ಹಾನಗಲ್ಲ: ಹೊರ ರಾಷ್ಟ್ರಗಳಲ್ಲಿ ಉದ್ಯೋಗವಕಾಶಗಳ ಆಮಿಷ ತೋರಿಸಿ ವಂಚಿಸುವ ನಕಲಿ ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿದ್ದು, ಈಗಾಗಲೇ ಸಹಸ್ರಾರು ಸಂಖ್ಯೆ ಇಂತಹ ಆತಂಕಕ್ಕೆ ಸಿಲುಕಿದ ೪೫೩೪ ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ತರುವಲ್ಲಿ ಏಮ್ ಇಂಡಿಯಾ ಫೋರಮ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಅರಾಫತ್ ಮಕಾನದಾರ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗತ್ತಿನಾದ್ಯಂತ ಉದ್ಯೋಗಾವಕಾಶಗಳಿವೆ. ಅದಕ್ಕಾಗಿ ಭಾರತೀಯರು ಉದ್ಯೋಗ ಅರಸಿ ಪರ ರಾಷ್ಟ್ರಗಳಿಗೆ ವಲಸೆ ಹೋಗುತ್ತಾರೆ. ಆದರೆ ಪರರಾಷ್ಟ್ರಗಳಲ್ಲಿ ಉದ್ಯೋಗ ಕೊಡುಸುವುದಾಗಿ ನಂಬಿಸಿ, ಅವರಿಗೆ ಬೇಕಾದ ವೀಸಾ ಕೂಡ ವ್ಯವಸ್ಥೆ ಮಾಡಿ, ಸುರಕ್ಷಿತವಾಗಿ ಪರರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಕರದೊಯ್ಯುತ್ತಾರೆ. ಆದರೆ ಅಲ್ಲಿಗೆ ಹೋದ ಮೇಲೆ ನಿರೀಕ್ಷಿತ ಉದ್ಯೋಗ ಕೊಡಿಸದೆ, ಎಲ್ಲೆಲ್ಲೋ ಸಫಾಯಿ, ಅಡುಗೆ, ಕಾವಲುಗಾರ ಕೆಲಸಕ್ಕೆ ಬಿಟ್ಟು ಅವರ ವೀಸಾ ಸಹ ಕೊಡದೇ ಅಲ್ಲಿಂದ ಪರಾರಿಯಾಗುತ್ತಾರೆ. ಇದರಿಂದಾಗಿ ಕೆಲಸಕ್ಕೆ ತೊಡಗಿದವರು ಯಾವುದೇ ದಿಕ್ಕು ಕಾಣದೇ ಅನಿವಾರ್ಯವಾಗಿ ಅಲ್ಲಿಯೇ ಇದ್ದ ಕೆಲಸ ಮಾಡಿಕೊಂಡು ಬದುಕಬೇಕಾಗುತ್ತದೆ. ಅದರೊಂದಿಗೆ ಕೆಲಸ ಮಾಡುವವರಿಗೆ ಮೂಲ ಸೌಕರ್ಯಗಳಿಲ್ಲದೆ ಹಲವು ರೀತಿಯ ಹಿಂಸೆಯನ್ನೂ ಅನುಭವಿಸಿದ ಹಲವು ಘಟನೆಗಳಿವೆ ಎಂದರು.ಹೊರ ರಾಷ್ಟ್ರಗಳಿಂದ ಇಂತಹ ೪೫೩೪ ಭಾರತೀಯರನ್ನು ಭಾರತಕ್ಕೆ ಕರೆತರಲು ಬೇಕಾದ ವಿಶೇಷ ಪ್ರಯತ್ನ ನಮ್ಮ ಸಂಘಟನೆಯಿಂದಾಗಿದೆ. ಯುಎಇ, ಬೆಹರನ್, ಸೌದಿ, ಅರೇಬಿಯಾ, ಇರಾನ್, ಇರಾಕ್, ಲಿಬೇರಿಯಾ ದೇಶಗಳಲ್ಲಿ ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಕಾರ್ಯವನ್ನು ಮಾಡಿದ್ದೇವೆ ಎಂದರು.ನಮ್ಮ ಈ ಸಂಸ್ಥೆಯಲ್ಲಿ ೧೨ ಜನರ ತಂಡವಿದ್ದು, ಎಲ್ಲರೂ ಭಾರತೀಯರು. ಅಲ್ಲದೆ ಕರ್ನಾಟಕದ ಭಟ್ಕಳ ಮೂಲದ ಶಿರಾಲಿ ಶೇಖ್ ಮುಜಫರ್ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಇವರು ದುಬೈನಲ್ಲಿ ಉದ್ಯೋಗಿಯಾಗಿ ಈ ಸಮಾಜ ಸೇವಾ ಸಂಸ್ಥೆಯನ್ನು ನಡೆಸಲು ಹೆಚ್ಚು ಕಾಳಜಿ ವಹಿಸಿದ್ದಾರೆ. ಇದು ನಮ್ಮ ಹೆಮ್ಮೆಯೂ ಹೌದು ಎಂದು ಯಾಸಿರ್ ಅರಾಫತ್ ಮಕಾನದಾರ ತಿಳಿಸಿದರು.