ಸಾರಾಂಶ
ನಟ ದರ್ಶನ್‌ಗೆ ಕಾರಾಗೃಹಗಳ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸುತ್ತಿಲ್ಲ. ಹಾಸಿಗೆ, ದಿಂಬು ಕೊಟ್ಟಿಲ್ಲ ಎಂಬ ಆರೋಪದ ಕುರಿತು ವಿವರಣೆ ನೀಡುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗೆ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಕಾರಾಗೃಹಗಳ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸುತ್ತಿಲ್ಲ. ಹಾಸಿಗೆ, ದಿಂಬು ಕೊಟ್ಟಿಲ್ಲ ಎಂಬ ಆರೋಪದ ಕುರಿತು ವಿವರಣೆ ನೀಡುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗೆ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಾಲಯದ ಆದೇಶದ ಹೊರತಾಗಿಯೂ ತಮಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಜೈಲಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ದರ್ಶನ್ ಮೆಮೋ ಸಲ್ಲಿಸಿದ್ದಾರೆ. ಈ ಮೆಮೋ ವಿಚಾರಣೆ ನಡೆಸಿದ ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು, ಅರ್ಜಿದಾರರು ಮಾಡಿರುವ ಆರೋಪಕ್ಕೆ ಸಂಬಂಧಿಸಿ ಸೆ.17 ಅಥವಾ ಅದಕ್ಕಿಂತ ಮುಂಚಿತವಾಗಿ ಜೈಲಿನ ಸಂಬಂಧಪಟ್ಟ ಅಧಿಕಾರಿ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿದರು.
ತಮಗೆ ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ಒದಗಿಸುವಂತೆ ಕೋರಿ ದರ್ಶನ್ ಮನವಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಕರ್ನಾಟಕ ಕಾರಾಗೃಹಗಳ ಕೈಪಿಡಿಯನುಸಾರ ದರ್ಶನ್‌ಗೆ ಕನಿಷ್ಠ ಸೌಲಭ್ಯ ಕಲ್ಪಿಸುವಂತೆ ಪರಪ್ಪನ ಅಗ್ರಹಾರ ಜೈಲಧಿಕಾರಿಗಳಿಗೆ ಸೆ.9ರಂದು ಸೂಚನೆ ನೀಡಿತ್ತು.
ಇದೀಗ ಮೆಮೊ ಸಲ್ಲಿಸಿರುವ ದರ್ಶನ್, ನ್ಯಾಯಾಲಯದ ಆದೇಶವನ್ನು ಜೈಲಧಿಕಾರಿಗಳು ಪಾಲಿಸುತ್ತಿಲ್ಲ. ಇದರಿಂದ ನ್ಯಾಯಾಲಯದ ಆದೇಶದ ಪೂರ್ವ ಮತ್ತು ನಂತರದ ಪರಿಸ್ಥಿತಿ ಏನೂ ಬದಲಾಗಿಲ್ಲ. ತಮ್ಮ ವಕೀಲರು ಜೈಲಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಾಲಯದ ಆದೇಶದ ಪ್ರತಿ ಸಲ್ಲಿಸಿ ತೀರ್ಪಿನ ಅಂಶಗಳನ್ನು ಅರ್ಥಮಾಡಿಸಲು ಯತ್ನಿಸಿದರು. ಆದರೆ, ಜೈಲಧಿಕಾರಿಗಳು ಮಾತ್ರ ತಮಗೆ ನ್ಯಾಯಾಲಯದ ಆದೇಶ ತಲುಪಿದೆ. ಆದೇಶದ ಅನುಸಾರ ಏನು ಮಾಡಬೇಕೋ, ಅದನ್ನು ಮಾಡುತ್ತೇವೆ. ಅದನ್ನು ನೀವು ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯದ ಆದೇಶ ಪಾಲಿಸದ ಪರಪ್ಪನ ಅಗ್ರಹಾರ ಜೈಲಿನ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು. ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ಶಿಫಾರಸು ಮಾಡಬೇಕು ಎಂದು ಮೆಮೊನಲ್ಲಿ ದರ್ಶನ್ ಕೋರಿದ್ದಾರೆ.
ಜೈಲಿಂದ ವಿವರಣೆ ಕೇಳಿದ ನ್ಯಾಯಾಲಯ
ನಮ್ಮಲ್ಲಿ ಮಾತ್ರ!ನಿಯಮಾವಳಿ ಪ್ರಕಾರ ಹಾಸಿಗೆ, ದಿಂಬು ನೀಡಲು ಅವಕಾಶವಿಲ್ಲ ಎಂಬ ಕಾರಣ ನೀಡಿ ಜೈಲಧಿಕಾರಿಗಳು ಆ ಸೌಲಭ್ಯಗಳನ್ನು ದರ್ಶನ್‌ಗೆ ನೀಡಿಲ್ಲ ಎಂದು ‘ಕನ್ನಡಪ್ರಭ’ ಮಾತ್ರ ಸೆ.11ರಂದು ವರದಿ ಮಾಡಿತ್ತು.