ಕನ್ನಡಪ್ರಭ ವಾರ್ತೆ ನಾಗಮಂಗಲ
ಕೇವಲ ಒಂದು ಸಣ್ಣ ಪ್ರಮಾಣದ ಆಧ್ಯಾತ್ಮಿಕ ವಲಯಕ್ಕೆ ಸೀಮಿತವಾಗಿದ್ದ ಆದಿಚುಂಚನಗಿರಿ ಮಠವನ್ನು ಬಹುಎತ್ತರಕ್ಕೆ ಬೆಳೆಸಿದ ಕೀರ್ತಿ ಭೈರವೈಕ್ಯ ಡಾ.ಬಾಲ ಗಂಗಾಧರನಾಥ ಶ್ರೀಗಳಿಗೆ ಸಲ್ಲುತ್ತದೆ ಎಂದು ಶ್ರೀ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಬಾಲ ಗಂಗಾಧರನಾಥ ಶ್ರೀಗಳ 79 ನೇ ಜಯಂತ್ಯುತ್ಸವ ಮತ್ತು 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಭಕ್ತಸಂಗಮದಲ್ಲಿ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಭೈರವೈಕ್ಯ ಶ್ರೀಗಳು ಕಾಲದ ಅಗತ್ಯತೆಗೆ ಅರಿತು ವಿವಿಧ ಕೈಂಕರ್ಯಗಳನ್ನು ಹಮ್ಮಿಕೊಂಡು ಶ್ರೀ ಮಠವನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪೂಜ್ಯ ಬಾಲಗಂಗಾಧರನಾಥ ಶ್ರೀಗಳು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಅವರು ಚೈತನ್ಯರೂಪಿಯಾಗಿದ್ದಾರೆ ಎಂದರು.ರಘುವಂಶದ ದೊರೆಗಳಾಗಲಿ ಅಥವಾ ಆಳುವ ದೊರೆಗಳಾಗಲಿ ಸಂಪತ್ತನ್ನು ಸೃಷ್ಟಿಸಬೇಕೇ ಹೊರತು ಅದನ್ನು ಕೂಡಿಡಬಾರದು. ಸೃಷ್ಟಿಸಿದ ಸಂಪತ್ತನ್ನು ತ್ಯಾಗಕ್ಕೋಸ್ಕರ ವಿನಿಯೋಗಿಸಬೇಕು. ಎಲ್ಲಿ ಸಮಸ್ಯೆಗಳಿವೆಯೋ ಅಲ್ಲಿ ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಆಡುವ ಮಾತಿನಲ್ಲಿ ಬೇರೆಯವರಿಗೆ ನೋವಾಗದಂತೆ ಮಿತವಾಗಿ ಮಾತನಾಡಬೇಕು. ಪಂಚಭೂತಗಳಿಂದ ಕೂಡಿದ ಈ ದೇಹವನ್ನು ಬಿಡುವವಾಗ ನಗುನಗುತ್ತಲೇ ದೇಹತ್ಯಾಗ ಮಾಡಿ ಹೋಗಬೇಕೆಂಬ ಮಾತಿನಂತೆ ಭಕ್ತರು ಕೊಟ್ಟಿದ್ದ ಹಣ, ಪ್ರೀತಿ ಇತರೆ ಮೂಲಗಳಿಂದ ಬಂದಿದ್ದ ಎಲ್ಲಾ ಸಂಪತ್ತನ್ನು ಕ್ರೂಢೀಕರಿಸಿದ ಭೈರವೈಕ್ಯ ಶ್ರೀಗಳು, ಎಲ್ಲವನ್ನೂ ಜಗತ್ತಿಗೆ ತ್ಯಾಗ ಮಾಡಿ ಹೋಗಿದ್ದಾರೆ ಎಂದು ಹೇಳಿದರು.ಭೈರವೈಕ್ಯ ಶ್ರೀಗಳು ನಗುವಿನೊಂದಿಗೆ ಮಿತವಾಗಿ ಮಾತನಾಡುತ್ತಿದ್ದರು. ಕೇವಲ ಒಕ್ಕಲಿಗ ಸಮುದಾಯಕ್ಕಷ್ಟೇ ಅಲ್ಲದೆ ಒಟ್ಟು ಸಮಾಜದ ಸಹಾಯಕ್ಕೆ ನಿಂತಿದ್ದರು. ಶ್ರೀಗಳ ದಿವ್ಯಶಕ್ತಿಯು ಶ್ರೀಮಠದ ಭಕ್ತರ ಮತ್ತು ದೇಶವನ್ನು ಕಾಪಾಡುವ ಜೊತೆಗೆ ನಮ್ಮೆಲ್ಲರನ್ನು ಕೈಹಿಡಿದು ಮುನ್ನಡೆಸುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದ ಆಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಅಮೇರಿಕಾದ ಅಕ್ಕ ಸಂಸ್ಥಾಪಕ ಅಧ್ಯಕ್ಷ ಹಾಗೂ ಒಕ್ಕಲಿಗರ ಪರಿಷತ್‌ನ ಸಲಹೆಗಾರ ಡಾ.ಅಮರನಾಥಗೌಡ, ಶೃಂಗೇರಿ ಶಾಸಕ ರಾಜೇಗೌಡ, ತಮಿಳುನಾಡಿನ ಕಂಬಂ ಶಾಸಕ ರಾಮಕೃಷ್ಣ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಆರ್.ದೇವೇಗೌಡ, ಮಾಜಿ ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್.ಯತೀಶ್, ಚಿತ್ರ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು, ಗಣ್ಯರು ಮತ್ತು ಸಹಸ್ರಾರು ಮಂದಿ ಭಕ್ತರು ಇದ್ದರು.