ಧಾರವಾಡ:
ಫಾಸ್ಟ್‌ಫುಡ್ ಮತ್ತು ಜಂಕ್‌ಫುಡ್‌ಗಳ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕೆಂದು ದಾವಣಗೆರೆ ವಿವಿ ಆಹಾರ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸದಾಶಿವ ಎಸ್.ಓ. ಹೇಳಿದರು.ಇಲ್ಲಿಯ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕನ್ನಡ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಂಕ್‌ಫುಡ್ ಪದೇಪದೇ ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಮನೆಗಳಲ್ಲಿ ತಯಾರಿಸುವ ಸಾಂಪ್ರದಾಯಿಕ ಆಹಾರ ಸೇವನೆಯಿಂದ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟಕೊಳ್ಳಬಹುದು. ಒಳ್ಳೆಯ ಆಹಾರ ಸೇವನೆಯಿಂದ ಮಾನಸಿಕವಾಗಿ ಸದೃಢರಾಗಿ ಇರಲು ಸಾಧ್ಯ. ವಿಶೇಷವಾಗಿ ವಿದ್ಯಾರ್ಥಿಗಳು ಶಿಕ್ಷಣದತ್ತ ತಮ್ಮ ಏಕಾಗ್ರತೆ ಹೊಂದಲು ಮನೆ ಆಹಾರ ಸಹಾಯಕ ಎಂದರು.
ಒಳ್ಳೆಯ ಆಹಾರ ಸೇವನೆಯಿಂದ ಆಸ್ಪತ್ರೆಯ ಖರ್ಚು ತಪ್ಪಸಬಹುದು ಎಂದ ಅವರು, ಉತ್ತಮ ಆರೋಗ್ಯಕ್ಕಾಗಿ ಏಕಧಾನ್ಯ ಮತ್ತು ದ್ವಿಧಾನ್ಯಗಳ ಸೇವನೆ ಅತ್ಯಂತ ಪರಿಣಾಮಕಾರಿ ಎಂದು ಹೇಳಿದರು.ಇದೇ ವೇಳೆ ವಿಶ್ರಾಂತ ಪ್ರಾಚಾರ್ಯ ಎಸ್.ಸಿ. ಹಿರೇಮಠ, ಪ್ರೌಢಶಾಲೆಗಾಗಿ ₹ 1 ಲಕ್ಷ ದೇಣಿಗೆ ನೀಡಿ ಅದರ ಮೇಲೆ ಬರುವ ವಾರ್ಷಿಕ ಬಡ್ಡಿಯನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಮಟ್ಟಿ, ವಿದ್ಯಾರ್ಥಿಗಳು ಶಾಲೆಗಳಲ್ಲಿ ತುಂಟತನ ಮಾಡುವುದು ಸಹಜ. ಕೇವಲ ಅದರಲ್ಲಿಯೇ ಮಗ್ನರಾಗದೇ ಹೆಚ್ಚಿನ ಸಮಯವನ್ನು ಅಭ್ಯಾಸದ ಕಡೆಗೆ ನೀಡಬೇಕು ಎಂದರು.ಮುಖ್ಯಶಿಕ್ಷಕಿ ಭುವನೇಶ್ವರಿ ದಂಡಿನ, ಸಹ ಶಿಕ್ಷಕಿ ಸಾವಿತ್ರಿ ಪಾಟೀಲ, ಮಂಜುಳಾ ಬಾವಿಹಾಳ, ಮಂಜುಳಾ ಹನಸಿ, ಶಶಿಕಲಾ ಹಿರೇಮಠ, ಅನುಶ್ರಿ ಚವಲಗಿ, ವೀಣಾ ಚಿನ್ನದಕೈ ಮತ್ತು ರೇಣುಕಾ ಹೆಬ್ಬಳ್ಳಿ ಇದ್ದರು. ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ, ಮಹಾಂತೇಶ ಕ್ವಾಟಿ ಭಾಗವಹಿಸಿದ್ದರು. 8,9 ಹಾಗೂ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ವಾರ್ಷಿಕ ಕ್ರೀಡಾಕೂಟದ ವಿಜೇತ ಕ್ರೀಡಾಪಟುಗಳಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.