ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭವಾರ್ತೆ ಚಿತ್ರದುರ್ಗರಾಮ ರಾಜ್ಯವಾಳಿದ್ರೂ ರಾಗಿ ಬೀಸೋದು ತಪ್ಪಲ್ಲ ಎಂಬ ಗಾದೆ ಮಾತಿದೆ. ಚಿತ್ರದುರ್ಗದ ಮಟ್ಟಿಗೆ ಇದು ಯಾರೇ ರಾಜ್ಯವಾಳಿದ್ರೂ ದುರ್ಗದ ಗೋಳು ತಪ್ಪಿದ್ದಲ್ಲವೆಂದು ಬದಲಾವಣೆಗೊಂಡಿದೆ. ಕಳೆದ ತಿಂಗಳಷ್ಟೇ ಚಿತ್ರದುರ್ಗದ ನೆಲದಲ್ಲಿ ಶೋಷಿತರ ಸಮಾವೇಶ ನಡೆಸಿ ಸಮುದಾಯಗಳ ಮನದಲ್ಲಿ ಸ್ವಾಭಿಮಾನದ ಬುಗ್ಗೆಗಳ ಸೃಷ್ಟಿಸಿದ್ದ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಾತ್ರ ಶೋಷಿತರ ನೆಲವನ್ನು ನಿರ್ಲಕ್ಷಿಸಿರುವುದು ಎದ್ದು ಕಾಣಿಸುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಪರಿಶಿಷ್ಟ ಪಂಗಡ, ಒಂದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಿದೆ. ಲೋಕಸಭೆಗೂ ಪರಿಶಿಷ್ಟರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ವಾಸ್ತವಾಂಶ ಹೀಗಿದ್ದೂ ಶೋಷಿತರ ದನಿಯಾಗಿ ಬಜೆಟ್ ಬಿಂಬಿತಗೊಳ್ಳಬೇಕಿತ್ತು. ಚಿತ್ರದುರ್ಗದ ಮಟ್ಟಿಗೆ ಅದು ಸಾಧ್ಯವಾಗದೇ ಹೋಗಿದೆ. ಹಳೇ ಯೋಜನೆಗಳನ್ನು ತೋರಿಸಿ ಸದ್ಯಕ್ಕೆ ಗಂಜಿ ಕುಡ್ಕಂಡು ಇರಿ, ಮುಂದೆ ನೋಡುವಾ ಎಂಬಂತಿದೆ ಸಿದ್ದರಾಮಯ್ಯ ಅವರ ಬಜೆಟ್. ಭದ್ರಾ ಮೇಲ್ಡಂಡೆಗೆ ಹೊಸದಾಗಿ ಅನುದಾನ ಘೋಷಣೆ ಅಗತ್ಯವಿಲ್ಲದಿದ್ದರೂ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಬಜೆಟ್‌ನಲ್ಲಿ ತೋರಿಸಬೇಕಾಗಿತ್ತು. ಕೇಂದ್ರ ಸರ್ಕಾರ 5300 ಕೋಟಿ ರು. ಅನುದಾನ ಘೋಷಣೆ ಮಾಡಿ ತನ್ನ ಬಜೆಟ್‌ನಲ್ಲಿ ಪ್ರಸ್ತಾಪಿಸಿತ್ತು, ಅನುದಾನ ಬಿಡುಗಡೆಯಾಗದ ಕಾರಣ ಅದು ಹುಸಿಯಾಗಿದೆ. ಹಾಗಾಗಿ ಚಿತ್ರದುರ್ಗ ಜಿಲ್ಲೆಯ 75 ಸಾವಿರ ಹೆಕ್ಚೇರು ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಲಾಗುವುದು ಎಂಬ ಅಂಶ ಬಜೆಟ್ ಭಾಷಣದಲ್ಲಿದೆ. ಜಲಸಂಪನ್ಮೂಲ ಇಲಾಖೆಗೆ ಕಾಯ್ದಿರಿಸಲಾದ ಅನುದಾನದಲ್ಲಿ ಭದ್ರಾ ಮೇಲ್ದಂಡೆಗೆ ಹೆಚ್ಚು ವ್ಯಯಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದೆಂಬ ಸಾಲು ಸೇರಿಸಿದ್ದರೆ ಬಯಲು ಸೀಮೆ ಜನಕ್ಕೆ ಬಜೆಟ್ ಮೇಲೆ ತುಸು ವಿಶ್ವಾಸ ಬರುತ್ತಿತ್ತು.
ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆ ಕೈಗೊಳ್ಳಲು 6 ಕೋಟಿ ರು.ವೆಚ್ಚಮಾಡುವ ಪ್ರಸ್ತಾಪವನ್ನು ಬಜೆಟ್ ನಲ್ಲಿ ಮಾಡಲಾಗಿದೆ. ಮೀನುಗಾರಿಕೆ ಕೈಗೊಳ್ಳಲು ಹೊಸದುರ್ಗ ಬಿಟ್ಟರೆ ಉಳಿದ ತಾಲೂಕುಗಳಲ್ಲಿ ಅವಕಾಶಗಳಿಲ್ಲ. ಬರ ಪರಿಸ್ಥಿತಿ ಜಿಲ್ಲೆಯಲ್ಲಿದ್ದು, ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಹಾಗಾಗಿ ಮೀನುಗಾರಿಕೆ ಎಲ್ಲಿ, ಯಾವಾಗ ಎಂಬ ಖಚಿತತೆ ಇಲ್ಲ.ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಹಾಗೂ ನಿರಂತರ ಅನುಸರಣೆಗಾಗಿ ಬಹುತೇಕ ಜಿಲ್ಲೆಗಳಲ್ಲಿ ಕಿಮೋಥೆರಪಿ ಚಿಕಿತ್ಸಾ ಕೇಂದ್ರಗಳು ಲಭ್ಯವಿಲ್ಲ. 20 ಕೋಟಿ ರು. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಪ್ರತಿ ಜಿಲ್ಲೆಯೆಂಬ ಕಾರಣಕ್ಕೆ ಚಿತ್ರದುರ್ಗಕ್ಕೂ ಈ ಸೌಲಭ್ಯ ಲಭ್ಯವಾಗಲಿದೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವನ್ನು (IPHL) ಸ್ಥಾಪಿಸುವ ಮೂಲಕ ಸಾರ್ವಜನಿ ಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಚಿಕ್ಕಮಗಳೂರು, ವಿಜಯನಗರ, ಶಿವಮೊಗ್ಗ, ಬೆಳಗಾವಿ, ಮಂಡ್ಯ, ಹಾಸನ ಮತ್ತು ಕೊಡುಗು ಜಿಲ್ಲೆಗಳಲ್ಲಿ ಮತ್ತು 2025-26ನೇ ಸಾಲಿನಲ್ಲಿ ಚಿತ್ರದುರ್ಗ, ಬಾಗಲಕೋಟೆ, ಚಾಮರಾಜನಗರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು. ಇದಲ್ಲದೇ ಪ್ರಸಕ್ತ ಸಾಲಿನಲ್ಲಿ ಹುನಗುಂದ, ಸಿರಾ ಮತ್ತು ಹಗರಿಬೊಮ್ಮೇನಹಳ್ಳಿಯಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಇದಕ್ಕೆ ಒಟ್ಟಾರೆಯಾಗಿ ರು.11 ಕೋಟಿ ಅನುದಾನ ನೀಡಲಾಗುವುದು ಎಂದಿರುವ ಬೆನ್ನಲ್ಲೆ ಚಿತ್ರದುರ್ಗ ಕ್ಕೂ ಒಂದು ಪ್ರಯೋಗಾಲಯ ಖಾತ್ರಿಯಾಗಿದೆ.ಚಿತ್ರದುರ್ಗದಲ್ಲಿ 2023 -24ನೇ ಸಾಲಿನ ಬಜೆಟ್‌ನಲ್ಲಿ 150 ಎಂಬಿಬಿಎಸ್ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಮೆಡಿಕಲ್ ಕಾಲೇಜು ಆರಂಭವಾಗಿದೆ. ವೈದ್ಯಕೀಯ ಕಾಲೇಜಿನ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕಾಲೇಜು ಹಾಗೂ ಅನುದಾನ ಘೋಷಣೆ ಎರಡೂ ಹಳೆಯವು. ಆದರೆ, ಅಗತ್ಯ ಕ್ರಮ ಎಂಬುದೇ ಹೊಸ ಸೇರ್ಪಡೆ, ಉಳಿದಂತೆ ಇದರಲ್ಲಿ ಹೊಸದೇನೂ ಇಲ್ಲ. ಈ ಬಾರಿಯ ಬಜೆಟ್ ಘೋಷಣೆ ಚಿತ್ರದುರ್ಗ ಜಿಲ್ಲೆಗೆ ಮೂಗಿಗೆ ತುಪ್ಪ ಸವರಿದಂತಿದೆ. ಹಲವು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮದ ಪಟ್ಟಿಯಲ್ಲಿ ಚಿತ್ರದುರ್ಗ ಸೇರಿದೆ. ಚಿತ್ರದುರ್ಗಕ್ಕೆಂದೇ ಪ್ರತ್ಯೇಕ ಘೋಷಣೆ ಇಲ್ಲ.
ಇದು ನಾಗರೀಕ ಬಜೆಟ್ ಅಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ 15 ನೇ ಬಜೆಟ್ ನಾಗರೀಕ ಬಜೆಟ್ ಎಂದು ಪರಿಗಣಿಸಲಾಗುವುದಿಲ್ಲ. ಯಾವುದೇ ಕಾರ್ಯ ಯೋಜನೆಗಳನ್ನು ಘೋಷಿಸಿಲ್ಲ. ದೂರದೃಷ್ಟಿ ಇಲ್ಲದ ಬಜೆಟ್ ಇದಾಗಿದೆ. ಯಾವುದೇ ನಿರ್ದಿಷ್ಟ ಬಜೆಟ್ ಅಲೋಕೇಶನ್ ಇಲ್ಲ. ಪರಿಶಿಷ್ಟ ಜಾತಿ ಪಂಗಡಗಳಾಗಿ ವಿಂಗಡಣೆ ಮಾಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸ್ಕೀಮ್ ಟ್ರೇನಿಂಗ್ ಕೊಡುವ ಯೋಜನೆ ಇದ್ದು, ಪರಿಶಿಷ್ಟ ಜಾತಿಯನ್ನು ಕೈ ಬಿಟ್ಟಿದ್ದಾರೆ. ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ 5300 ಕೋಟಿ ರು. ಪ್ರಸ್ತಾಪ ಮಾಡುತ್ತಾರೆ. ಆದರೆ ಇವರು ಒಂದು ರುಪಾಯಿ ಹಣವನ್ನೂ ಕೊಡುವ ಮಾತಾಡಲ್ಲ. ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡಿ 150 ಸೀಟು ಇದ್ದಾವೆ ಎನ್ನುತ್ತಾರೆ. ಹೀಗೆ ಸರ್ಕಾರ ದ ಆದೇಶಗಳನ್ನು ನಮೂದು ಮಾಡುವುದನ್ನು ಬಜೆಟ್ ಎನ್ನುತ್ತಾರಾ? ಎಂದು ಹರಿಹಾಯ್ದರು.
ಮೆಡಿಕಲ್ ಕಾಲೇಜ್ ಕಟ್ಟಡಕ್ಕೆ ಮತ್ತು ಅಪ್ಪರ್ ಭದ್ರಾ ಯೋಜನೆಗೆ ಪ್ರತ್ಯೇಕ ಅಕೌಂಟ್ ಓಪನ್ ಮಾಡಿದ್ರೆ ನನ್ನ ಜಿಲ್ಲೆಗೆ ಅವಶ್ಯಕತೆ ಇರುವ ಯೋಜನೆಯ ಹಣ ಬಿಡುಗಡೆಗೆ ಪ್ರಯತ್ನಿಸುತ್ತೇನೆ. ಇಂತಹ ಜನ ವಿರೋಧಿ ಬಜೆಟ್ ಅನ್ನು ಸಿದ್ದರಾಮಯ್ಯನವರು ಘೋಷಣೆ ಮಾಡಬಾರದಾಗಿತ್ತು.ಸಿದ್ದರಾಮಯ್ಯ ಒಬ್ಬರು ಆರ್ಥಿಕ ತಜ್ಞ ಎಂಬುದು ಮತ್ತೆ ದೃಢ: ಆಂಜನೇಯ
ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡು ಕಂಡ ಖ್ಯಾತ ಆರ್ಥಿಕ ತಜ್ಞ ಎಂಬುದನ್ನು ತಾವು ಮಂಡಿಸುತ್ತಿರುವ ಪ್ರತಿ ಬಜೆಟ್‍ಲ್ಲೂ ದೃಢಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.ಕುರಿ ಕಾಯುವ ಸಮುದಾಯದ ವ್ಯಕ್ತಿ ಹಣಕಾಸು ಮಂತ್ರಿಯಾದ ಸಂದರ್ಭದಲ್ಲಿ ಅನೇಕ ಟೀಕೆ-ಟಿಪ್ಪಣಿಗಳು ಎದುರುಗೊಂಡಿದ್ದವು. ಆದರೆ, ಇಂಥ ಎಲ್ಲಾ ಲೆಕ್ಕಾಚಾರಗಳನ್ನೂ ಉಲ್ಟಾ ಮಾಡಿ ನಾಡಿನ ಅಭಿವೃದ್ಧಿಗೆ ಪಕ್ಕಾ ಲೆಕ್ಕಾಚಾರದಲ್ಲಿ 15 ಬಜೆಟ್‍ಗಳನ್ನು ಮಂಡಿಸಿ, ದೇಶದ ಶ್ರೇಷ್ಠ ಆರ್ಥಿಕ ತಜ್ಞ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ಈ ಬಾರಿಯ ಬಜೆಟ್ ಸವಾಲು ಆಗಿತ್ತು. ಒಂದೆಡೆ ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಂತರ ಹಣ ಹೊಂದಿಸುವುದು, ಮತ್ತೊಂದು ಕಡೆ ವಿವಿಧ ಕ್ಷೇತ್ರಗಳಿಗೆ ಅನುದಾನ ಹಂಚಿಕೆ. ಆದರೆ, ಸಿದ್ದರಾಮಯ್ಯ ಅವರು ಈ ಎಲ್ಲ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರಷ್ಟೇ ಅಲ್ಲದೆ, ಈ ಹಿಂದೆ ಎಲ್ಲ ಹಣಕಾಸು ಮಂತ್ರಿಗಳಷ್ಟೇ ಅಲ್ಲದೇ ತಾವೇ ಮಂಡಿಸಿದ ಬಜೆಟ್‍ಗಿಂತ ಶ್ರೇಷ್ಠ, ಅತ್ಯುತ್ತಮ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ ಎಂದೂ ಪ್ರತಿಪಾದಿಸಿದರು.ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ ಸಂಘ, ಶಿಕ್ಷಣ, ಆರೋಗ್ಯ, ಹೀಗೆ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಅಭಿವೃದ್ಧಿ ಕಾರ್ಯ ಗಳ ಜತೆಗೆ ಬಡ, ಮಧ್ಯಮ ಜನರಿಗೆ ವರದಾನವಾಗಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟಿರುವುದು ಅರ್ಥಶಾಸ್ತ್ರಜ್ಞರೇ ಅಚ್ಚರಿ ಪಡುವಂತದ್ದಾಗಿದೆ. ಡಿಸಿಸಿ ಬ್ಯಾಂಕ್, ಪಿಕಾರ್ಡ್‍ಗಳಲ್ಲಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿರುವುದು ಸಿದ್ದರಾಮಯ್ಯನವರ ದಿಟ್ಟ ನಡೆಯಾಗಿದೆ ಎಂದು ಆಂಜನೇಯ ತಿಳಿಸಿದರು.