ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಸಾರ್ವಜನಿಕರಿಗೆ ಬೆಳಕನ್ನು ನೀಡುವ ಇಲ್ಲಿಯ ಬೆಸ್ಕಾಂ ಕಚೇರಿ ಕಟ್ಟಡ ಸಂಪೂರ್ಣ ಸೋರುತ್ತಿದೆ. ಇದೀಗ ಸಿಬ್ಬಂದಿ ಕ್ವಾರ್ಟರ್ಸ್ ಇಕ್ಕಟ್ಟಿನ ಜಾಗದಲ್ಲಿ ವಿಧಿ ಇಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ.ಕೆಪಿಟಿಸಿಎಲ್‌ಗೆ ಸಂಬಂಧಪಟ್ಟಿರುವ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಬೆಸ್ಕಾಂ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ಸುಮಾರು 40 ವರ್ಷಗಳಷ್ಟು ಹಳೆಯದಾಗಿದೆ. ಎಇಇ ಕೊಠಡಿ, ತಾಂತ್ರಿಕ ಸಿಬ್ಬಂದಿ ಕೊಠಡಿ ಸೇರಿದಂತೆ ಎಲ್ಲ ಕೊಠಡಿಗಳು ಸೋರುತ್ತಿವೆ.
ಇದರಿಂದ ದಿನ ನಿತ್ಯದ ಕಾರ್ಯ ನಿರ್ವಹಣೆ ಕಷ್ಟದಾಯಕವಾಗಿದೆ. ಒಂದು ವಾರ ಕಚೇರಿ ಕೆಲಸ ಸ್ತಬ್ಧಗೊಂಡಿತ್ತು. ಹಾಗಾಗಿ ಒಂದು ವಾರದಿಂದ ವಸತಿಗೃಹದಲ್ಲಿ ಕಚೇರಿ ಕಾರ್ಯಾರಂಭ ಮಾಡಿದೆ. ಅಲ್ಲಿಯೇ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ವಸತಿಗೃಹಗಳು ಅತ್ಯಂತ ಶಿಥಿಲಗೊಂಡಿವೆ. 12 ವಸತಿಗೃಹಗಳಲ್ಲಿ ಕೆಲ ಮನೆಗಳಲ್ಲಿ ಮಾತ್ರ ಸಿಬ್ಬಂದಿ ವಾಸವಾಗಿದ್ದಾರೆ. ಖಾಲಿ ಇರುವ 2 ವಸತಿ ಗೃಹದಲ್ಲಿ ಬೆಸ್ಕಾಂ ಕಚೇರಿ ಆರಂಭಗೊಂಡಿದೆ.ಆ ವಸತಿಗೃಹಗಳೂ ಸುಮಾರು 70 ವರ್ಷದ ಹಿಂದೆ ಕಟ್ಟಲ್ಪಟ್ಟಿವೆ. ಅವು ಸಾಕಷ್ಟು ಶಿಥಿಲಗೊಂಡಿವೆ. ಆದರೂ ಅನಿವಾರ್ಯವಾಗಿ 2 ವಸತಿ ಗೃಹಗಳಲ್ಲಿ ಬೆಸ್ಕಾಂ ದಿನ ನಿತ್ಯದ ಕಾರ್ಯ ಸಾಗಿದೆ. ಒಂದೊಂದು ಸಣ್ಣ ಕೊಠಡಿಗಳಲ್ಲಿ ಬೇರೆ ಬೇರೆ ವಿಭಾಗದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಗೆ ಬರುವ ಗ್ರಾಹಕರಿಗೆ ಕುಳಿತುಕೊಳ್ಳುವುದು ಇರಲಿ, ನಿಂತುಕೊಳ್ಳಲೂ ಜಾಗವಿಲ್ಲ. ಇಕ್ಟಟ್ಟಿನ ಕೊಠಡಿಗಳಿದ್ದು, ಸದಾ ಲೈಟ್ ಹಾಕಿಕೊಂಡೇ ಇರಬೇಕು. ಈಗಿರುವ ಕಚೇರಿ ಹೊರಗೆ ಅಲ್ಲಲ್ಲಿ ಮಳೆ ನೀರು ನಿಂತಿದೆ. ಗ್ರಾಹಕರಿಗೆ ಓಡಾಡಲು ಕೂಡ ಪರದಾಡುತ್ತಿದ್ದಾರೆ.
ಗ್ರಾಹಕರಿಗೂ ತೊಂದರೆ: ಸಿಬ್ಬಂದಿ ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಸ್ಕಾಂ ಕಚೇರಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ವಿರೂಪಾಕ್ಷಪ್ಪ ವರ್ಗಾವಣೆಗೊಂಡು ನೂತನ ಎಇಇ ಆಗಿ ಪ್ರಕಾಶ ಪತ್ತಿನೂರು ಆಗಮಿಸಿ ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ನವರು ಕಚೇರಿ ಕಟ್ಟಡವನ್ನು ಬೇಗ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು, ಸಿಬ್ಬಂದಿ ಕ್ವಾರ್ಟರ್ಸ್‌ಗಳ ದುರಸ್ತಿ ಸಹ ಕೈಗೊಳ್ಳಬೇಕಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ಸೋರುತ್ತಿರುವ ಕಚೇರಿ ಕಟ್ಟಡ ದುರಸ್ತಿಗೆ ಕೆಪಿಟಿಸಿಎಲ್ ₹12 ಲಕ್ಷ ಮಂಜೂರು ಮಾಡಿದೆ. ಶೀಘ್ರ ದುರಸ್ತಿಯಾಗುವುದು. ಉಪವಿಭಾಗದ ಕಚೇರಿ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಿಸಲು ಹೊಸಪೇಟೆ ರಸ್ತೆಯಲ್ಲಿ 2.32 ಎಕರೆ ನಿವೇಶನ ನೀಡುವಂತೆ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ನಿರ್ಗಮಿತ ಎಇಇ ಬೆಸ್ಕಾಂ ಉಪವಿಭಾಗ ಹರಪನಹಳ್ಳಿ ವಿರೂಪಾಕ್ಷಪ್ಪ.