ಬೆಣ್ಣಿಹಳ್ಳ ಪ್ರವಾಹ ತಡೆ: ಕೊನೆಗೂ ಮಹೂರ್ತ ಫಿಕ್ಸ್‌!

KannadaprabhaNewsNetwork |  
Published : Feb 06, 2026, 02:15 AM IST
ಬೆಣ್ಣಿ ಹಳ್ಳದ ಪ್ರವಾಹದ ಒಂದು ನೋಟ. | Kannada Prabha

ಸಾರಾಂಶ

ಬಹುದಶಕಗಳಿಂದ ಪ್ರತಿವರ್ಷ ಬೆಂಬಿಡದೇ ಕಾಡುತ್ತಿರುವ ಬೆಣ್ಣಿಹಳ್ಳದ ಪ್ರವಾಹಕ್ಕೆ ಶಾಶ್ವತ ತಡೆಗಾಗಿ ಕೊನೆಗೂ ಚಾಲನೆ ನೀಡಲು ಮಹೂರ್ತ ಫಿಕ್ಸ್‌ ಆಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಬಹುದಶಕಗಳಿಂದ ಪ್ರತಿವರ್ಷ ಬೆಂಬಿಡದೇ ಕಾಡುತ್ತಿರುವ ಬೆಣ್ಣಿಹಳ್ಳದ ಪ್ರವಾಹಕ್ಕೆ ಶಾಶ್ವತ ತಡೆಗಾಗಿ ಕೊನೆಗೂ ಚಾಲನೆ ನೀಡಲು ಮಹೂರ್ತ ಫಿಕ್ಸ್‌ ಆಗಿದೆ. ಫೆ. 8ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆದರೆ, ಪೂರ್ಣ ಯೋಜನೆಗೆ ಅನುಮೋದನೆ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿಯಲ್ಲಿ ಉಗಮವಾಗುವ ಬೆಣ್ಣಿಹಳ್ಳ ಧಾರವಾಡ, ಗದಗ ಜಿಲ್ಲೆ ಸೇರಿದಂತೆ ಬರೋಬ್ಬರಿ 148 ಕಿಮೀ ಹರಿದು ಹೋಗುತ್ತದೆ. ತುಪರಿಹಳ್ಳ, ರಾಡಿಹಳ್ಳ, ಹಂದಿಗನಹಳ್ಳ, ಇರವಿಹಳ್ಳ, ಹಿರೇಹಳ್ಳ, ಯರನಹಳ್ಳ ಸೇರಿದಂತೆ ಸರಿಸುಮಾರು 56 ಉಪಹಳ್ಳಗಳು ಇದಕ್ಕೆ ಸೇರುತ್ತವೆ. ಇವುಗಳಲ್ಲಿ ಅತ್ಯಂತ ಉಪಹಳ್ಳಗಳಲ್ಲಿ ಅತಿ ದೊಡ್ಡದೆಂದರೆ ತುಪರಿಹಳ್ಳ. ಬೇಸಿಗೆ, ಚಳಿಗಾಲದಲ್ಲಿ ಮೈದಾನದಂತೆ ಭಾಸವಾಗುವ ಈ ಹಳ್ಳಗಳು, ಮಳೆಗಾಲದಲ್ಲಿ ತೋರುವ ಉಗ್ರಾವತಾರವೇ ಬೇರೆ. ಅಕ್ಷರಶಃ ಧಾರವಾಡ, ಗದಗ ಜಿಲ್ಲೆಗಳನ್ನು ನಡುಗಿಸುತ್ತವೆ. 37 ಹಳ್ಳಿಗಳು ನರಕಯಾತನೆ ಅನುಭವಿಸುತ್ತವೆ. ಪ್ರತಿವರ್ಷ ಗ್ರಾಮಗಳಿಗೆ ನೀರು ನುಗ್ಗುವುದು. ಹತ್ತಾರು ಜನ ಸಿಲುಕುವುದು. ಜನಜಾನುವಾರುಗಳು ಸಾವಿಗೀಡಾಗುವುದು ಮಾಮೂಲಿ ಎಂಬಂತಾಗಿದೆ.

ಬೆಣ್ಣಿಹಳ್ಳ- ತುಪರಿಹಳ್ಳಗಳಿಂದ 20 ಟಿಎಂಸಿಗೂ ಅಧಿಕ ನೀರು ಪ್ರತಿವರ್ಷ ವ್ಯರ್ಥವಾಗಿ ಹರಿದುಹೋಗುತ್ತದೆ. ಈ ನೀರನ್ನು ಬಳಕೆ ಮಾಡಬೇಕು. ಜತೆ ಜತೆಗೆ ಇಲ್ಲಿನ ಪ್ರವಾಹವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂಬುದು ಬಹುವರ್ಷ ಅಷ್ಟೇ ಅಲ್ಲ ಬಹುದಶಕಗಳ ಬೇಡಿಕೆ. ಇದಕ್ಕಾಗಿ ಮಾಡದ ಹೋರಾಟ ಉಳಿದಿಲ್ಲ. 2010ರ ವರೆಗೂ ಯಾವ ಇಲಾಖೆ ಈ ಹಳ್ಳಗಳನ್ನು ನಿರ್ವಹಣೆ ಮಾಡಬೇಕು ಎಂಬ ಬಗ್ಗೆಯೂ ಯಾವುದೇ ನಿಯಮಗಳಿರಲಿಲ್ಲ. ಆದರೆ, 2010ಕ್ಕೆ ಬೆಣ್ಣಿಹಳ್ಳ- ತುಪರಿಹಳ್ಳಗಳನ್ನು ಆಗಿನ ಯಡಿಯೂರಪ್ಪ ಸರ್ಕಾರ ಈ ಹಳ್ಳಗಳನ್ನು ಬೃಹತ್‌ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿಸಿತ್ತು. ಪರಮಶಿವಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿತು. ಅದು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನೂ ನೀಡಿತ್ತು. ಬಳಿಕ ವಿವಿಧ ಹಂತಗಳಲ್ಲಿ ಸಮೀಕ್ಷೆಗಳನ್ನೆಲ್ಲ ನಡೆಸಿ ₹1610 ಕೋಟಿ ಯೋಜನೆಯನ್ನು ಸಿದ್ಧಪಡಿಸಿ ಡಿಪಿಆರ್‌ನ್ನು ಇಲಾಖೆಗೆ ಸಲ್ಲಿಸಿತು. ಅದಕ್ಕೀಗ ಸಿದ್ದರಾಮಯ್ಯ ಸರ್ಕಾರ ₹200 ಕೋಟಿ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿ 2 ವರ್ಷವಾಗಿದೆ. ಇದೀಗ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಆದರೆ ₹1610 ಕೋಟಿ ಯೋಜನೆಗೆ ಅನುಮೋದನೆ ನೀಡಬೇಕಿತ್ತು. ಕಾಮಗಾರಿಯನ್ನು ಹಂತ ಹಂತವಾಗಿ ನಡೆಸಬೇಕು ಎಂಬುದು ಹೋರಾಟಗಾರರ ಒಕ್ಕೊರಲಿನ ಆಗ್ರಹ.

ಈಗ ಏನೇನು?

ಈ ನಡುವೆ ಬಿಡುಗಡೆಯಾಗಿರುವ ₹200 ಕೋಟಿ ವೆಚ್ಚದಲ್ಲಿ ಏನೇನು ಕಾಮಗಾರಿಗಳು ನಡೆಯಲಿದೆ ಎಂಬುದನ್ನು ಅವಲೋಕಿಸಿದರೆ, ಬೆಣ್ಣಿಹಳ್ಳದ 60 ಕಿಮೀಯಿಂದ 125 ಕಿಮೀ ವರೆಗೆ ಅತಿ ಅವಶ್ಯಕ ಸ್ಥಳದಲ್ಲಿ 1.05 ಕಿಮೀ ಕಾಂಕ್ರೀಟ್‌ ತಡೆಗೋಡೆ, 6.15 ಕಿಮೀ ಏರಿ ನಿರ್ಮಾಣ, ಅತಿ ಅವಶ್ಯಕವಾಗಿರುವ 86 ಸ್ಥಳಗಳಲ್ಲಿ ಹೊಲದಲ್ಲಿನ ನೀರು ಹಳ್ಳವನ್ನು ಸೇರುವ ಇನ್‌ಲೆಟ್‌ ನಿರ್ಮಾಣ, ಇನ್ನು ಉಪಹಳ್ಳ ಸೇರುವ ದೇಸಾಯಿಹಳ್ಳ, ಗುಂಡೇನಹಳ್ಳ ಮತ್ತು ಹಂದಿಗನಹಳ್ಳಗಳಲ್ಲಿ 500 ಮೀಟರ್‌ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುವುದು. ಏಳು ಕಡೆಗಳಲ್ಲಿ ರಸ್ತೆ ಸೇತುವೆಗಳ ನಿರ್ಮಾಣ, 2 ಕಡೆಗಳಲ್ಲಿ ಜಲಸಂಗ್ರಹಾರ ಕೈಗೊಳ್ಳಲು ಯೋಚಿಸಲಾಗಿದೆ.

ಸ್ನಾನಘಟ್ಟ

ಇನ್ನು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರುವ ಯಮನೂರಲ್ಲಿ ಭಕ್ತರಿಗಾಗಿ 150 ಮೀಟರ್‌ ಉದ್ದದ ಸ್ನಾನಘಟ್ಟ ನಿರ್ಮಾಣ ಮಾಡಲು ಯೋಚಿಸಲಾಗಿದೆ. ಈ ಎಲ್ಲ ಕಾಮಗಾರಿಗಳಿಂದ ಧಾರವಾಡ ಹಾಗೂ ಗದಗ ಜಿಲ್ಲೆಗಳ 37 ಹಳ್ಳಿಗಳಲ್ಲಿನ ಪ್ರವಾಹ ತಡೆದಂತಾಗುತ್ತದೆ ಜತೆಗೆ 20 ಸಾವಿರ ಹೆಕ್ಟೇರ್‌ ಪ್ರದೇಶ ಪ್ರವಾಹದಿಂದ ಮುಕ್ತವಾಗುತ್ತದೆ ಎಂಬುದು ತಜ್ಞರ ಅಂಬೋಣ.

ಒಟ್ಟಿನಲ್ಲಿ ಕೊನೆಗೂ ಬೆಣ್ಣಿಹಳ್ಳ ಪ್ರವಾಹ ತಡೆಯುವ ಕಾಮಗಾರಿಗೆ ಚಾಲನೆ ನೀಡಲು ಕಾಲ ಕೂಡಿ ಬಂದಂತಾಗಿದೆ. ಆದರೆ, ಹೋರಾಟಗಾರರ ನಿರೀಕ್ಷೆಯಂತೆ ಪೂರ್ಣ ಯೋಜನೆಗೆ ಅನುಮೋದನೆ ನೀಡಿ ಹಂತ ಹಂತವಾಗಿ ಕಾಮಗಾರಿ ಕೈಗೊಂಡರೆ ನಿಜಕ್ಕೂ ರೈತರಿಗೆ ಅನುಕೂಲವಾಗುತ್ತದೆ ಎಂಬ ಬೇಡಿಕೆಯೂ ಇದೆ. ಇದಕ್ಕೆ ಮುಖ್ಯಮಂತ್ರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಬೆಣ್ಣಿಹಳ್ಳದ ಪ್ರವಾಹಕ್ಕೆ ಶಾಶ್ವತ ತಡೆ ನೀಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಫೆ.8ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಹುವರ್ಷದ ಬೇಡಿಕೆ ಈಡೇರಿದಂತಾಗಿದೆ. ರೈತರ ಕನಸು ನನಸಾಗುತ್ತಿದೆ ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದಿಂದ ಮಹಿಳೆಯರ ಪ್ರಬಲರಾಗಲು ಸಾಧ್ಯ
ಉದ್ಯಾನ ಜಾಗ ಕಬಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ