ಕಿರುಕುಳ ಆರೋಪ: ಭೈರಂಪಳ್ಳಿ ಗ್ರಾಪಂ ಸಿಬ್ಬಂದಿ ಸಾಮೂಹಿಕ ರಾಜಿನಾಮೆ

KannadaprabhaNewsNetwork | Published : Jan 2, 2025 12:33 AM

ಸಾರಾಂಶ

ಭೈರಂಪಳ್ಳಿ ಪಂಚಾಯಿತಿನಲ್ಲಿ ಸಿಬ್ಬಂದಿ ಸಾಮೂಹಿಕ ರಾಜಿನಾಮೆ ನೀಡಿದ ಮತ್ತು ದಿನವಿಡೀ ಕಚೇರಿಗೆ ಬಾಗಿಲು ಮುಚ್ಚಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹಿರಿಯಡ್ಕ

ಪಂಚಾಯಿತಿನ ಅವ್ಯವಸ್ಥೆ ಮತ್ತು ಕೆಲಸ ಮಾಡಲಾಗದ ಪರಿಸ್ಥಿತಿಯಿಂದ ಬೇಸತ್ತು ಹೊಸ ವರ್ಷದ ಮೊದಲ ದಿನವೇ ಇಲ್ಲಿನ ಭೈರಂಪಳ್ಳಿ ಪಂಚಾಯಿತಿನಲ್ಲಿ ಸಿಬ್ಬಂದಿ ಸಾಮೂಹಿಕ ರಾಜಿನಾಮೆ ನೀಡಿದ ಮತ್ತು ದಿನವಿಡೀ ಕಚೇರಿಗೆ ಬಾಗಿಲು ಮುಚ್ಚಿದ ಘಟನೆ ಬುಧವಾರ ನಡೆದಿದೆ.

ಗ್ರಾ.ಪಂ.ನ ಹಿರಿಯ ಅಧಿಕಾರಿ ಹಾಗು ಪಂಚಾಯಿತಿ ಸದಸ್ಯರ ಕಿರುಕುಳಕ್ಕೆ ಬೇಸತ್ತು ಗ್ರಾಪಂ ಸಿಬ್ಬಂದಿ ಸುಮನ, ವಸಂತಿ ಹಾಗೂ ಮನೋಹರ್ ಅವರು ಡಿ‌.19 ರಂದೇ ಪಂಚಾಯತ್ ಅಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ್ದು, ಅದರಲ್ಲಿ ಡಿ.31 ರವರೆಗೆ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದ್ದರು.

ಅಧ್ಯಕ್ಷರು ಈ ರಾಜಿನಾಮೆ ಪತ್ರಗಳ ಜೊತೆಗೆ ತನ್ನ ಅಭಿಪ್ರಾಯಗಳನ್ನೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕಳುಹಿಸಿದ್ದರು.

ಆದರೆ ತಾಲೂಕು ಮತ್ತು ಜಿಲ್ಲೆಯ ಹಿರಿಯ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ, ರಾಜಿನಾಮೆ ನೀಡಿದ ಸಿಬ್ಬಂದಿಗಳನ್ನು ಕರೆದು ಮಾತನಾಡದೇ, ಸಮಸ್ಯೆ ಬಗೆಹರಿಸದೆ ಇರುವುದರಿಂದ ಬುಧವಾರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಈ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳಿಬ್ಬರೂ ಬೇರೆ ಗ್ರಾಪಂಗೂ ಪ್ರಭಾರ ನಿಯೋಜನೆಗೊಂಡಿದ್ದು, ಅವರು ಆ ಗ್ರಾಪಂಗೆ ತೆರಳಿದ್ದರು. ಇದರಿಂದ ಪಂಚಾಯಿತಿ ಕಚೇರಿ ತೆರೆಯಲಿಲ್ಲ. ತಮ್ಮ ಕೆಲಸಕ್ಕೆ ಪಂಚಾಯತ್‌ ಬಂದ ಸಾರ್ವಜನಿಕರು ಮುಚ್ಚಿದ ಬಾಗಿಲನ್ನು ನೋಡಿ ಪರದಾಡುವಂತೆ ಆಯಿತು.

ವಿಷಯ ತಿಳಿದು ಮಧ್ಯಾಹ್ನ 1 ಗಂಟೆಗೆ ತಾಪಂ ಕಾರ್ಯನಿರ್ವಹಣಾಧಿಕಾರಿ ಬಂದು ಪಂಚಾಯಿತಿ ಬಾಗಿಲನ್ನು ತೆರೆದು ಕರ್ತವ್ಯ ನಿರ್ವಹಿಸುವ ಜವಾಬ್ದಾರಿಯನ್ನು ಸಹಾಯಕ ಪಂಪು ಚಾಲಕ ಮತ್ತು ಎಸ್ಎಲ್ಆರ್‌ಎಂ ಘಟಕದ ಸಿಬ್ಬಂದಿಗಳಿಗೆ ವಹಿಸಿ ನಿರ್ಗಮಿಸಿದರು.

ಅದರಂತೆ, ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂಬ ನಿಯಮವಿದ್ದರೂ, ಈ ಗ್ರಾಪಂ ಕಟ್ಟಡದಲ್ಲಿ ಮಧ್ಯಾಹ್ನ 1 ಗಂಟೆಯ ಬಳಿಕ ರಾಷ್ಟ್ರ ಧ್ವಜವನ್ನು ಹಾರಿಸಲಾಯಿತು.

Share this article