ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂ ಬಲದಂಡೆ ನಾಲೆ ಒಡೆದು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ನೀರೊಯ್ಯುವ ಯೋಜನೆ ವಿರೋಧಿಸಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ದಾವಣಗರೆ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಮುತ್ತಿಗೆ ಹಾಕುವುದಾಗಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ, ಶಿವಮೊಗ್ಗ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆ ಹರಪನಹಳ್ಳಿ ಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಮಾರಕವಾಗುವಂತೆ ಭದ್ರಾ ಡ್ಯಾಂ ಬಲದಂಡೆ ನಾಲೆ ಕಾಲುವೆಯನ್ನೇ ಒಡೆದು, ಕಾಮಗಾರಿ ಕೈಗೊಂಡಿದ್ದನ್ನು ತಕ್ಷಣ ನಿಲ್ಲಿಸಿ, ಮಳೆಗಾಲದ ಬೆಳೆಗೆ ಅಚ್ಚುಕಟ್ಟಿಗೆ ನೀರು ಪೂರೈಸುವಂತೆ ಆಗ್ರಹಿಸಿ ಸಿಎಂ, ಡಿಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದರು.
ಬಲದಂಡೆ ನಾಲೆ ಸೀಳಿ ಕೈಗೊಂಡ ಕಾಮಗಾರಿ ಕೈಬಿಡುವಂತೆ, ಭದ್ರಾ ಡ್ಯಾಂ ಹಿನ್ನೀರು ಅಥವಾ ನದಿಯಿಂದ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ತಾಲೂಕುಗಳಿಗೆ ನೀರು ಒಯ್ಯುವಂತೆ ಒತ್ತಾಯಿಸಿ ವಿವಿಧ ಹಂತದಲ್ಲಿ ನಿರಂತರ ಹೋರಾಟವನ್ನು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯ ಭದ್ರಾ ಡ್ಯಾಂ ಬಳಿ ಮಾಡಿದ್ದೇವೆ. ಇದೀಗ ಹೋರಾಟವನ್ನು ರಾಜ್ಯ ರಾಜಧಾನಿಗೆ ವಿಸ್ತರಿಸಿದ್ದೇವೆ ಎಂದರು.ನಮ್ಮ ಮುಂದಿನ ಹಂತದ ಹೋರಾಟವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧಾರ ಕೈಗೊಂಡಿದ್ದೇವೆ. ಈಗಾಗಲೇ ಸಿಎಂ, ಡಿಸಿಎಂಗೆ ಭೇಟಿ ಮಾಡಿ, ಮನವಿ ಮಾಡಿದ್ದೇವೆ. ಜಲ ಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ ಖುದ್ದಾಗಿ ಭದ್ರಾ ಡ್ಯಾಂನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದರು. ಆದರೆ, ಅದನ್ನು ಮಾಡಲಿಲ್ಲ. ಸದ್ಯ ಸಿಎಂ ಕುರ್ಚಿ ಕದನದಲ್ಲಿ ಕಾಂಗ್ರೆಸ್ಸಿನ ನಾಯಕರು ನಿರತರಾಗಿ, ರೈತರ ಹಿತವನ್ನೇ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹಿತ ಮರೆತು, ಕುರ್ಚಿ ಕದನದಲ್ಲಿ ತಲ್ಲೀನರಾದ ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಒಮ್ಮತದಿಂದ ತೀರ್ಮಾನಿಸಿದ್ದೇವೆ. ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಸುಮಾರು 65 ಸಾವಿರ ಹೆಕ್ಟೇರ್‌ನಷ್ಟಿದೆ. ನೆರೆ ಜಿಲ್ಲೆಗೆ ನೀರೊದಗಿಸುವ ಕಾಮಗಾರಿ ಕೈಗೊಳ್ಳುವ ಮುನ್ನವೇ ಭದ್ರಾ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪದೇ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕಾಮಗಾರಿ ಮಾಡಿದರೆ ಅಚ್ಚುಕಟ್ಟು ರೈತರಿಗೆ ನೀರು ಮರೀಚಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಅಚ್ಚುಕಟ್ಟು ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪದಿದ್ದರೂ ಬಲದಂಡೆ ನಾಲೆಯನ್ನೇ ಸೀಳಿ ನೆರೆ ಜಿಲ್ಲೆಗಳಿಗೆ ನೀರು ಕೊಟ್ಟರೆ, ಅಚ್ಚುಕಟ್ಟು ರೈತರ ಬದುಕು, ಜೀವನ ನರಕಸದೃಶವಾಗುತ್ತದೆ. ನೆರೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ಅವೈಜ್ಞಾನಿಕವಾಗಿ, ಡ್ಯಾಂಗೆ ಅಪಾಯಕಾರಿಯಾಗುವ ರೀತಿ ಯೋಜನೆ ಕಾಮಗಾರಿ ಕೈಗೊಂಡಿದ್ದಕ್ಕೆ ವಿರೋಧವಿದೆ. ನಾಲೆಯನ್ನು ಸೀಳಿ ಪೈಪ್ ಲೈನ್ ಅಳವಡಿಸುತ್ತಿರುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದು ಹೇಳಿದರು.
ಒಡೆದಿರುವ ಬಲ ದಂಡೆ ನಾಲೆ ಸರಿಪಡಿಸಿ, ತಕ್ಷಣವೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ಕೆಲಸವಾಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಬೆಂಗಳೂರಿನಲ್ಲಿ ಹೋರಾಟ ಮುಂದುವರಿಸಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಮನೆಗಳಿಗೆ ಮುತ್ತಿಗೆ ಹಾಕುವ ಮೂಲಕ ದಾವಣಗೆರೆ, ಶಿವಮೊಗ್ಗ ಜಿಲ್ಲೆ ಹಾಗೂ ಹರಪನಹಳ್ಳಿ ತಾಲೂಕಿನ ರೈತರಿಗೆ ಸಮರ್ಪಕ ನೀರು ಪೂರೈಸುವಂತೆ ಹಾಗೂ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ರೈತರ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಭದ್ರಾ ಡ್ಯಾಂನ ಬಲದಂಡೆ ನಾಲೆ ಸೀಳುವ ಕಾಮಗಾರಿ ತಕ್ಷಣವೇ ನಿಲ್ಲಿಸುವಂತೆ ಸ್ವತಃ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೂಚಿಸಿದ್ದರೂ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಬಳಿ ರೈತರ ನಿಯೋಗ ಕೊಂಡೊಯ್ದು ಒತ್ತಾಯಿಸಿದ್ದರೂ ಅಧಿಕಾರಿಗಳು ಮಾತ್ರ ಕದ್ದುಮುಚ್ಚಿ ಬಲದಂಡೆ ನಾಲೆ ಸೀಳಿರುವ ಸ್ಥಳದಲ್ಲಿ ಕಾಮಗಾರಿ ಮುಂದುವರಿಸಿದ್ದಾರೆ ಎಂದು ದೂರಿದರು.
ಭದ್ರಾ ಡ್ಯಾಂ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ, ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದನ್ನು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಗಂಭೀರವಾಗಿ ಪರಿಗಣಿಸಿ, ಕಾಮಗಾರಿ ತಡೆಯಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಭದ್ರಾ ಡ್ಯಾಂ ಬಲದಂಡೆ ಕಾಲುವೆ ಬಳಿ ಜಿಲ್ಲೆಯ ರೈತರನ್ನು, ಅಚ್ಚುಕಟ್ಟು ರೈತರನ್ನು ಕರೆದೊಯ್ದು, ಕಾಮಗಾರಿ ಸ್ಥಗಿತಗೊಳಿಸಿ, ತೋರಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ್, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳ್ ಮತ್ತಿತರರಿದ್ದರು.