ಸೆ.೧೩ರಂದು ಪಾಂಡವಪುರದಲ್ಲಿ ಸ್ವರಾಜ್ ಉತ್ಸವ: ಶಾಸಕ ದರ್ಶನ್

| Published : Sep 08 2025, 01:00 AM IST

ಸೆ.೧೩ರಂದು ಪಾಂಡವಪುರದಲ್ಲಿ ಸ್ವರಾಜ್ ಉತ್ಸವ: ಶಾಸಕ ದರ್ಶನ್
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿಯವರ ಸ್ವರಾಜ್ಯದ ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಸ್ವರಾಜ್ ಉತ್ಸವ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರಯತ್ನ ಕೇವಲ ಕಾರ್ಯಕ್ರಮವಲ್ಲ. ಇದು ನೂತನ ಆಲೋಚನೆಗಳು, ಆವಿಷ್ಕಾರಗಳು ಮತ್ತು ಸ್ಥಳೀಯ ಪರಿಹಾರಗಳನ್ನು ಕಂಡುಕೊಳ್ಳುವ ಸಮ್ಮೇಳನ.

ಕನ್ನಡಪ್ರಭ ವಾರ್ತೆ ಮಂಡ್ಯ

ಪುಟ್ಟಣ್ಣಯ್ಯ ಫೌಂಡೇಶನ್, ಕರ್ನಾಟಕ ರಾಜ್ಯ ರೈತ ಸಂಘದಿಂದ ನಮ್ಮ ನಡೆ ಸ್ವರಾಜ್ಯ ಗ್ರಾಮದೆಡೆಗೆ ಎಂಬ ಘೋಷವಾಕ್ಯದೊಂದಿಗೆ ಸೆ.೧೩ರಂದು ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಸ್ವರಾಜ್ ಉತ್ಸವ ಏರ್ಪಡಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಗಾಂಧೀಜಿಯವರ ಸ್ವರಾಜ್ಯದ ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಸ್ವರಾಜ್ ಉತ್ಸವ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರಯತ್ನ ಕೇವಲ ಕಾರ್ಯಕ್ರಮವಲ್ಲ. ಇದು ನೂತನ ಆಲೋಚನೆಗಳು, ಆವಿಷ್ಕಾರಗಳು ಮತ್ತು ಸ್ಥಳೀಯ ಪರಿಹಾರಗಳನ್ನು ಕಂಡುಕೊಳ್ಳುವ ಸಮ್ಮೇಳನ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕೃಷಿ, ಆಹಾರ ವ್ಯವಸ್ಥೆ, ಶಿಕ್ಷಣ, ಮಹಿಳಾ ಸಬಲೀಕರಣ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಆಡಳಿತ, ಲಿಂಗಸಮಾನತೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಚರ್ಚೆ ಮತ್ತು ಪ್ರದರ್ಶನಗಳ ಮೂಲಕ ಸ್ವರಾಜ್ಯದ ಹೊಸ ದಾರಿಯನ್ನು ತೋರಿಸಲಿವೆ. ಇದು ಸ್ವಾವಲಂಬಿ ಗ್ರಾಮಗಳತ್ತ ಇಡುತ್ತಿರುವ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ೩೦ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸರ್ಕಾರೇತರ ಸಂಸ್ಥೆಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಕೃಷಿ, ಆರೋಗ್ಯ, ಆರ್ಥಿಕ ಸ್ವಾವಲಂಬನೆ, ಯುವಜನ ಅಭಿವೃದ್ಧಿ, ತಂತ್ರಜ್ಞಾನ, ಉದ್ಯಮಶೀಲತೆ, ಶಿಕ್ಷಣ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಎನ್‌ಜಿಓಗಳು ಪ್ರದರ್ಶನ, ಪ್ರಾತ್ಯಕ್ಷಿಕೆ, ನೇರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತವೆ ಎಂದರು.

ಸ್ವರಾಜ್ ಉತ್ಸವದಲ್ಲಿ ೫೦ಕ್ಕೂ ಹೆಚ್ಚು ಮಳಿಗೆಗಳು ಕ್ರೀಡಾಂಗಣದಲ್ಲಿ ಸ್ಥಾಪನೆಯಾಗಲಿದ್ದು ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಮಾಹಿತಿ, ಜಾಗೃತಿ, ಅನುಭವ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಾಗುವುದು ಎಂದರು.

ಹಳ್ಳಿಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಗಳ ನಡುವೆಯೂ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಮಾರ್ಗಗಳನ್ನು ಜನರಿಗೆ ತೋರಿಸುವುದು ಈ ಉತ್ಸವದ ಗುರಿಯಾಗಿದೆ. ಸುಸ್ಥಿರ ಕೃಷಿ, ಮಿಶ್ರ ಬೆಳೆ ಪದ್ಧತಿ, ನೈಸರ್ಗಿಕ ಕೃಷಿ, ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ, ಮಹಿಳೆಯರ ಸಬಲೀಕರಣ, ಪರಿಸರ ಸ್ನೇಹಿ ಬದುಕಿನ ಕುರಿತು ಈ ಕಾರ್ಯಕ್ರಮ ದಾರಿದೀಪವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮೇಲುಕೋಟೆಯ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಸೌಂದರ್ಯವನ್ನು ಉಳಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೂಡ ಈ ಉತ್ಸವ ಮಹತ್ವದ್ದಾಗಿದೆ ಎಂದು ನುಡಿದರು.