ಮೆಕ್ಕೆಜೋಳ ಬಿತ್ತನೆ ಮುನ್ನ ಕೀಟ ನಿಯಂತ್ರಣಕ್ಕೆ ಪ್ರೊಪೆನೊಪಾಸ್ ಎನ್ನುವ ಔಷಧಿಯನ್ನು ಮಣ್ಣಿಗೆ ಸಿಂಪಡಿಸುವುದರಿಂದ ಕೀಟಬಾಧೆ ಕಡಿಮೆಯಾಗುತ್ತದೆ.
ಹಾವೇರಿ: ರೈತರು ಬಿತ್ತನೆ ಮಾಡಿದ ನಂತರ ಬೆಳೆಗಳಿಗೆ ರೋಗಗಳ ಹತೋಟಿಗೆ ಕಷ್ಟ ಪಡುವ ಮುನ್ನ ಬಿತ್ತನೆ ಪೂರ್ವದಲ್ಲಿಯೆ ಮಣ್ಣು ಪರೀಕ್ಷೆಯನ್ನು ಮಾಡಿ ಅದಕ್ಕೆ ಬೇಕಾದ ಸಮಗ್ರ ಔಷಧೋಪಚಾರ ಹಾಗೂ ಬೀಜೋಪಚಾರ ಕೈಗೊಳ್ಳುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ತಜ್ಞ ಎನ್. ರವಿಕುಮಾರ ತಿಳಿಸಿದರು.ತಾಲೂಕಿನ ದೇವಗಿರಿ ಗ್ರಾಮದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ರೋಗ ನಿರ್ವಹಣೆ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಅಡಕೆ, ಮೆಣಸಿನಕಾಯಿ, ಕಬ್ಬು ತರಕಾರಿಗೆ ತಗಲುವ ರೋಗಗಳ ಬಗ್ಗೆ ಸೇರಿದ ರೈತರಿಗೆ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಪಿ. ಬಾಬು ಅವರು, ಎರಡು ತಿಂಗಳ ಕಾಲ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದೇವಗಿರಿಯ ಸುತ್ತಮುತ್ತಲಿನ ರೈತರು ಬೆಳೆದ ಫಸಲುಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ರೈತರು ಬೆಳೆದ ಫಸಲುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಮಗ್ರ ಕಾರ್ಯಾಗಾರ ನಡೆಸಲಿದ್ದಾರೆ. ರೈತರು ತಮ್ಮ ಸಮಸ್ಯೆಗಳನ್ನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.ಉಪನ್ಯಾಸಕ ಕೆ.ಬಿ. ಯಡಳ್ಳಿ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರಿಂದ ರೈತರು ಬೆಳೆಗಳಿಗೆ ಹಾಕಲು ರಾಸಾಯನಿಕ ಗೊಬ್ಬರದ ಕೊರತೆ ಎದುರಿಸುತ್ತಿದ್ದಾರೆ. ಅದರ ಬದಲು ಸಾವಯವ ಗೊಬ್ಬರ ಬಳಕೆಯಿಂದ ಪೋಷಕಾಂಶಗಳು ಹೆಚ್ಚಾಗುತ್ತವೆ. ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎಂದರು.ಸಸ್ಯ ಕೀಟ ತತ್ಞ ಡಾ. ಕೃಷ್ಣಾ ನಾಯಕ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕೆಜೋಳಕ್ಕೆ ಕಾಡುವ ಸೈನಿಕ ಹೂಳು ನಿರ್ವಹಣೆ, ನಿಯಂತ್ರಣದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಮೆಕ್ಕೆಜೋಳ ಬಿತ್ತನೆ ಮುನ್ನ ಕೀಟ ನಿಯಂತ್ರಣಕ್ಕೆ ಪ್ರೊಪೆನೊಪಾಸ್ ಎನ್ನುವ ಔಷಧಿಯನ್ನು ಮಣ್ಣಿಗೆ ಸಿಂಪಡಿಸುವುದರಿಂದ ಕೀಟಬಾಧೆ ಕಡಿಮೆಯಾಗುತ್ತದೆ ಎಂದರು.ತೋಟಗಾರಿಕೆ ವಿಭಾಗದ ಉಪನ್ಯಾಸಕ ಡಾ. ಗಣಪತಿ ಟಿ. ಮಾತನಾಡಿದರು. ಪ್ರಭುದೇವ ಪಾರಿಗಂಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎ.ಜಿ. ಕೊಪ್ಪದ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಕವಿತಾ ಪರಸಣ್ಣನವರ, ಜಿಪಂ ಮಾಜಿ ಸದಸ್ಯ ವಿರುಪಾಕ್ಷಪ್ಪ ಕಡ್ಲಿ, ತಾಪಂ ಮಾಜಿ ಸದಸ್ಯ ಸತೀಶ ಸಂದಿಮನಿ, ಕೃಷಿ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಪಿ. ಬಾಬು, ಡಾ. ಪ್ರಿಯಾ ಪಿ., ಡಾ. ನೂರ್ ನವಾಜ್ ಎ.ಎಸ್., ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸಮೀರ್, ಸಮರ್ಥ, ಪವಿತ್ರಾ, ವಚನಾ, ಐಲಾ, ಲಕ್ಷಣ, ಆಕಾಶ, ಲತಾ, ಶ್ರೀಪ್ರಿಯಾ, ಮಹಾದೇವಿ, ವಿಜಯಲಕ್ಷೀ, ಸಚಿನ್ ಪ್ರಕಾಶ, ನಂದಿತಾ ಇದ್ದರು. ಶ್ರೇಯಾ ಸ್ವಾಗತಿಸಿದರು. ಪ್ರಜ್ಞಾ ಪಿ.ಸಿ. ನಿರೂಪಿಸಿದರು. ತೇಜಸ್ವಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿನಯ ಇಟಗಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.