ಭದ್ರಾ ಡ್ಯಾಂ ನೀರು ಭರವಸೆ: ಬಂದ್‌ ಮುಂದೂಡಿಕೆ

KannadaprabhaNewsNetwork | Published : Jul 24, 2024 12:19 AM

ಸಾರಾಂಶ

ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಳೆಗಾಲದ ಬೆಳೆ ಬೆಳೆಯಲು ನೀರು ಹರಿಸುವುದು, ಜಲಾಶಯದ ದುರಸ್ತಿಗೆ ಒತ್ತಾಯಿಸಿ ಜು.24ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಮುಂದಾಗಿದ್ದ ರೈತ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದೂರವಾಣಿ ಮೂಲಕ ಸಂಪರ್ಕಿಸಿ, ಇನ್ನು 2 ದಿನಗಳಲ್ಲೇ ಕಾಡಾ ಸಮಿತಿ ಸಭೆ ಕರೆಯುವ ಭರವಸೆ ನೀಡಿದರು.

- ಜು.24ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ: ಜಿಲ್ಲಾ ಸಚಿವ ಭರವಸೆ । ಡಿಸಿ ಅಧ್ಯಕ್ಷತೆಯಲ್ಲಿ ರೈತರ ಸಭೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಳೆಗಾಲದ ಬೆಳೆ ಬೆಳೆಯಲು ನೀರು ಹರಿಸುವುದು, ಜಲಾಶಯದ ದುರಸ್ತಿಗೆ ಒತ್ತಾಯಿಸಿ ಜು.24ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಮುಂದಾಗಿದ್ದ ರೈತ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದೂರವಾಣಿ ಮೂಲಕ ಸಂಪರ್ಕಿಸಿ, ಇನ್ನು 2 ದಿನಗಳಲ್ಲೇ ಕಾಡಾ ಸಮಿತಿ ಸಭೆ ಕರೆಯುವ ಭರವಸೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರ ಸಭೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬೆಂಗಳೂರಿನಿಂದ ಫೋನ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರಿಗೆ ಈ ಭರವಸೆ ನೀಡಿದರು. ಒಂದೆರೆಡು ದಿನಗಳಲ್ಲೇ ಕಾಡಾ ಸಮಿತಿ ಸಭೆ ಕರೆಯುವಂತೆ ಜಲ ಸಂಪನ್ಮೂಲ ಸಚಿವರ ಜೊತೆಗೆ ಚರ್ಚಿಸಿ, ಸಭೆಗೆ ವ್ಯವಸ್ಥೆ ಭರವಸೆ ನೀಡಿದರು. ಈ ಹಿನ್ನೆಲೆ ಜು.24ರ ರಾಷ್ಟ್ರೀಯ ಹೆದ್ದಾರಿ ಬಂದ್‌ ಹೋರಾಟ ತಾತ್ಕಾಲಿಕವಾಗಿ ರೈತರು ಮುಂದೂಡಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಭಾರತೀಯ ರೈತ ಒಕ್ಕೂಟ ಸೇರಿದಂತೆ ರೈತ ಮುಖಂಡರು, ಅಚ್ಚುಕಟ್ಟು ರೈತರೊಂದಿಗೆ ನಡೆದ ಸಮಾಲೋಚನಾ ಸಭೆ ವೇಳೆ ಭದ್ರಾ ಜಲಾಶಯದ ಗೇಟ್ ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಬೇಕು, ಕಾಲುವೆಗಳ ದುರಸ್ತಿ ಸೇರಿದಂತೆ ಮಳೆಗಾಲದ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಲಾಗಿತು.

ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಸದ್ಯ ಅಧಿವೇಶನ ನಡೆಯುತ್ತಿದ್ದು, ಜಿಲ್ಲಾ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆ ಹಿತದೃಷ್ಟಿಯಿಂದ ಅಚ್ಚುಕಟ್ಟು ರೈತರ ಬೇಡಿಕೆಗಳ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತಂದು. ರೈತರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.

ಅದಕ್ಕೆ ರೈತರು, ಮುಖಂಡರು ಒಪ್ಪದಿದ್ದಾಗ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಸಮಾಲೋಚಿಸಿದಾಗ ಜು.24ರಂದು ಡಿಸಿಎಂ ಎಲ್ಲ ನೀರಾವರಿ ನಿಗಮಗಳ ಅಧಿಕಾರಿಗಳು ಹಾಗೂ ಸಚಿವರು, ಶಾಸಕರೊಂದಿಗೆ ಸಭೆ ಕರೆದಿದ್ದಾರೆ. ಅದೇ ಸಭೆಯಲ್ಲಿ ಭದ್ರಾ ಕಾಡಾ ಸಭೆ ಕರೆದು ಕಾಲುವೆಗಳಿಗೆ ನೀರು ಬಿಡುವ ದಿನಾಂಕ ನಿಗದಿಪಡಿಸಲಾಗುವುದು. ಸಭೆಗೆ ದಾವಣಗೆರೆ ರೈತ ಮುಖಂಡರನ್ನು ಆಹ್ವಾನಿಸಿರುವುದಾಗಿ ಸಚಿವರು ತಿಳಿಸಿರುವುದಾಗಿ ಮನವರಿಕೆ ಮಾಡಿಕೊಟ್ಟರು.

ಇನ್ನು 2 ದಿನಗಳಲ್ಲಿ ನೀರು ಬಿಡಲು ತೀರ್ಮಾನಿಸಬೇಕು ಮತ್ತು ಭದ್ರಾ ಜಲಾಶಯದ ಸ್ಲೂಯಿಸ್ ಗೇಟ್ ದುರಸ್ತಿ ಮತ್ತು ಕ್ರೆಸ್ಟ್‌ ಗೇಟ್ ದುರಸ್ತಿ ಮತ್ತು ನಾಲಾ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಆ.15ರವರೆಗೆ ಗಡುವು ನೀಡಿದ್ದೇವೆ. ತುಂಗಾ ಅಣೆಕಟ್ಟೆಯಿಂದ ಭದ್ರಾ ಡ್ಯಾಂಗೆ 22.5 ಟಿಎಂಸಿ ಲಿಫ್ಟ್ ಮಾಡದೇ, ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಬಾರದೆಂದು ರೈತ ಮುಖಂಡರು ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ ಎಂ.ಸಂತೋಷ, ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಸುಜಾತ, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಭಾರತೀಯ ರೈತ ಒಕ್ಕೂಟ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ, ಶಾನುಬೋಗರ ನಾಗರಾಜ ರಾವ್, ಬಿ.ಎಂ. ಸತೀಶ ಕೊಳೇನಹಳ್ಳಿ, ಮಾಡಾಳ ಮಲ್ಲಿಕಾರ್ಜುನ, ಹುಚ್ಚವ್ವನಹಳ್ಳಿ ಮಂಜುನಾಥ, ಸಹನಾ ರವಿ, ದೊಗ್ಗಳ್ಳಿ ವೀರೇಶ, ಚಂದ್ರಶೇಖರ ಪೂಜಾರ, ಪ್ರವೀಣ ಜಾಧವ್, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಬೆಳವನೂರು ಬಿ.ನಾಗೇಶ್ವರ ರಾವ್, ಬಲ್ಲೂರು ರವಿಕುಮಾರ ಇನ್ನಿತರೆ ಮುಖಂಡರು, ಅಧಿಕಾರಿಗಳು ಇದ್ದರು.

- - - -23ಕೆಡಿವಿಜಿ20:

ದಾವಣಗೆರೆ ಡಿಸಿ ಕಚೇರಿಯಲ್ಲಿ ಭದ್ರಾ ಡ್ಯಾಂನಿಂದ ಮಳೆಗಾಲದ ಬೆಳೆಗೆ ನೀರು ಹರಿಸುವಂತೆ ಡಿಸಿ ಗಂಗಾಧರ ಸ್ವಾಮಿ ಅಧ್ಯಕ್ಷತೆ ಸಭೆಯಲ್ಲಿ ರೈತರು ಒತ್ತಾಯಿಸಿದರು.

Share this article