ಬೇಟೋಳಿ ಸರ್ಕಾರಿ ಶಾಲೆಗೆ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

KannadaprabhaNewsNetwork | Published : Apr 13, 2025 2:03 AM

ಸಾರಾಂಶ

ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪ್ರಶಸ್ತಿಯನ್ನು ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

2024-25ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಪ್ರಶಸ್ತಿಯನ್ನು ವಿರಾಜಪೇಟೆ ಸಮೀಪದ ಗುಂಡಿಕೆರೆಯಲ್ಲಿರುವ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪುಷ್ಟಿ ಯೋಜನೆಯಡಿ ಸಮೀಕ್ಷೆ ಕೈಗೊಂಡು ಇಡೀ ಜಿಲ್ಲೆಯಲ್ಲಿ ಆಯ್ಕೆಗೊಂಡಿರುವ ಒಟ್ಟು ಮೂರು ಶಾಲೆಯ ಎಸ್ ಡಿ ಎಂ ಸಿ ಪೈಕಿ ವಿರಾಜಪೇಟೆ ತಾಲೂಕಿನಿಂದ ಆಯ್ಕೆಗೊಂಡ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಏಕೈಕ ಶಾಲೆಯಾಗಿದೆ.

ಸರ್ಕಾರಿ ಶಾಲೆಗಳನ್ನು ಮತ್ತು ಎಸ್ ಡಿ ಎಂ ಸಿ ಗಳನ್ನು ಪ್ರೋತ್ಸಾಹಿಸಲು ಸರಕಾರ ಪ್ರಶಸ್ತಿ ಘೋಷಿಸಿತ್ತು. ಇದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾ ವಾಹಿನಿ ಪೋರ್ಟಲ್ ನಲ್ಲಿ ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ ಎಸ್ ಡಿ ಎಂ ಸಿ ಗಳ ಸಮೀಕ್ಷೆಯನ್ನು ಆಯೋಜಿಸಿ ಇದರಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು. ಇದರಂತೆ ಸಮೀಕ್ಷೆಯ ಅಂತಿಮ ಘಟ್ಟದಲ್ಲಿ ದೊರೆಯುವ ಗರಿಷ್ಠ ಅಂಕಗಳ ಆಧಾರದಲ್ಲಿ ಜಿಲ್ಲಾವಾರು ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಆಯ್ಕೆಗೊಂಡಿರುವ ಗುಂಡಿಕೆರೆಯಲ್ಲಿರುವ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಒಂದು ಲಕ್ಷ ರು. ಮೊತ್ತದ ಬಹುಮಾನವನ್ನು ಇಲಾಖೆ ಬಿಡುಗಡೆಗೊಳಿಸಿದೆ.

ಬಹುಮಾನದ ಮೊತ್ತವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಶಾಲೆಯ ಮೂಲಭೂತ ಸೌಕರ್ಯಗಳಿಗೆ ಮಾತ್ರ ಬಳಸಿಕೊಳ್ಳಬೇಕೆಂಬ ಇಲಾಖೆಯ ನಿರ್ದೇಶನದಂತೆ ಶಾಲೆಗೆ ನೂತನವಾಗಿ ಲ್ಯಾಪ್ಟಾಪ್, ಗ್ರೀನ್ ಬೋರ್ಡ್ ಮತ್ತು ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲಾಗಿದೆ.

ಬಹುಮಾನದ ಮೊತ್ತದಲ್ಲಿ ಖರೀದಿಸಲಾಗಿರುವ ಲ್ಯಾಪ್ಟಾಪ್ ಅನ್ನು ಬುಧವಾರದಂದು ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗು ಕೆದಮುಳ್ಳೂರು ಗ್ರಾ. ಪಂ. ಸದಸ್ಯರಾದ ಮೀತಲತಂಡ ಎಂ ಇಸ್ಮಾಯಿಲ್ ಅವರು ಶಾಲೆಯ ಮುಖ್ಯ ಶಿಕ್ಷಕರಾದ ಸೀತಾ ಅವರಿಗೆ ಹಸ್ತಾಂತರಿಸಿದರು. ನಂತರ ಮಾತನಾಡಿದ ಇಸ್ಮಾಯಿಲ್, ಮೊದಲಿನಿಂದಲೂ ಗುಣಮಟ್ಟದ ಶಿಕ್ಷಣದ ಮೂಲಕ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶೇಷವಾಗಿ ಗಮನ ಸೆಳೆದಿದೆ. ಈ ಕಾರಣದಿಂದ ಖಾಸಗಿ ಶಾಲೆಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದು ನಿಂತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇಚ್ಛಾಶಕ್ತಿಯೊಂದಿದ್ದರೆ ಸರ್ಕಾರಿ ಶಾಲೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಬಹುದು ಮತ್ತು ಪೋಷಕರನ್ನು ಆಕರ್ಷಿಸಬಹುದು ಎಂಬುದಕ್ಕೆ ಈ ಸರಕಾರಿ ಶಾಲೆ ಉತ್ತಮ ಮಾದರಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾರ್ಗದರ್ಶಕ ಶಿಕ್ಷಕರಾಗಿ ಆಗಮಿಸಿದ ವಿರಾಜಪೇಟೆಯ ಜಯಪ್ರಕಾಶ್ ನಾರಾಯಣ್, ಪ್ರೌಢಶಾಲೆಯ ಶಿಕ್ಷಕಿ ಸೀತ, ಎಸ್ ಡಿ ಎಂ ಸಿ ಸದಸ್ಯರಾದ ವನಿತಾ ಕುಮಾರ, ಶಾಲೆಯ ದೈಹಿಕ ಶಿಕ್ಷಕರಾದ ತಿಮ್ಮಯ್ಯ, ಸಹ ಶಿಕ್ಷಕರಾದ ಶ್ರೀನಿವಾಸ್, ಸುಜಾತ ಮೊದಲಾದವರು ಉಪಸ್ಥಿತರಿದ್ದರು.

Share this article