ಭಗವತ್‌ ಕೇಂದ್ರಿತ ಜೀವನವೇ ಸಾರ್ಥಕ: ಶ್ರೀ ಸುಗುಣೇಂದ್ರ ತೀರ್ಥರು

KannadaprabhaNewsNetwork | Published : Jan 19, 2024 1:46 AM

ಸಾರಾಂಶ

ಗುರುವಾರ ಮುಂಜಾನೆ ಕೃಷ್ಣಮಠದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ ಸ್ವೀಕರಿಸಿದ ಪುತ್ತಿಗೆ ಮಠಾಧೀಶರು, ನಂತರ ನಡೆದ ಮುಂಜಾನೆಯ ದರ್ಬಾರ್ನಲ್ಲಿ ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜೀವನ ಭಗವತ್ ಕೇಂದ್ರಿತ ಆದಾಗ ಮಾತ್ರ ಸಾರ್ಥಕವಾಗುತ್ತದೆ, ದೇವರ ಸೇವೆಯೇ ಪ್ರಧಾನವಾದಾಗ ಜೀವನ ಯಶಸ್ವಿಯಾಗುತ್ತದೆ. ಆದ್ದರಿಂದ ತಾವು ಕೃಷ್ಣನ ಪೂಜೆಗೆ ಕಟಿಬದ್ಧರಾಗಿದ್ದೇವೆ ಎಂದು ಗುರುವಾರ ಕೃಷ್ಣಮಠದ ಪರ್ಯಾಯ ಶ್ರೀ ಮದುಪೇಂದ್ರ ತೀರ್ಥ ಮಹಾಸಂಸ್ಥಾನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಗುರುವಾರ ಮುಂಜಾನೆ ಕೃಷ್ಣಮಠದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ ಸ್ವೀಕರಿಸಿ, ನಂತರ ನಡೆದ ಮುಂಜಾನೆಯ ದರ್ಬಾರ್ ನಲ್ಲಿ ಸಂದೇಶ ನೀಡಿದರು.

ದೇವರ ಸೇವೆ ಮಾಡುವುದು ಪ್ರತಿಯೊಬ್ಬರ ಜೀವನದ ಉದ್ದೇಶವಾಗಬೇಕು, ಇದರ ಜೊತೆಗೆ ಉಳಿದ ಕೆಲಸಗಳನ್ನು ಮಾಡಬೇಕು, ಆಗ ಜೀವನದಲ್ಲಿ ಪಶ್ಚಾತ್ತಾಪ ಪಡುವ ಸಂದರ್ಭಗಳು ಬರುವುದಿಲ್ಲ ಎಂದು ಶ್ರೀಗಳು, ಭಗವಂತನ ಜೊತೆಗಿನ ಸಂಬಂಧವಷ್ಟೇ ಶಾಶ್ವತ, ಉಳಿದೆಲ್ಲಾ ಸಂಬಂಧಗಳು ತಾತ್ಕಾಲಿಕ ಎಂದರು.

ಶ್ರೀಗಳು ಬೆಂಗಳೂರು ಇಸ್ಕಾನ್ ನ ಅಧ್ಯಕ್ಷ ಮಧುಪಂಡಿತದಾಸ್ ಸೇರಿ 10 ಮಂದಿ ವಿದ್ವಾಂಸ, ಸಾಧಕರಿಗೆ ದರ್ಬಾರ್ ಪ್ರಶಸ್ತಿ ನೀಡಿ ಗೌರವಿಸಿದರು.

ಪರ್ಯಾಯ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ರೀಗಳ ಅಭಿನಂದನಾ ಭಾಷಣ ಮಾಡಿದರು.

ಕೇಂದ್ರ ಕೃಷಿ - ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭಾ ಸ್ವೀಕರ್ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಭಾಶಂಸನೆಗೈದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಭೋಜೆಗೌಡ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಕರ್ಣಾಟಕ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಜಪಾನ್ ದೇಶದ ಧಾರ್ಮಿಕ ನಾಯಕಿ ರೆವೆರೆಂಡ್ ಇವಾನೋ ವೇದಿಕೆಯಲ್ಲಿದ್ದರು.

ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರು, ಕಾರ್ಯಾಧ್ಯಕ್ಷ ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಿದ್ವಾಂಸ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.ಕೃಷ್ಣ ಪೂಜೆಗೆ ಗೀತೆಯೇ ಸ್ಪೂರ್ತಿ

ವಾಸುದೇವನ ಸೇವೆ ಮಾಡುವ ಅವಕಾಶ ದುರ್ಲಭವಾಗಿರುತ್ತವೆ, ಸಿಕ್ಕಿದ ಅವಕಾಶವನ್ನು ಬಿಟ್ಟುಕೊಡಬಾರದು ಎಂದು ಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನೆ. ಅದೇ ತಮಗೆ ಮೂಲಸ್ಫೂರ್ತಿ ಎಂದು ಶ್ರೀಗಳು ಹೇಳಿದರು.

ಕೆಲವರು ತಮಗೆ ಕೃಷ್ಣನ ಪೂಜೆ ಬಿಟ್ಟು ಜಗತ್ತಿನ ಸಂಚಾರವನ್ನೇ ಮಾಡಬಹುದಲ್ಲಾ ಎಂದು ಸಲಹೆ ಕೊಡುತ್ತಾರೆ, ಆದರೆ ಕೃಷ್ಣನೇ ನೀಡಿನ ಪೂಜೆಯ ಅಧಿಕಾರವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದವರು ಸ್ಪಷ್ಟಪಡಿಸಿದರು.

ಮಂತ್ರಾಲಯದಿಂದ ಮುತ್ತಿನಭಿಷೇಕ, ಪ್ರಸಾದ ಪ್ರದಾನ

ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಮಂತ್ರಾಲಯದ ರಾಘವೇಂದ್ರ ಮಠಾಧೀಶರು ಕಳುಹಿಸಿದ ಪ್ರಸಾದ ನೀಡಿ, ಮುತ್ತಿನ ಅಭಿಷೇಕ ಮಾಡಿ ಅಭಿನಂದಿಸಲಾಯಿತು.

ಅದೇ ರೀತಿ, ತಿರುಪತಿ ದೇವಾಲಯದಿಂದ ಪ್ರಸಾದ, ಶ್ರೀರಂಗ ರಂಗನಾಥ ದೇವಳದ ಪ್ರಸಾದ, ಪೂರಿ ಜಗನ್ನಾಥ ದೇವಾಲಯದ ಪ್ರಸಾದ, ತಿರುವಂತಪುರ ಅನಂತಪದ್ಮನಾಭ ಸನ್ನಿಧಿಯ ಪ್ರಸಾದ, ದ್ವಾರಕೆಯಿಂದ ಗಂಧಪ್ರಸಾದ - ಮುತ್ತಿನ ಹಾರ, ಮಧುರೈ ಮೀನಾಕ್ಷಿ ಸನ್ನಿಧಿಯಿಂದ ಪ್ರಸಾದ, ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಪ್ರಸಾದ, ಹೆಜಮಾಡಿ ಮಹಾಲಿಂಗೇಶ್ವರ, ಆನೆಗುಡ್ಡೆ, ವಿನಾಯಕ ದೇವಾಲಯ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಶೇಷವಸ್ತ್ರಗಳನ್ನೂ ಪ್ರದಾನ ಮಾಡಲಾಯಿತು.

Share this article