮಿಕರ ಸಂಖ್ಯೆ ಹೆಚ್ಚು ಬೇಡಿಕೆಯಿತ್ತು. ಈಗ ಕೌಶಲ್ಯಭರಿತ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಬೆಂಗಳೂರು ಕೌಶಲ್ಯ ಶೃಂಗಸಭೆಯ ಮೂಲಕ ಕರ್ನಾಟಕ ಹೆಚ್ಚಿನ ಪ್ರಮಾಣದಲ್ಲಿ ಕೌಶಲ್ಯಭರಿತ ಕಾರ್ಮಿಕರನ್ನು ರೂಪಿಸಿದರೆ, ಮಾರಿಷಸ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಮಾರಿಷಸ್‌ ದೇಶದ ಕಾರ್ಮಿಕ ಸಚಿವ ಮುಹಮ್ಮದ್ ರೆಜಾ ಖಾಸ್ಸಂ ಉತ್ತೀಮ್‌ ತಿಳಿಸಿದರು.

ಈವರೆಗೆ ಮಾರಿಷಸ್‌ನಲ್ಲಿ ಕೆಲಸಕ್ಕೆ ಬರುವವರಿಗೆ ಮಧ್ಯವರ್ತಿಗಳ ಕಾಟ ತಪ್ಪಿಸಲು ಹೊಸ ನೀತಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರಿಂದ ಭಾರತ ಮೂಲದವರು ಯಾವುದೇ ಕಿರುಕುಳಕ್ಕೊಳಗಾಗದೇ ಮಾರಿಷಸ್‌ನಲ್ಲಿ ಕೌಶಲ್ಯದ ಮೂಲಕ ಕೆಲಸ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ಶರಣಬಸಪ್ಪ ದರ್ಶನಾಪುರ್‌, ಸಂಸದ ರಾಧಾಕೃಷ್ಣ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್‌, ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಇತರರಿದ್ದರು.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ