ನಟ ದರ್ಶನ್‌ ಭದ್ರತೆಗೆ 24 ತಾಸು ಐವರು ಅಧಿಕಾರಿಗಳು!

| N/A | Published : Sep 11 2025, 12:03 AM IST

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ  ನಟ ದರ್ಶನ್ ತೂಗುದೀಪ ಅವರಿಗೆ ಸಹಾಯಕ ವರಿಷ್ಠಾಧಿಕಾರಿ (ಎಎಸ್‌ಪಿ) ನೇತೃತ್ವದಲ್ಲಿ ಐವರು ಸಿಬ್ಬಂದಿಯನ್ನು 24/7 ಭದ್ರತೆಗೆ ನಿಯೋಜಿಸಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಬಿಗಿ ಕಣ್ಗಾವಲು ವ್ಯವಸ್ಥೆ ಕಲ್ಪಿಸಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಹಾಗೂ ಕನ್ನಡ ಚಲನಚಿತ್ರ ನಟ ದರ್ಶನ್ ತೂಗುದೀಪ ಅವರಿಗೆ ಸಹಾಯಕ ವರಿಷ್ಠಾಧಿಕಾರಿ (ಎಎಸ್‌ಪಿ) ನೇತೃತ್ವದಲ್ಲಿ ಐವರು ಸಿಬ್ಬಂದಿಯನ್ನು 24/7 ಭದ್ರತೆಗೆ ನಿಯೋಜಿಸಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಬಿಗಿ ಕಣ್ಗಾವಲು ವ್ಯವಸ್ಥೆ ಕಲ್ಪಿಸಿದೆ.

ಅಲ್ಲದೆ ತಲೆ ದಿಂಬು ಹಾಗೂ ಹಾಸಿಗೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ದರ್ಶನ್ ಅವರಿಗೆ ಅಧಿಕಾರಿಗಳು ಶಾಕ್ ನೀಡಿದ್ದು, ನ್ಯಾಯಾಲಯದ ಆದೇಶದನ್ವಯ ಕಾರಾಗೃಹ ನಿಯಮಾವಳಿ ಅನುಸಾರ ಕನಿಷ್ಠ ಸೌಲಭ್ಯಗಳ ಪಟ್ಟಿಯಲ್ಲಿಲ್ಲದ ತಲೆ ದಿಂಬು ಹಾಗೂ ಹಾಸಿಗೆ ಕೊಡಲು ನಿರಾಕರಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಜಾಮೀನು ರದ್ದು ಆದೇಶದಲ್ಲಿ ಸುಪ್ರೀಂ ಕೋರ್ಟ್ ಕಟು ನಿಲುವು ತಾಳಿದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಮೇಲೆ ಜೈಲಿನಲ್ಲಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ನಿಯಮ ಉಲ್ಲಂಘನೆ ಸಂಬಂಧ ಸಣ್ಣ ಆರೋಪ ಕೂಡ ಬಾರದಂತೆ ಮುಂಜಾಗ್ರತೆ ವಹಿಸಿದ್ದಾರೆ. ಹೀಗಾಗಿ ಕಳೆದ ಬಾರಿ ಚಲನಚಿತ್ರ ರಂಗದ ಸ್ಟಾರ್ ನಟ ಎಂಬ ಕಾರಣಕ್ಕೆ ‘ಮುಕ್ತ ಸ್ವಾತಂತ್ರ್ಯ’ ಪಡೆದಿದ್ದ ದರ್ಶನ್ ಅವರಿಗೆ ಈಗ ಬಂದೀಖಾನೆಯ ನೈಜ ಜೀವನದ ತಾಪ ಅರಿವಾಗುತ್ತಿದೆ ಎಂದು ತಿಳಿದು ಬಂದಿದೆ.

ಹೊದಿಕೆ, ತಟ್ಟೆ, ಲೋಟ ಅಷ್ಟೆ:

ಎರಡನೇ ಬಾರಿಗೆ ಜೈಲಿಗೆ ಬಂದ ದರ್ಶನ್‌ ಅವರಿಗೆ ಜೈಲಿನ ವಾಸ್ತವ ಬದುಕು ತೆರೆದುಕೊಂಡಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ (ಕ್ವಾರೆಂಟೈನ್‌) ಬ್ಯಾರಕ್‌ನ ಸೆಲ್‌ ಅನ್ನು ಅವರಿಗೆ ಕಾರಾಗೃಹದ ಅಧಿಕಾರಿಗಳು ನೀಡಿದ್ದಾರೆ. ಸಾಮಾನ್ಯ ವಿಚಾರಣಾಧೀನ ಕೈದಿಗೆ ನೀಡುವಂತೆ ದರ್ಶನ್‌ ಅವರಿಗೆ ತಟ್ಟೆ, ಲೋಟ, ಪುಟ್ಟ ಬಟ್ಟಲು (ಬೌಲ್‌), ಹೊದಿಕೆ ಹಾಗೂ ಕಾರ್ಪೆಟ್‌ (ನೆಲ ಹಾಸು) ಅನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಅಲ್ಲದೆ, ಜೈಲಿನಲ್ಲೇ ಆಹಾರ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತೆಗೆ 15 ಸಿಬ್ಬಂದಿ ನಿಯೋಜನೆ:

ದರ್ಶನ್ ಅವರ ಭದ್ರತೆಗೆ ಎಎಸ್ಪಿ ನೇತೃತ್ವದಲ್ಲಿ ಜೈಲರ್‌, ಮುಖ್ಯ ವಾರ್ಡನ್ ಹಾಗೂ ವಾರ್ಡನ್ ಸೇರಿ 15 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾಮಾನ್ಯವಾಗಿ 200 ಕೈದಿಗಳ ಭದ್ರತೆಗೆ ಒಂದಿಬ್ಬರನ್ನು ಹಾಕಿರುತ್ತೇವೆ, ದರ್ಶನ್‌ ಕೇಸಲ್ಲಿ ಮಾತ್ರ ಸುಪ್ರೀಂ ಕೋರ್ಟ್‌ ಎಚ್ಚರಿಕೆ ಕೊಟ್ಟಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. 

ಹೀಗಾಗಿ ದರ್ಶನ್‌ಗೆ ಪ್ರತಿದಿನ ಮೂರು ಪಾಳಿಯಲ್ಲಿ ಐವರಂತೆ ತಂಡ ಕಾವಲಿರುತ್ತದೆ. ಬೆಳಗ್ಗೆ 6.30 ರಿಂದ 2 ಗಂಟೆ, ಮಧ್ಯಾಹ್ನ 2 ರಿಂದ ರಾತ್ರಿ 10 ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6.30ರವರೆಗೆ ಹೀಗೆ ಮೂರು ಪಾಳಿಯದಲ್ಲಿ ಅಧಿಕಾರಿ-ಸಿಬ್ಬಂದಿ ಕೆಲಸ ಮಾಡುತ್ತಾರೆ. ಅಲ್ಲದೆ ಪ್ರತಿದಿನ ಸಂಜೆ ದರ್ಶನ್ ಬ್ಯಾರಕ್‌ಗೆ ಮುಖ್ಯ ಅಧೀಕ್ಷಕರು ಸಹ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಜೈಲಿನಲ್ಲಿ ದರ್ಶನ್ ಅವರಿಗೆ ಇತರೆ ಕೈದಿಗಳ ಭೇಟಿಗೆ ನಿರ್ಬಂಧವಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ದರ್ಶನ್ ವಿಚಾರದಲ್ಲಿ ಕಾನೂನು ಉಲ್ಲಂಘನೆಯಾದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ತಲೆ ದಿಂಬು-ಹಾಸಿಗೆ ಇಲ್ಲ 

ತಲೆ ದಿಂಬು ಹಾಗೂ ಹಾಸಿಗೆ ನೀಡುವಂತೆ ದರ್ಶನ್ ಅವರ ಅರ್ಜಿ ಸ್ವೀಕರಿಸಿದ್ದ ನ್ಯಾಯಾಲಯವು, ಕಾರಾಗೃಹದ ಮ್ಯಾನುಯಲ್‌ ಅನುಸಾರ ಕನಿಷ್ಠ ಸೌಲಭ್ಯ ನೀಡುವಂತೆ ಕಾರಾಗೃಹದ ಅಧಿಕಾರಿಗಳಿಗೆ ಆದೇಶಿಸಿತ್ತು. ಹೀಗಾಗಿ ನಿಯಮಾವಳಿ ಅನುಸಾರ ವಿಚಾರಣಾಧೀನ ಅಥವಾ ಸಜಾ ಕೈದಿಗಳಿಗೆ ಹಾಸಿಗೆ ಹಾಗೂ ತಲೆ ದಿಂಬು ನೀಡಲು ಅವಕಾಶವಿಲ್ಲ. ಇದೇ ನಿಯಮ ಪ್ರಕಾರ ದರ್ಶನ್ ಅವರಿಗೆ ತಲೆ-ದಿಂಬು ನೀಡಿಲ್ಲ. ಆದರೆ ಜೈಲಿನೊಳಗೆ ಬಿಸಿಲು ಬಂದಾಗ ಅವರಿಗೆ ವಾಕಿಂಗ್ ಮಾಡಲು ಅವಕಾಶ ಕೊಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪವಿತ್ರಾ ಭೇಟಿಗೆ ಅವಕಾಶವಿದ್ದರೂ ಪಡೆದಿಲ್ಲ: 

ಜೈಲಿನಲ್ಲಿ ಅಪರಾಧ ಪ್ರಕರಣದಲ್ಲಿ ಬಂಧಿತ ಸಹ ಆರೋಪಿಗಳು ಪರಸ್ಪರ ಸಂದರ್ಶನಕ್ಕೆ ನಿಯಮಾವಳಿ ಪ್ರಕಾರ ಅವಕಾಶವಿದೆ. ಆದರೆ ಈ ಅವಕಾಶವನ್ನು ದರ್ಶನ್ ಅಥವಾ ಪವಿತ್ರಾ ಬಳಸಿಕೊಂಡಿಲ್ಲ. ಕಳೆದ ವರ್ಷ ಬಂದಾಗಲೂ ಅವರು ಪರಸ್ಪರ ಭೇಟಿಗೆ ಅನುಮತಿ ಕೋರಿರಲಿಲ್ಲ ಎಂದು ಮೂಲಗಳು ಹೇಳಿವೆ.

Read more Articles on