ಬದುಕಿನ ಗೊಂದಲಗಳಿಗೆ ಪರಿಹಾರ ಸಿಗಲು ಭಗವದ್ಗೀತೆ ದಿವ್ಯ ಔಷಧ: ಡಾ.ಪಾವಗಡ

KannadaprabhaNewsNetwork | Published : Nov 17, 2024 1:15 AM

ಸಾರಾಂಶ

ಭಗವದ್ಗೀತೆಯು ಕೇವಲ ಮಹಾಭಾರತದ ಕಥಾನಕವಲ್ಲ, ಬದಲಿಗೆ ಜೀವನ ಸಾರ್ಥಕಗೊಳಿಸುವ, ಮೋಕ್ಷ ಪ್ರಾಪ್ತಿ ನೀಡುವ ಶಾಸ್ತ್ರವಾಗಿದೆ

ಗದಗ: ಭಗವದ್ಗೀತೆಯು ಕುರುಕ್ಷೇತ್ರ ಯುದ್ಧಭೂಮಿಗೆ ಮಾತ್ರ ಸೀಮಿತವಾದ ಬೋಧೆಯಲ್ಲ, ಬದಲಿಗೆ ಪ್ರತಿಯೊಬ್ಬ ಮನುಷ್ಯನೂ ತನ್ನ ದೈನಂದಿನ ಜೀವನದಲ್ಲಿ ಎದುರಿಸುವ ಮಾನಸಿಕ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಬದುಕಿನ ಗೊಂದಲಗಳಿಗೆ ಪರಿಹಾರ ಸಿಗಲು ಭಗವದ್ಗೀತೆ ಪಾರಾಯಣ ದಿವ್ಯ ಔಷಧ ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶರಾವ್ ಹೇಳಿದರು.

ನಗರದಲ್ಲಿ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತೆ ಪ್ರವಚನದ 5ನೇ ದಿನದ ಉಪನ್ಯಾಸ ನೀಡಿ ಮಾತನಾಡಿದರು.

ಭಗವದ್ಗೀತೆಯು ಕೇವಲ ಮಹಾಭಾರತದ ಕಥಾನಕವಲ್ಲ, ಬದಲಿಗೆ ಜೀವನ ಸಾರ್ಥಕಗೊಳಿಸುವ, ಮೋಕ್ಷ ಪ್ರಾಪ್ತಿ ನೀಡುವ ಶಾಸ್ತ್ರವಾಗಿದೆ. ಪ್ರಪಂಚದಲ್ಲೇ ಅತೀ ಸುದೀರ್ಘ ಮತ್ತು ಆಳವಾದ ಸಾಹಿತ್ಯ ಹೊಂದಿರುವ ಭಗವದ್ಗೀತೆಯನ್ನು ವ್ಯಾಸ ಮಹರ್ಷಿಗಳು ಸ್ವತಃ ರಚಿಸಲಿಲ್ಲ, ಬದಲಿಗೆ ವಿದ್ಯಾದೇವರೆನಿಸಿದ ಗಣಪತಿಯ ಹತ್ತಿರ ಹೇಳುತ್ತಾ ಬರೆಸಿದರು. ವ್ಯಾಸ ಮಹರ್ಷಿಗಳ ಮೂಲ ಹೆಸರು ಕೃಷ್ಣದ್ವೈಪಾಯನ ಎಂದಾಗಿದ್ದು, ಕೃಷ್ಣನೇ ಅವರಲ್ಲಿ ಪ್ರವಹಿಸಿ ಮಹಾ ಭಾರತ ಸೃಜಿಸಿದ ಎಂಬ ನಂಬಿಕೆ ಇದೆ. ಭಗವದ್ಗೀತೆಯೂ ಸೇರಿದಂತೆ ವೈದಿಕ ವೇದ-ಪುರಾಣಗಳು ರಚನೆಯಾಗಿಲ್ಲ ಬದಲಿಗೆ ಅವುಗಳು ದರ್ಶನವಾಗಿದ್ದು, ಶೂನ್ಯದಿಂದ ಸೃಷ್ಠಿಯಾದವುಗಳು ಎಂದರು.

ಭಾರತೀಯ ಸಂಸ್ಕೃತಿ ವಿರೂಪಗೊಳಿಸಲು ಬಯಸುವ, ಭಾರತೀಯ ಜ್ಞಾನ ಒಪ್ಪದ ಕೆಲವು ವಿದೇಶಿ ಮನ ಸ್ಥಿತಿಗಳು ಭಗವದ್ಗೀತೆಯ ಕುರಿತು ಇಲ್ಲ ಸಲ್ಲದ ಪೂರ್ವಾಗ್ರಹ ತೇಲಿಬಿಟ್ಟು ಗೊಂದಲ ಸೃಷ್ಠಿಸುತ್ತಿದ್ದು, ಶ್ರೀಕೃಷ್ಣನಲ್ಲಿ ಪರಿಪೂರ್ಣ ನಂಬಿಕೆ ಇಲ್ಲದೇ ಸಂದೇಹ ಪೂರ್ವಕವಾಗಿ ಭಗವದ್ಗೀತೆ ಸಾರ ತಿಳಿಯಲು ಬಯಸುವುದು ಅಸಾಧ್ಯ ಎಂದರು.

ಈ ವೇಳೆ ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಜಿ.ಬಿ.ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ.ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಇದ್ದರು. ಡಾ. ಕಲ್ಲೇಶ ಮೂರಶಿಳ್ಳಿನ ನಿರೂಪಿಸಿದರು.

Share this article