ಕೇಂದ್ರ ಸರ್ಕಾರದಿಂದ ಜನರಿಗೆ ವಿಶ್ವಾಸದ್ರೋಹ: ಶಿವರಾಜ ತಂಗಡಗಿ

KannadaprabhaNewsNetwork |  
Published : Nov 12, 2026, 02:00 AM IST
ಕಾರಟಗಿಯಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಕಾರಟಗಿ ಪಟ್ಟಣದ ಐಬಿ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ್ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ವತಿಯಿಂದ ಬುಧವಾರ ಸಚಿವ ಶಿವರಾಜ ತಂಗಡಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿದರು.

ಕಾರಟಗಿ: ರಾಜ್ಯ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಆದರೆ, ಕೇಂದ್ರದ ಮೋದಿ ಸರ್ಕಾರ ಚುನಾವಣೆ ಮುಂಚೆ ಹೇಳಿದ್ದೇ ಬೇರೆ, ಈಗ ಮಾಡುತ್ತಿರುವುದೇ ಬೇರೆ. ಜನರಿಗೆ ವಿಶ್ವಾಸದ್ರೋಹ ಎಸಗಿ ಜನರಿಗೆ ಮೋಸ ಮಾಡಿದೆ. ಇದೊಂದು ವಚನ ಭ್ರಷ್ಟ ಸರ್ಕಾರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಐಬಿ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ್ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ವತಿಯಿಂದ ಬುಧವಾರ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಅವರು ಮಾತನಾಡಿದರು. ನೂರಾರು ಜನರಿಗೆ ನೇರ ಸಾಲ ಕೊಟ್ಟಿದ್ದೇವೆ. ಇಷ್ಟೇ ಅಲ್ಲ, ಪ್ರಜಾಸೌಧ, ಬಸ್ ಡಿಪೋ, ₹೨೨ ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ, ಯರಡೋಣ ಗ್ರಾಮದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಹಾಗೂ ನವಲಿ ಮೊರಾರ್ಜಿ ವಸತಿ ಶಾಲೆಗೆ ಅನುದಾನ ಹೀಗೆ ಅನೇಕ ಯೋಜನೆಗಳೂ ಜಾರಿಯಲ್ಲಿವೆ ಎಂದರು.

ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ ನಯಾಪೈಸೆ ಅನುದಾನ ಕೊಟ್ಟಿಲ್ಲ. ಇನ್ನು ಪ್ರತಿವರ್ಷ ಯೋಗ ದಿನ ಆಚರಿಸುತ್ತಿದ್ದೇವೆ. ಅಲ್ಲೂ ಚಾಪೆ ನಮ್ಮದೇ. ಸ್ವಚ್ಛತಾ ಅಭಿಯಾನದಲ್ಲೂ ಪೊರಕೆ ನಮ್ಮದೇ, ಕಸ ನಮ್ಮದೇ, ಕಸ ಬಳಿಯುವವರು ಕೂಡಾ ನಾವೇ. ಆ ಕಾರಣಕ್ಕೆ ಅಭಿಯಾನವೇ ನಿಷ್ಪ್ರಯೋಜಕವಾಗಿದೆ ಎಂದರು.ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ್ ಅವರು ಮೂರೂವರೆ ವರ್ಷಗಳಲ್ಲಿ ಸಚಿವ ಶಿವರಾಜ ತಂಗಡಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿತರಿಸಲಾಗುತ್ತಿರುವ ೫೫೦ಕ್ಕೂ ಹೆಚ್ಚು ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ವಿತರಣಾ ಕಾರ್ಯಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಶಿವರೆಡ್ಡಿ ನಾಯಕ, ಪುರಸಭೆ ಸದಸ್ಯರಾದ ಎಚ್. ಈಶಪ್ಪ ಮತ್ತು ಹಿರೇಬಸಪ್ಪ ಸಜ್ಜನ್, ಚೆನ್ನಬಸಪ್ಪ ಸುಂಕದ್, ನಾಗರಾಜ ಅರಳಿ, ರೆಡ್ಡಿ ಶ್ರೀನಿವಾಸ್, ಬಸವರಾಜ ನಿರಗಂಟಿ, ನಾಗರಾಜ ಅರಳಿ, ಸೋಮನಾಥ ದೊಡ್ಡಮನಿ, ಶೈಲಜಾ ಹಿರೇಮಠ, ದೀಪಾ ರಾಠೋಡ್, ಅಯ್ಯಪ್ಪ ಉಪ್ಪಾರ, ಶರಣೇಗೌಡ ಕೊ.ಪಟೇಲ್, ದೇವರಾಜ್ ಬಾವಿಕಟ್ಟಿ, ಶರಣಯ್ಯಸ್ವಾಮಿ ಯರಡೋಣಾ, ಲಿಂಗೇಶ್ ಕಲ್ಗುಡಿ ಇನ್ನಿತರರು ಇದ್ದರು.

ಶರಣಪ್ಪ ಪರಕಿ ಮತ್ತು ಶರಣಪ್ಪ ಕಾಯಿಗಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌