ಮಾರ್ಚ್ 2026ರೊಳಗೆ ಭದ್ರಾ ಮೇಲ್ದಂಡೆ ಪೂರ್ಣ : ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ

KannadaprabhaNewsNetwork | Updated : Aug 09 2024, 12:28 PM IST

ಸಾರಾಂಶ

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ, 2023-24ನೇ ಸಾಲಿನ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ಕೇಂದ್ರವು ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಅನುದಾನ ಮೀಸಲಿಟ್ಟಿದೆ. ಶೀಘ್ರವೇ ಅನುದಾನ ಬಿಡುಗಡೆ ಮಾಡುವ ವಾಗ್ದಾನ ಮಾಡಿದರು.

 ದಾವಣಗೆರೆ :  ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕೆಂಬ ವಿಪಕ್ಷ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು ಶೀಘ್ರವೇ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದೆ.

ನವದೆಹಲಿಯಲ್ಲಿ ಲೋಕಸಭೆ ಅಧಿವೇಶನದಲ್ಲಿ ಗುರುವಾರ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ, 2023-24ನೇ ಸಾಲಿನ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ಕೇಂದ್ರವು ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಅನುದಾನ ಮೀಸಲಿಟ್ಟಿದೆ. ಶೀಘ್ರವೇ ಅನುದಾನ ಬಿಡುಗಡೆ ಮಾಡುವ ವಾಗ್ದಾನ ಮಾಡಿದರು.

ಭದ್ರಾ ಮೇಲ್ದಂಡೆಗೆ ₹5300 ಕೋಟಿ ಅನುದಾನವನ್ನು ಕೇಂದ್ರ ಮಂಜೂರು ಮಾಡಿರುವುದು ಸತ್ಯವೇ? ಈ ಯೋಜನೆಗಾಗಿ ಈವರೆಗೆ ಕರ್ನಾಟಕ ಸರ್ಕಾರಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡಲಾಗಿದೆಯೇ? ಹಣ ಬಿಡುಗಡೆ ಮಾಡಿದ್ದರೆ ಯಾವಾಗ ಅಥವಾ ಬಿಡುಗಡೆ ಮಾಡದಿದ್ದರೆ ಹಣ ನೀಡದಿರವ ಕಾರಣವೇನು? ಅಪ್ಪರ್ ಭದ್ರಾ ಪೂರ್ಣಗೊಳ್ಳುವ ನಿರೀಕ್ಷೆ ಇದೆಯೆಂದು ಕೇಂದ್ರಕ್ಕೆ ತಿಳಿದಿದೆಯೇ? ಯೋಜನೆ ಯಾವ ಸಮಯದಲ್ಲಿ ಪೂರ್ಣಗೊಳಿಸುತ್ತೀರಿ ಎಂಬುದಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರವನ್ನು ಪ್ರಶ್ನಿಸಿದ್ದರು.

ಮೇಲ್ದಂಡೆ ಯೋಜನೆಯಿಂದ ಮಧ್ಯ ಕರ್ನಾಟಕದ ಬರ ಪೀಡಿತ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಭಾಗದ ಲಕ್ಷಾಂತರ ಹೆಕ್ಟೇರ್‌ ಜಮೀನು, ನೂರಾರು ಕೆರೆಗಳು, ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಆದಷ್ಟು ಬೇಗನೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ₹5300 ಕೋಟಿ ಅನುದಾನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಯೋಜನೆಯಿಂದ ಮಧ್ಯ ಕರ್ನಾಟಕದ ಜಿಲ್ಲೆಗೆ ಆಸರೆಯಾಗುತ್ತದೆ ಎಂದು ಅವರು ತಿಳಿಸಿದ್ದರು.

ಕೇಂದ್ರ ಸಚಿವ ಸಿ.ಆರ್.ಪಾಟೀಲ ಮಾತನಾಡಿ, ನೀರು ರಾಜ್ಯಗಳ ವಿಷಯವಾಗಿದ್ದು, ನೀರಾವರಿ ಯೋಜನೆಗಳ ಅನುಷ್ಟಾನ ಮತ್ತು ಧನಸಹಾಯಕ್ಕಾಗಿ ಆದೇಶವು ಸಂಬಂಧಿಸಿದ ರಾಜ್ಯ ಸರ್ಕಾರಗಳ ಡೊಮೇನ್‌ನಲ್ಲಿದೆ. ಹೀಗಿದ್ದರೂ ಗುರುತಿಸಲಾದ ನೀರಾವರಿ ಯೋಜನೆಗಳಿಗೆ ಭಾಗಶಃ ಆರ್ಥಿಕ ಸಹಾಯವನ್ನು ಕೇಂದ್ರ ಸರ್ಕಾರವು ತನ್ನ ಚಾಲ್ತಿಯಲ್ಲಿರುವ ಯೋಜನೆಗಳಡಿ ಒದಗಿಸಲಿದೆ ಎಂದು ಹೇಳಿದರು.

ಸಚಿವಾಲಯದಡಿ ಕೇಂದ್ರ ಜಲ ಆಯೋಗವು ಅಂತರ ರಾಜ್ಯ, ಮಧ್ಯಮ ಮತ್ತು ಪ್ರಮುಖ ನೀರಾವರಿ ಯೋಜನೆಗಳ ತಾಂತ್ರಿಕ, ಆರ್ಥಿಕ ಮೌಲ್ಯಮಾಪನ ಮಾಡಬೇಕಾಗಿದೆ. ಕರ್ನಾಟಕದ ಮೇಲ್ಮಟ್ಟದ ಭದ್ರಾ ಯೋಜನೆಯನ್ನು ಪ್ರಸ್ತುತ ಕೇಂದ್ರದ ಯಾವುದೇ ಯೋಜನೆಯಡಿ ಸೇರಿಸಲಾಗಿಲ್ಲ. ಹಾಗಾಗಿ ಯೋಜನೆಗೆ ಹಣ ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ. ಅದಾಗ್ಯೂ ಯೋಜನೆ ತಾಂತ್ರಿಕ-ಆರ್ಥಿಕ ಕಾರ್ಯ ಸಾಧ್ಯತೆಯನ್ನು ಸಚಿವಾಲಯದ ಸಂಬಂಧಿಸಿದ ಸಮಿತಿ ಅಂಗೀಕರಿಸಿದೆ. ಯೋಜನೆಯನ್ನು ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ), ಮೌಲ್ಯಮಾಪನ ಮಾಡಿದ್ದು, ಕೇಂದ್ರ ಸಹಾಯವನ್ನು ಶಿಫಾರಸ್ಸು ಮಾಡಿದೆ. ಯೋಜನೆಗೆ ₹5300 ಕೋಟಿಗಳನ್ನು 2023-24ನೇ ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ ಒದಗಿಸಲಾಗಿತ್ತು ಎಂದು ವಿವರಿಸಿದರು.

ಆಗಸ್ಟ್‌ 2023ರಲ್ಲಿ ರಾಜ್ಯ ಸರ್ಕಾರದ ಕೋರಿಕೆಯಂದೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (PMKSY-AIΒΡ) ದಡಿ ಹಣಕಾಸಿನ ನೆರವು ನೀಡಲು ಜಲಶಕ್ತಿ ಸಚಿವಾಲಯವು ಪ್ರಸ್ತಾವನೆ ತೆಗೆದುಕೊಂಡಿದೆ. ಯೋಜನೆ ಅನುಷ್ಟಾನಗೊಳಿಸುತ್ತಿರುವ ಕರ್ನಾಟಕ ಸರ್ಕಾರ ಒದಗಿಸಿದ ಮಾಹಿತಿ ಪ್ರಕಾರ, ಯೋಜನೆಯನ್ನು ಮಾರ್ಚ್ 2026ರ ಒಳಗಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಶ್ನೆಗೆ ಕೇಂದ್ರ ಸಚಿವ ಸಿ.ಆರ್‌. ಪಾಟೀಲ್ ಉತ್ತರ ನೀಡಿದ್ದಾರೆ.

Share this article