ಹಿಂಗಾರಿನಲ್ಲಿ ಹುರುಳಿ ಬೆಳೆಯಿಂದ ಉತ್ತಮವಾದ ಮಣ್ಣಿನ ನಿರ್ವಹಣೆ

KannadaprabhaNewsNetwork |  
Published : Jan 28, 2025, 12:49 AM IST
ಹಮ್ಮಿಕೊಳ್ಳಲಾಗಿದ್ದ | Kannada Prabha

ಸಾರಾಂಶ

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ದತ್ತು ಗ್ರಾಮ ಯೋಜನೆಯಡಿ ನಿಜಲಿಂಗನಪುರದಲ್ಲಿ ಹುರುಳಿ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಗಿ ಅಥವಾ ಮುಸುಕಿನ ಜೋಳದ ನಂತರ ಹಿಂಗಾರಿನಲ್ಲಿ ಹುರುಳಿ ಬೆಳೆಯುವುದರಿಂದ ಮಣ್ಣಿನ ನಿರ್ವಹಣೆ ಉತ್ತಮಗೊಳ್ಳುವುದೆಂದು ಕೃಷಿ ಅಧಿಕಾರಿ ಮಹದೇವಪ್ರಸಾದ್ ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರ ಹರದನಹಳ್ಳಿ ಫಾರಂ ವತಿಯಿಂದ ದತ್ತು ಗ್ರಾಮ ಯೋಜನೆಯಡಿ ನಿಜಲಿಂಗನಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುರುಳಿ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೀಜೋಪಚಾರವನ್ನು ಕಡ್ಡಾಯವಾಗಿ ಮಾಡಬೇಕೆಂದು ಕರೆ ನೀಡಿ, ಏಕದಳ ಬೆಳೆಯ ನಂತರ ದ್ವಿದಳ ಬೆಳೆ ಬೆಳೆಯುವುದರಿಂದ ಹಲವು ಸಸ್ಯ ಕೀಟ ಪೀಡೆಗಳು ಮತ್ತು ರೋಗಾಣುಗಳಿಗೆ ಧಕ್ಕೆಯುಂಟಾಗಿ, ಅವುಗಳ ಜೀವನಚಕ್ರ ಅಪೂರ್ಣಗೊಂಡು, ಅವುಗಳ ನಿರ್ವಹಣೆಯಾಗುವುದು ಮತ್ತು ಬೆಳೆಗಳ ಇಳುವರಿ ಹೆಚ್ಚುವುದು. ಕೃಷಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುವ ಮಣ್ಣು ಮತ್ತು ನೀರು ಸಂರಕ್ಷಣೆ, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ, ಒಕ್ಕಣೆ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರದ ಹವಾಮಾನ ತಜ್ಞ ರಜತ್, ಎಚ್.ಪಿ.ಮಾತನಾಡಿ, ಹವಾಮಾನ ಆಧಾರಿತ ಮುನ್ಸೂಚನೆಗಳ ಮಾಹಿತಿಯ ಮಹತ್ವ ಮತ್ತು ಕೃಷಿಯಲ್ಲಿ ಅವುಗಳ ಅಳವಡಿಕೆ ಕುರಿತು ಮಾಹಿತಿ ನೀಡಿದರು.ಹುರುಳಿ ಬೆಳೆಯ ಸಮಗ್ರ ನಿರ್ವಹಣೆಯ ಮಾಹಿತಿ ಒದಗಿಸಿದರು. ಹೂವಿನ ಹಂತದಲ್ಲಿ ನಿರಂತರವಾಗಿ ಮಳೆಯಾಗುವುದರಿಂದ, ಸೊಪ್ಪು ಹೆಚ್ಚಾಗಿ ಕಾಯಿಗಳ ಸಂಖ್ಯೆ ಕಡಿಮೆಯಾಗುವುದು, ಆದ್ದರಿಂದ ರೈತರು ಸಾಲಿನಲ್ಲಿ ಬಿತ್ತನೆ ಮಾಡಿದರೆ ಹೆಚ್ಚಿನ ತೇವಾಂಶದ ಪ್ರತಿಕೂಲ ಪರಿಣಾಮ ಕ್ಷೀಣಿಸಿ, ಉತ್ತಮ ಗಾಳಿಯಾಡುವಿಕೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು. ಮುಖ್ಯವಾದ ಕಡಿಮೆ ಖರ್ಚಿನ ಬೇಸಾಯ ಕ್ರಮಗಳಾದ ಸಾಲಿನಲ್ಲೇ ಬಿತ್ತನೆ ಮಾಡುವುದರಿಂದ ಅಂತರ ಬೇಸಾಯದಲ್ಲಿ ಕಳೆ ನಿಯಂತ್ರಣ ಸುಲಭವಾಗಿ, ಕೈಯಲ್ಲಿ ಬೀಜ ಎರಚಿ ಬಿತ್ತನೆ ಮಾಡಿ ಬೆಳೆಯುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ಇಳುವರಿ ಪಡೆಯಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಮುಖ್ಯಸ್ಥರಾದ ಡಾ.ಯೋಗೇಶ್, ಜಿ.ಎಸ್. ಪಿ.ಹೆಚ್.ಜಿ.-೯ ಹುರುಳಿ ತಳಿಯು ೧೦೦ ರಿಂದ ೧೦೫ ದಿನಗಳಿಗೆ ಕಟಾವಿಗೆ ಬರುವುದು ಮತ್ತು ಹಳದಿ ನಂಜು ರೋಗಕ್ಕೆ ಸಹಿಷ್ಣುತೆ ಹೊಂದಿದೆ ಎಂದರು. ಕಟಾವಿನ ನಂತರ ಹುರುಳಿಯನ್ನು ಕಣಗಳಲ್ಲೇ ಒಕ್ಕಣೆ ಮಾಡಲು ಕರೆ ನೀಡಿದರು. ರೈತರಾದ ಮಲ್ಲಿಕಾರ್ಜುನಪ್ಪ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಿಗುತ್ತಿರುವ ತಾಂತ್ರಿಕ ಬೆಂಬಲವನ್ನು ಶ್ಲಾಘಿಸಿದರು. ಪ್ರಗತಿಪರ ರೈತರಾದ ಶೇಖರಪ್ಪ, ಕೆಂಚಶೆಟ್ಟಿ ಮತ್ತು ಶಂಕರ್ ಗುರು ಮಾತನಾಡಿ, ಸಾಮಾನ್ಯ ತಳಿಯಲ್ಲಿ ಕಾಯಿಗಳ ಸಂಖ್ಯೆ ಕಡಿಮೆಯಿದ್ದು, ಪಿ.ಹೆಚ್.ಜಿ.-೯ ಹುರುಳಿ ತಳಿಗೆ ಹಳದಿ ನಂಜು ರೋಗ ಮತ್ತು ಬೂದಿ ರೋಗ ಕಂಡು ಬಂದಿಲ್ಲ ಮತ್ತು ಕಾಯಿಗಳ ಸಂಖ್ಯೆ ಹೆಚ್ಚಾಗಿದೆ, ಆದ್ದರಿಂದ ಎಕರೆಗೆ ೧ ರಿಂದ ೧.೫ ಕ್ವಿಂಟಲ್ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. ಭಾಗವಹಿಸಿದ್ದ ಎಲ್ಲ ರೈತರು ಮಾದರಿ ಹುರುಳಿ ಪ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಿ, ಹೆಚ್ಚಿನ ಕಾಯಿಗಳ ಸಂಖ್ಯೆ ಇದೆ ಎಂದು ಹಿಮ್ಮಾಹಿತಿ ನೀಡಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು