ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಮಠದ ಸಾಧನೆ ಗಮನಾರ್ಹ: ಶಾಸಕ ಎ. ಮಂಜು

KannadaprabhaNewsNetwork |  
Published : Jul 14, 2024, 01:35 AM IST
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ನೀಟ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧಿಶಕ್ತಿಯಿಂದ ಕಲಿಕಾ ಮಟ್ಟ ಹೆಚ್ಚಿಸಿಕೊಳ್ಳಲು ಇಚ್ಛಾಶಕ್ತಿ ಮುಖ್ಯ. ನಮ್ಮ ಕಾಲದಲ್ಲಿ ಕಲಿಯಲು ಶೈಕ್ಷಣಿಕವಾಗಿ ಈ ರೀತಿಯ ಸೌಕರ್ಯಗಳಿರಲಿಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ವಿದ್ಯಾರ್ಥಿಗಳು ಉನ್ನತ ಕನಸು ಕಾಣುವ ಮೂಲಕ ಗುರಿ ಸಾಧನೆಗೆ ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಆದಿ ಚುಂಚನಗಿರಿ ಮಠ ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಗುರಿ ಸಾಧನೆ ಮಾಡಿ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ಶಾಸಕ ಎ. ಮಂಜು ಹೇಳಿದರು.

ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬದಲಾವಣೆ ದೃಷ್ಟಿಯಿಂದ ಸರ್ಕಾರ ಮತ್ತು ಮಠಗಳು ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಮಠದ ಸೇವೆ ಅನನ್ಯವಾಗಿದೆ. ದೇವರ ಆಶೀರ್ವಾದದಿಂದ ಶ್ರೀಗಳು ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣ ಮಾಡಿರುವುದು ಸಂತಸದ ಸಂಗತಿ. 2006ರಲ್ಲಿ 18 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಬಿಜಿಎಸ್ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಈಗ 732 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದೇ ಸಂಸ್ಥೆಯ ಮಹಾನ್ ಸಾಧನೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧಿಶಕ್ತಿಯಿಂದ ಕಲಿಕಾ ಮಟ್ಟ ಹೆಚ್ಚಿಸಿಕೊಳ್ಳಲು ಇಚ್ಛಾಶಕ್ತಿ ಮುಖ್ಯ. ನಮ್ಮ ಕಾಲದಲ್ಲಿ ಕಲಿಯಲು ಶೈಕ್ಷಣಿಕವಾಗಿ ಈ ರೀತಿಯ ಸೌಕರ್ಯಗಳಿರಲಿಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ವಿದ್ಯಾರ್ಥಿಗಳು ಉನ್ನತ ಕನಸು ಕಾಣುವ ಮೂಲಕ ಗುರಿ ಸಾಧನೆಗೆ ಶ್ರಮಿಸಬೇಕು. ಶಿಕ್ಷಣದಿಂದ ಉತ್ತಮ ಜ್ಞಾನ ಗಳಿಸಿ ಸಮಾಜದ ಉನ್ನತಿಗೆ ಕೊಡುಗೆಯಾಗದಿದ್ದರೆ ನಿಮಗೆ ನೀವೇ ಅನ್ಯಾಯ ಮಾಡಿಕೊಂಡ ಸ್ಥಿತಿಗೆ ಸಿಲುಕಬೇಕಾಗುತ್ತದೆ. ನಾನು ಬೆಂಗಳೂರಿನಿಂದ ಇಲ್ಲಿಗೆ ರಾಜಕೀಯ ಪ್ರವೇಶಿಸಿದಾಗ ಕೆಲವರು ಅಪಹಾಸ್ಯ ಮಾಡಿದರು. ಇದನ್ನೆಲ್ಲ ಲೆಕ್ಕಿಸದೇ ಇಚ್ಛಾಶಕ್ತಿಯಿಂದ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದು ಜನಸೇವೆಯ ಗುರಿ ತಲುಪಿದ ತೃಪ್ತಿ ನನಗಿದೆ. ಹಾಗೆಯೇ ವಿದ್ಯಾರ್ಥಿಗಳು ಅನವಶ್ಯಕ ಸಂಗತಿಗಳಿಗೆ ಕಿವಿಗೊಡದೇ ಸಾಧನೆ ಮಾಡುವ ಛಲ ಮೈಗೂಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಕಿವಿಮಾತು ಹೇಳಿದರು.

ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರದಂತೆಯೇ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಿ ಉತ್ತೇಜಿಸುವ ಕೆಲಸ ಕೂಡ ಆಗಬೇಕು ಎಂದು ಸಲಹೆ ನೀಡಿದರು.

ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯೆ ಕಲಿತು ಮನುಷ್ಯನಿಗೆ ವಿನಯತೆ, ಹೃದಯವಂತಿಕೆ ಇಲ್ಲದಿದ್ದರೆ ಮನುಕುಲದ ಏಳಿಗೆಗೆ ವ್ಯರ್ಥ ಪ್ರಯತ್ನವಾಗುತ್ತದೆ. ಶಿಕ್ಷಣದ ಜತೆಯಲ್ಲಿಯೇ ಸಂಸ್ಕಾರವೂ ದೊರೆಯುತ್ತದೆ ಎನ್ನುವ ಸದುದ್ದೇಶದಿಂದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಸಾಕಷ್ಟು ವಿದ್ಯಾಸಂಸ್ಥೆಗಳು ಹುಟ್ಟಿಕೊಂಡಷ್ಟು ದೇಶದ ಉನ್ನತಿಗೆ ಸಹಕಾರಿಯಾಗಲಿದೆ. ಇಲ್ಲಿ ಕಲಿತ ಅಪಾರ ವಿದ್ಯಾರ್ಥಿಗಳು ಉನ್ನತ ಬದುಕು ಕಟ್ಟಿಕೊಂಡು ದೇಶದ ಒಳಿತಿಗೆ ಉನ್ನತ ಕೊಡುಗೆ ಕೊಟ್ಟಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಮಕ್ಕಳು ಹೆಚ್ಚಿನ ಸಾಧನೆ ಮಾಡಬೇಕು. ಇದಕ್ಕಾಗಿ ಶ್ರದ್ಧೆಯಿಂದ ಶ್ರಮ ವಹಿಸಿ ಜ್ಞಾನ ಸಂಪಾದಿಸಿ ಕಲಿತರೆ ಎಲ್ಲವೂ ಸಾಧ್ಯವಾಗಲಿದೆ ಎಂದರು.

ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಸಲುವಾಗಿ ಶ್ರೀಗಳು ಪರಿಶ್ರಮ ವಹಿಸಿ ಶಾಲೆಯಲ್ಲಿ 50 ಕೊಠಡಿಗಳ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದ್ದಾರೆ. ಬಡ ಮಕ್ಕಳಿಂದ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ಒದಗಿಸಿ ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ನೀಟ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ