ಬೀದರ್: ಬೀದರ್ ಲೋಕಸಭಾ ಕ್ಷೇತ್ರದ, ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಗೆಲ್ಲುವುದು ಅಗತ್ಯವಾಗಿದೆ ಎಂದು ಮಾಜಿ ಸಚಿವರಾದ ಜೆಡಿಎಸ್ ಹಿರಿಯ ನಾಯಕ ಬಂಡೆಪ್ಪ ಖಾಶೆಂಪೂರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ, ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗವಂತ ಖೂಬಾ ಅವರು ಈಗಾಗಲೇ ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ಖೂಬಾರವರನ್ನು ಗೆಲ್ಲಿಸಿಕೊಂಡು ಬರಬೇಕಾಗಿದೆ ಎಂದರು.ಕಾಂಗ್ರೆಸ್ ಸರ್ಕಾರ 55 ಸಾವಿರ ಕೋಟಿ ರು. ಗ್ಯಾರಂಟಿ ಯೋಜನೆ ಕೊಡಲು 1.9 ಸಾವಿರ ಕೋಟಿ ರು. ಸಾಲ ಮಾಡಿದ್ದಾರೆ. ಈ ಪರಿಸ್ಥಿತಿ ನೋಡಿದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನಮ್ಮ ದೇಶ, ನಮ್ಮ ರಾಜ್ಯ ರೈತರಿಂದ ಕೂಡಿದೆ. ಶೇ.70ರಷ್ಟು ಜನ ರೈತರಿರುವ ನಮ್ಮ ರಾಜ್ಯದಲ್ಲಿ ರೈತರಿಗೆ ಕಾಂಗ್ರೆಸ್ ಯಾವ ಗ್ಯಾರಂಟಿ ಕೊಟ್ಟಿದ್ದಾರೆ. ರೈತರ ಗ್ಯಾರಂಟಿ ಯಾವುದು ಎಂದು ಬಂಡೆಪ್ಪ ಖಾಶೆಂಪುರ್ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗಿದ್ದಾರೆ. ಅಲ್ಲಲ್ಲಿ ಕಾಂಗ್ರೆಸ್ ಸೋತಿದೆ. ರಾಜ್ಯದಲ್ಲಿ ಕೂಡ ಸೋಲುತ್ತದೆ. ಕಾಂಗ್ರೆಸ್‌ನವರು ಹಣಬಲ, ಅಧಿಕಾರ ಬಲದೊಂದಿಗೆ ಚುನಾವಣೆ ಮಾಡುತ್ತಿದ್ದಾರೆ. ಬೇರೆ ಪಕ್ಷದವರನ್ನು ಅಧಿಕಾರ ಬಲ, ಹಣ ಬಲದಿಂದ ಸೆಳೆಯುತ್ತಿದ್ದಾರೆ ಎಂದು ಬಂಡೆಪ್ಪ ಖಾಶೆಂಪೂರ್ ಆರೋಪಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಹಾರೋಗೇರಿ, ಬಾಬುವಾಲಿ, ಪೀರಪ್ಪ ಯರನಳ್ಳಿ, ಸಿದ್ದರಾಮಪ್ಪ ವಂಕೆ, ಅಶೋಕ ಕೊಡ್ಗೆ, ರಾಜಶೇಖರ ಜವಳೆ, ಶಶಿ ಹೊಸಳ್ಳಿ, ಶಿವಕುಮಾರ್, ಬಸವರಾಜ, ಮಲ್ಲಿಕಾರ್ಜುನ ನೆಳ್ಗೆ ಸೇರಿದಂತೆ ಅನೇಕರಿದ್ದರು.