ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಇಂದು ಪಟ್ಟಣದಲ್ಲಿ ಸ್ವರಾಜ್ ಉತ್ಸವಕ್ಕೆ ಚಾಲನೆ

| Published : Sep 13 2025, 02:04 AM IST

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಇಂದು ಪಟ್ಟಣದಲ್ಲಿ ಸ್ವರಾಜ್ ಉತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ರಾಜ್ಯ ರೈತ ಸಂಘದಿಂದ ಸೆ.13ರಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸ್ವರಾಜ್ ಉತ್ಸವಕ್ಕೆ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ರಾಜ್ಯ ರೈತ ಸಂಘದಿಂದ ಸೆ.13ರಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸ್ವರಾಜ್ ಉತ್ಸವಕ್ಕೆ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದೆ.

ಗಾಂಧಿಜೀ ಕಂಡ ಗ್ರಾಮ ಸ್ವರಾಜ್ಯ ಕಲ್ಪನೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಸೂಕ್ತ ಮಾಹಿತಿ ನೀಡಲು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಸ್ವರಾಜ್ ಉತ್ಸವ ಎಂಬ ವಿನೂತನ ಕಾರ್‍ಯಕ್ರಮವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ತಾಲೂಕು ಸೇರಿದಂತೆ ವಿವಿಧಡೆಯಿಂದ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಜನರು, ಮಹಿಳೆಯರು, ಯುವಕ -ಯುವತಿಯರು ಭಾಗವಹಿಸುವ ನಿರೀಕ್ಷೆ ಇದೆ. ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಖಾಸಗಿಯ ಸುಮಾರು 40ಕ್ಕೂ ಅಧಿಕ ವಿವಿಧ ಸಂಸ್ಥೆಗಳು ಭಾಗವಹಿಸಲಿವೆ.

70ಕ್ಕೂ ಅಧಿಕ ಸ್ಟಾಲ್‌ಗಳನ್ನು ಸಿದ್ಧಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ, ಲಿಂಗ ಸಮಾನತೆ, ಯುವ ಜನತೆ ಉದ್ಯಮಶೀಲತೆ, ಪ್ರವಾಸೋದ್ಯಮ, ಆರ್ಥಿಕ ಬದುಕು, ಸ್ವಾವಲಂಬಿ ಬುದಕು, ಗುಡಿ ಕೈಗಾರಿಕೆ, ಸಣ್ಣಕೈಗಾರಿಕೆ, ಸಾವಯವ ಕೃಷಿ, ಹೈನೋದ್ಯಮ, ಮಹಿಳಾ ಸಬಲೀಕರಣ, ಮಣ್ಣು ಸಂರಕ್ಷಣೆ, ಕಸವಿಲೇವಾರಿ, ಪ್ಲಾಸ್ಟಿಕ್ ಮುಕ್ತ, ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸ್ವರಾಜ್ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮಕ್ಕಿಂತ ಜನರಿಗೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಮಾಹಿತಿ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ವಿವಿಧ ವಿಚಾರಗಳ ಬಗ್ಗೆ ಸಂವಾದ, ಚರ್ಚೆಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇದು ಪಕ್ಷಾತೀತವಾಗಿ ನಡೆಯುತ್ತಿರುವ ಕಾರ್ಯಕ್ರಮ. ಗ್ರಾಮ ಸ್ವರಾಜ್ಯ ಕಲ್ಪನೆಯೊಂದಿಗೆ ಸ್ವರಾಜ್ ಉತ್ಸವ ಎಂಬ ವಿನೂತನ ಕಾರ್‍ಯಕ್ರಮದ ಮೂಲಕ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕೆಲಸಕ್ಕೆ ಮುಂದಾಗಿದ್ದೇವೆ. ಜನರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮನವಿ ಮಾಡಿದರು.