ಬೆಸ್ಕಾಂ ಖಾಸಗೀಕರಣ ಹುನ್ನಾರ: ನೌಕರರ ಆಕ್ರೋಶ

KannadaprabhaNewsNetwork |  
Published : Jun 16, 2026, 01:15 AM IST
      ಸಿಕೆಬಿ-1 ನಗರದ ವಾಪಸಂದ್ರದ  ಬೆಸ್ಕಾಂ ವಿಭಾಗೀಯ ಕಚೇರಿ ಎದುರು ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರು  ಪ್ರತಿಭಟನೆ ನಡೆಸಿದರು  | Kannada Prabha

ಸಾರಾಂಶ

ವಿದ್ಯುತ್ ಖಾಸಗೀಕರಣ ಮಾಡುವುದು ಎಂದರೆ ಸಾಮಾಜಿಕ ನ್ಯಾಯದ ಹರಣ ಮಾಡಿದಂತೆ. ಇದು ನೂರಾರು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿದ್ದ ಸೇವಾ ವಲಯವನ್ನು ಮುಗಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಈ ಕೂಡಲೇ ಸರ್ಕಾರ ಟಾಟಾ ಪವರ್ ಪ್ರಸ್ತಾವಿತ ಮನವಿಯನ್ನು ತಿರಸ್ಕರಿಸಬೇಕು ಎಂದು ಬೆಸ್ಕಾಂ ನೌಕರರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ವಿದ್ಯುತ್ ಖಾಸಗೀಕರಣ ಮಾಡುವುದು ಎಂದರೆ ಸಾಮಾಜಿಕ ನ್ಯಾಯದ ಹರಣ ಮಾಡಿದಂತೆ. ಇದು ನೂರಾರು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿದ್ದ ಸೇವಾ ವಲಯವನ್ನು ಮುಗಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಈ ಕೂಡಲೇ ಸರ್ಕಾರ ಟಾಟಾ ಪವರ್ ಪ್ರಸ್ತಾವಿತ ಮನವಿಯನ್ನು ತಿರಸ್ಕರಿಸಬೇಕು ಎಂದು ಬೆಸ್ಕಾಂ ನೌಕರರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು.ನಗರದ ವಾಪಸಂದ್ರದಲ್ಲಿರುವ ಬೆಸ್ಕಾಂ ವಿಭಾಗೀಯ ಕಚೇರಿ ಎದುರು ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸಿದ ಬೆಸ್ಕಾಂ ಅಧಿಕಾರಿಗಳು, ನೌಕರರು ಖಾಸಗೀಕರಣ ಮಾಡದಂತೆ ಘೋಷಣೆ ಕೂಗುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ಈ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1902ರಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಕಂಡು ಹಿಡಿದಾಗಿನಿಂದ ಇಲ್ಲಿವರೆಗೆ ಬೆಸ್ಕಾಂ ನೌಕರರು ಈ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಜನಸಂಖ್ಯೆ ಬೆಳೆದಂತೆ ನಾಗರಿಕರ ಬೇಡಿಕೆಗಳನ್ನು ಆದ್ಯತಾನುಸಾರ ಶಿರಸಾವಹಿಸಿ ಮಾಡಿಕೊಂ ಡು ಬರಲಾಗುತ್ತಿದೆ. ಇಂತಹ ಬಲಿಷ್ಟ ಕ್ಷೇತ್ರವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.

ನಿರುದ್ಯೋಗ ತಾಂಡವ:

ವಿದ್ಯುತ್ ಖಾಸಗೀಕರಣವಾದಲ್ಲಿ ಉದ್ಯೋಗಿಗಳಲ್ಲಿ ಅಭದ್ರತೆ ಸೃಷ್ಟಿಯಾಗಿ ನಿರುದ್ಯೋಗ ತಲೆಯೆತ್ತಲಿದೆ. ಸರ್ಕಾರದಿಂದ ಬರುವ ಯಾವೊಂದು ಸಬ್ಸಿಡಿ, ಉಚಿತ ಯೋಜನೆಗಳು ಹಳ್ಳ ಹಿಡಿಯಲಿವೆ. ವಿಶೇಷವಾಗಿ ರೈತರು ದೀನದಲಿತರ ಪಾಲಿಗೆ ಮರಣಶಾಸನವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರ ಖಾಸಗಿ ವಿತರಣೆಗೆ ಅವಕಾಶ ಮಾಡಿಕೊಡಬಾರದು ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಕೇಂದ್ರ ಸರ್ಕಾರ 2022ರಲ್ಲಿ ಬೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಸೇರಿ 3 ಎಸ್ಕಾಂಗಳನ್ನು ಖಾಸಗೀಕರಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿತ್ತು. ಆದರೆ ಕರ್ನಾಟಕ ಸರ್ಕಾರ ರಾಜ್ಯದ ಎಸ್ಕಾಂಗಳು ಆರ್ಥಿಕವಾಗಿ ಸದೃಢವಾಗಿವೆ, ಈಗ ಖಾಸಗೀಕರಣದ ಅಗತ್ಯವಿಲ್ಲ ಎಂದು ತಿರಸ್ಕರಿಸಿತ್ತು. ಆದರೆ 2003ರ ವಿದ್ಯುತ್ ಕಾಯಿದೆ ಸೆಕ್ಷನ್ 14ರ ಅಡಿ ಖಾಸಗಿ ಕಂಪನಿಗಳೂ ವಿತರಣಾ ಪರವಾನಿಗೆಗೆ ಅರ್ಜಿ ಹಾಕಬಹುದು ಎಂಬ ಅಂಶವಿದೆ. ಇದನ್ನೇ ಮುಂದು ಮಾಡಿಕೊಂಡು 20 ವರ್ಷಗಳಿಂದ ಇದ್ದ ಈ ಕಾನೂನು ಬಳಸಿಕೊಂಡು ಖಾಸಗಿ ವಿತರಣೆಗೆ ಅವಕಾಶ ನೀಡಿ ಎಂದು ಇದೇ ಮೊದಲ ಬಾರಿಗೆ ಟಾಟಾ ಪವರ್ ಕೆಇಆರ್‌ಸಿಗೆ ಅರ್ಜಿ ಹಾಕಿದೆ. ಇದೇ ನೌಕರರ ಆತಂಕಕ್ಕೆ ಕಾರಣವಾಗಿದೆ ಎಂದರು. 2003ರ ವಿದ್ಯುತ್ ಕಾಯಿದೆ ಸೆಕ್ಷನ್ 14ರ ಅಡಿ ಖಾಸಗಿ ಕಂಪನಿಗಳು ವಿತರಣಾ ಪರವಾನಿಗೆಗೆ ಅರ್ಜಿ ಹಾಕಿರುವ ಟಾಟಾ ಪವರ್ ಸಂಸ್ಥೆಯು ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆಗೆ ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಕೆಇಆರ್‌ಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಜೂನ್ 23ಕ್ಕೆ ಆಕ್ಷೇಪಣೆ ಸಲ್ಲಿಸುವ ಕೊನೆಯ ದಿನವಾಗಿದೆ.ದಯವಿಟ್ಟು ರೈತರು, ಕಾರ್ಮಿಕರು ಸಂಘ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸುವ ಮೂಲಕ ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು ಎಂದರು.

ಈ ವೇಳೆ ಬೆಸ್ಕಾಂ ಜಿಲ್ಲಾ ನೌಕರರ ಸಂಘದ ಗೋವರ್ಧನ್ ಸಾಗರ್. ನೌಕರರ ಸಂಘದ ಬೆವಿಕಂ ಉಪಾಧ್ಯಕ್ಷ ಕೆ. ಶ್ರೀನಿವಾಸ್, ಕಾರ್ಯದರ್ಶಿ ಮೂರ್ತಿ ಮತ್ತಿತರರು ಇದ್ದರು.

ಪೂರ್ತಿ ಖಾಸಗೀಕರಣ ಆಗಲ್ಲ: ಎಇ

ಆದರೆ ಈ ಸಂಬಂಧ ಮಾಧ್ಯಮದವರು ಬೆಸ್ಕಾಂ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್ ಕುಮಾರ್ ಅವರ ಪ್ರತಿಕ್ರಿಯೆ ಕೇಳಿದಾಗ ಕೆಇಆರ್‌ಸಿ ಎದುರು ಟಾಟಾ ಪವರ್ ಸಂಸ್ಥೆ ಅರ್ಜಿ ಹಾಕಿರುವುದು ನಿಜ. ಇದನ್ನೇ ನೌಕರರು ಖಾಸಗೀಕರಣ ಎನ್ನುತ್ತಿದ್ದಾರೆ. ಬೆಸ್ಕಾಂ ಪೂರ್ತಿ ಖಾಸಗೀಕರಣ ಆಗಲ್ಲ, ಸರ್ಕಾರದ ಒಡೆತನದಲ್ಲೇ ಇರಲಿದೆ. ಆದರೆ ಟಾಟಾ ಪವರ್‌ನಂಥ ಖಾಸಗಿ ಕಂಪನಿಗೆ ಬೆಸ್ಕಾಂ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವಿತರಿಸಲು ಪರವಾನಿಗೆ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಇದಾದಲ್ಲಿ ನಮ್ಮದೇ ಲೈನು, ನಮ್ಮದೇ ಟಿ.ಸಿ, ನಮ್ಮದೇ ಪವರ್ ಸ್ಟೇಷನ್. ಆದರೆ ಅವರು ಮೀಟರ್‌ಗಳನ್ನು ಹಾಕಿಕೊಳ್ಳುತ್ತಾರೆ. ಇದೊಂದು ರೀತಿ ಬಿಎಸ್‌ಎನ್‌ಎಲ್ ಮತ್ತು ಏರ್‌ಟೆಲ್, ಜಿಯೋ ನಡುವಿನ ಸ್ಪರ್ಧೆಯಂತಾಗಲಿದೆ ಎಂದಿದ್ದಾರೆ.

ಸಿಕೆಬಿ-1

ನಗರದ ವಾಪಸಂದ್ರದ ಬೆಸ್ಕಾಂ ವಿಭಾಗೀಯ ಕಚೇರಿ ಎದುರು ನೌಕರರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷಗಳ ಚನ್ನಗಿರಿ ಅಜ್ಞಾತವಾಸ ಅಂತ್ಯ ಸನ್ನಿಹಿತ
ಹಳ್ಳ ಮುಚ್ಚಿದ್ದ ಹೋರಾಟದಲ್ಲಿ ನನ್ನ ಗೆಲುವು: ಬಿ.ಪಿ.ಹರೀಶ