- ಸಿಎಂ, ಡಿಸಿಎಂಗೆ ಕಾಮಗಾರಿ ಸ್ಥಗಿತಕ್ಕೆ ಮನವರಿಕೆ: ರೇಣು - - -
ಕನ್ನಡಪ್ರಭ ವಾರ್ತೆ ದಾವಣಗೆರೆಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಂಡಿದ್ದನ್ನು ಕೈ ಬಿಡುವಂತೆ ಒತ್ತಾಯಿಸಿ 25 ದಿನದಿಂದ ಹಂತ ಹಂತದ ನಮ್ಮ ಹೋರಾಟ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ಭೇಟಿ ಮಾಡಿ, ಕಾಮಗಾರಿ ನಿಲ್ಲಿಸುವಂತೆ ಮನವರಿಕೆ ಮಾಡಿ, ಕೋರಿಕೆ ಸಲ್ಲಿಸಿದ್ದೇವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.9ರಂದು ಬೆಳಗ್ಗೆ 11 ಗಂಟೆಗೆ ಲಕ್ಕವಳ್ಳಿಯ ಭದ್ರಾ ಡ್ಯಾಂಗೆ ಸಂಬಂಧಿಸಿದ ಮುಖ್ಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಅಲ್ಲಿ ತೀರ್ಮಾನ ಕೈಗೊಂಡು, ಮುಂದಿನ ಹಂತದ ಹೋರಾಟಕ್ಕೆ ಸಜ್ಜಾಗುತ್ತೇವೆ. ಪಕ್ಷಾತೀತವಾಗಿ ಎಲ್ಲ ಹಂತದ ಹೋರಾಟಕ್ಕೂ ಸಿದ್ಧರಿದ್ದೇವೆ. ದಾವಣಗೆರೆ ಜಿಲ್ಲಾ ರೈತರ ಒಕ್ಕೂಟ ನೇತೃತ್ವದಲ್ಲೇ ನಮ್ಮ ಹೋರಾಟ ನಡೆಯಲಿದೆ. ಬಲದಂಡೆ ನಾಲೆಗೆ ತಕ್ಷಣ ತಡೆಗೋಡೆ ಕಟ್ಟಿ, ಮಳೆಗಾಲದ ಬೆಳೆಗೆ ನೀರು ಬಿಡುಗಡೆ ಮಾಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.ನಮ್ಮ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಪ್ರತಿ ವರ್ಷ ಜು.10ರೊಳಗೆ ಭದ್ರಾ ನಾಲೆಗಳಿಗೆ ನೀರು ಬಿಡಬೇಕು. ಜೂ.21ರಂದು ಭದ್ರಾ ಡ್ಯಾಂಗೆ ಭೇಟಿ ನೀಡದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಕರಪತ್ರಗಳನ್ನು ಹಂಚುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಮುಖಂಡರಾದ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಪ್ರವೀಣ ಜಾಧವ್ ಇತರರು ಇದ್ದರು.- - -
(ಬಾಕ್ಸ್) * ನಾಲ್ಕು ಗೋಡೆಗಳ ಮಧ್ಯೆ ಆರೋಗ್ಯಕರ ಚರ್ಚೆದಾವಣಗೆರೆ: ಬೆಂಗಳೂರಿನಲ್ಲಿ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಿಎಂ ಸದಾನಂದ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆಗೆ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಎಲ್ಲವೂ ಆರೋಗ್ಯಕರ ಚರ್ಚೆಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಪಷ್ಪಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಗೆ ಪೂರಕವಾಗಿ ಸಹಕಾರ ಕೊಡಲು ಹೇಳಿದ್ದಾರೆ. ನಾವು ಸಹಕಾರ ಕೊಡುತ್ತೇವೆ. ಕೆಲವು ಮಾರ್ಗದರ್ಶನಗಳನ್ನೂ ನೀಡಿದ್ದಾರೆ. ಎಲ್ಲವನ್ನೂ ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ. ಕೇಂದ್ರ ಸಚಿವ ಜೋಷಿ ಆಹ್ವಾನ ನೀಡಿದ್ದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸೇರಿದಂತೆ ಕೆಲ ಮುಖಂಡರು ಸಭೆಗೆ ಬಂದಿದ್ದರು. ವಿಷಯ ಗೊತ್ತಾಗಿ ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಸೇರಿದಂತೆ ಅನೇಕರು ಹಾಜರಾಗಿದ್ದರು ಎಂದರು.ಅರ್ಥಪೂರ್ಣ ಚರ್ಚೆ ಸಮಾಧಾನ ತಂದಿದೆ. ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಏನು ಮಾರ್ಗದರ್ಶನ ನೀಡುತ್ತಾರೋ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಾವು ಬಂಡಾಯವೂ ಅಲ್ಲ, ಯಾವುದೇ ಬಣವೂ ಅಲ್ಲ ಎಂದರು.
ಹರೀಶ ಇತರರು ಮಾತನಾಡಿದಾಗಲಷ್ಟೇ ನಾವೂ ಮಾತನಾಡಿದ್ದೇವೆ. ಅಲ್ಲಿಯವರೆಗೂ ನಾವೇನನ್ನೂ ಮಾತನಾಡಿಲ್ಲ. ಗೂಳಿ, ಹೋರಿ ಹೋಗುತ್ತಿರುತ್ತದೆ. ತೋಳ ಕಾಯುತ್ತಾ ಇರುತ್ತದೆ. ಹಾಗೆಯೇ ಅಂತಹವರದ್ದು ತೋಳದ ಕಥೆಯಾಗುತ್ತದಷ್ಟೇ. ಕಾದು ನೋಡಿ, ಯಾರು ನಮ್ಮ ಬಗ್ಗೆ ಮಾತನಾಡುತ್ತಾರಲ್ಲ, ಅಂತಹವರಿಗೂ ಗೊತ್ತಾಗುತ್ತದೆ ಎಂದು ರೇಣುಕಾಚಾರ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.- - -
-5ಕೆಡಿವಿಜಿ10:ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.