ಕನ್ನಡಪ್ರಭ ವಾರ್ತೆ ಮಂಡ್ಯ
ಗುಣಮಟ್ಟದ ಶಿಕ್ಷಣದಿಂದ ಉತ್ತಮ ಫಲಿತಾಂಶ ಲಭ್ಯಗೊಂಡು ಕಾಲೇಜಿಗೆ ಕೀರ್ತಿ ಸಂದಿದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ ಆನಂದ್ ಹೇಳಿದರು.ನಗರದಲ್ಲಿರುವ ಪಿಇಎಸ್ ಸ್ವಾಮಿ ವಿವೇಕಾನಂದ ರಂಗ ಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ವಿಜ್ಞಾನ,ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿದ್ದ ಪಿಇಎಸ್ ಉತ್ಸವ, ಪ್ರತಿಭಾ ಪುರಸ್ಕಾರ, ಪಾರಂಪರಿಕ ದಿನೋತ್ಸವ-ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪದವಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಅತ್ಯುತ್ತಮ ಫಲಿತಾಂಶ ದಾಖಲಿಸಿ, ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಅಧ್ಯಾಪಕರು ಮತ್ತಷ್ಟು ಸಹಕಾರ ನೀಡಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉನ್ನತಸ್ಥಾನಕ್ಕೇರಿಸಬೇಕು ಎಂದು ನುಡಿದರು.ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕೆಂದು ನಮ್ಮ ತಾತ ಕೆ.ವಿ.ಶಂಕರಗೌಡ ಮತ್ತು ಅವರ ಗೆಳೆಯರು ಕಟ್ಟುದ ಸಂಸ್ಥೆ ಇದಾಗಿದೆ, ನಾಟಕ ಪ್ರದರ್ಶನ ಮಾಡಿ, ರೈತರಿಂದ ದೇಣಿಗೆ ಸಂಗ್ರಹಿಸಿ, ಶ್ರಮಪಟ್ಟು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ, ಗ್ರಾಮೀಣ ರೈತರ ಮಕ್ಕಳಿಗೆ ಶಿಕ್ಷಣ ಲಭಿಸುವಂತೆ ಮಾಡಿದರು ಎಂದು ಸ್ಮರಿಸಿದರು.
ಪದವಿ ಪಡೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯನ್ನು ಮರೆಯಬೇಡಿ, ಪೋಷಕರ ಆಶಯದಂತೆ ನಡೆದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಪ್ರತಿಭಾವಂತರಾಗಿ ಸಾಧನೆ ಮಾಡುವಂತೆ ಆಶಿಸಿದರು.ಜನತಾ ಶಿಕ್ಷಣ ಟ್ರಸ್ಟ್ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ, ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಕಡಿಮೆ ಇದ್ದು, ದಾಖಲಾತಿ ಹೆಚ್ಚಾದರೆ ವಿಸ್ತರಿಸಿಕೊಳ್ಳುತ್ತಾರೆ, ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭಿಸುವುದು ಸಂಘ-ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳಿಂದ ಎನ್ನುವುದು ಜಗಜ್ಜಾಹೀರಾಗಿದೆ ಎಂದರು.
ವಿದ್ಯಾರ್ಥಿಗಳು ನೀವು ನಿಮ್ಮ ಅಕ್ಕ-ಪಕ್ಕದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪ್ರಚಾರ ಪಡೆಸಿ, ದಾಖಲಾತಿ ಹೆಚ್ಚಾಗುವಂತೆ ಸಹಕಾರ ನೀಡಿ, ಗುಣಮಟ್ಟದ ಶಿಕ್ಷಣ ಮತ್ತು ಎಲ್ಲಾ ಸೌಲಭ್ಯಗಳು ಲಭಿಸುವ ಪಿಇಎಸ್ ಕಾಲೇಜಿಗೆ ವಿದ್ಯಾರ್ಥಿಗಳು ಬರುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.ಬಳಿಕ ಮಾತನಾಡಿದ ಪ್ರಾಂಶುಪಾಲ ಡಾ.ಎಂ.ಮಂಜುನಾಥ್, ಮೈಸೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ನಡುವೆ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ, ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು, ವಿದ್ಯಾರ್ಥಿಗಳ ಪೋಷಕರು ಸಾಥ್ ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಪಿಇಎಸ್ ವಿಜ್ಞಾನ,ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ವಿ.ಸವಿತಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ವೀರೇಶ್, ಪ್ರೊ.ಚಂದ್ರಶೇಖರ್, ಪ್ರೊ.ಗಿರೀಶ್, ಪ್ರೊ.ಸಂತೋಷ್, ಪ್ರೊ.ನಂದೀಶ್, ಪ್ರೊ.ಎಂ.ಶಿವಕುಮಾರ್, ಪ್ರೊ.ಡೇವಿಡ್, ಪ್ರೊ.ಶಾಂತರಾಜು, ಡಾ.ಅಮೃತವರ್ಷಿಣಿ, ಪ್ರೊ.ಭವ್ಯ, ಪ್ರೊ.ಜಯರಾಂ, ಪ್ರೊ.ಮರಿಯಯ್ಯ ಸೇರಿದಂತೆ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಹಾಜರಿದ್ದರು.