ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ, ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಿ, ಎಸ್‌ಒಜಿ ಕಾಲನಿಯ ಶ್ರೀ ದುರ್ಗಾಂಬಿಕಾ ದೇವಿಯವರ ಜಾತ್ರಾ ಮಹೋತ್ಸವಕ್ಕೆ ದಾವಣಗೆರೆಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಅತ್ಯಾಕರ್ಷಕ ಪೆಂಡಾಲ್ ನೋಡುಗರ ಕಣ್ಮನ ಸೆಳೆಯುತ್ತಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ದರ್ಶನಕ್ಕೆ ಬರುವ ಭಕ್ತರಿಗೆ ದೇವಸ್ಥಾನದ ದಾರಿಯಲ್ಲಿ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು.ಮಾ.19ರ ಮಂಗಳವಾರ ದೇವಿಯ ವಾರವಾದ್ದರಿಂದ ದೇವಿಗೆ ಹರಕೆ ಹೊತ್ತವರು ದೀಡು ನಮಸ್ಕಾರ, ಬೇವಿನುಡುಗೆ ಇತರೆ ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು. ಹರಕೆ ತೀರಿಸುವ ಅಸಂಖ್ಯಾತ ಭಕ್ತಾದಿಗಳ ಅನುಕೂಲಕ್ಕಾಗಿ ಮರಳು, ಸಾಮೂಹಿಕ ನಲ್ಲಿಗಳ, ಷವರ್ ಬಾತ್ ಜೊತೆಗೆ ಕೆಲವಾರು ಪ್ರದೇಶಗಳಲ್ಲಿ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು.
ಭಕ್ತರಿಗೆ ದುಗ್ಗಮ್ಮನ ದೇವಸ್ಥಾನಕ್ಕೆ ಹೋಗಿ ಬರಲು ಕೆಲವು ರಸ್ತೆಗಳ ತಾತ್ಕಾಲಿಕ ಒಮ್ಮುಖ ರಸ್ತೆಗಳಾಗಿ ಪರಿವರ್ತಿಸಲಾಗಿದೆ. ಅಲ್ಲಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ತಾತ್ಕಾಲಿಕ ಉಪ ಪೊಲೀಸ್ ಠಾಣೆ, ಆರೋಗ್ಯ ಕೇಂದ್ರ, ಮಾಹಿತಿ ಕೇಂದ್ರ, ದೇವಿಯ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ, ವಿಶೇಷ ದರ್ಶನದ ವ್ಯವಸ್ಥೆ ಒಳಗೊಂಡಂತೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.ಬಾಡೂಟಕ್ಕೆ ಸಜ್ಜಾದ ನಗರದ ಜನತೆ:
ಕುರಿ, ಕೋಳಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚು ಎಂದು ಜನರು ಹಿಂದೆ ಸರಿಯುವ ಮಾತೇ ಇಲ್ಲ. ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಗೆ ಎಷ್ಟೇ ಖರ್ಚಾದರೂ ಸರಿಯೇ ಬಾಡೂಟಕ್ಕೆ ಜನರು ಸಜ್ಜಾಗಿದ್ದಾರೆ. ಮನೆಗಳಿಗೆ ಬೀಗರು, ನೆಂಟರಿಷ್ಟರು ಆಗಮಿಸಿದ್ದಾರೆ. ಆಗಲೇ ಹಲವು ಕಡೆಗಳಲ್ಲಿ ಶಾಮಿಯಾನಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕುರಿ, ಕೋಳಿಯ ಜೊತೆಗೆ, ತರಕಾರಿ, ಹೂವು, ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಗಳಗಿಂತಲೂ ದುಬಾರಿ ಆಗಿದೆ. ಆದರೆ, ಹಬ್ಬದ ಲೆಕ್ಕಾಚಾರದ ಮುಂದೆ ಯಾವುದೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಿನೋಬನಗರದ ಒಂದನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯೂ ಕಳೆಗಟ್ಟಿದೆ. ನಗರ ದೇವತೆ ದುರ್ಗಾಂಬಿಕಾ ಜಾತ್ರೆಯೊಂದಿಗೆ ವಿನೋಬ ನಗರದ ಚೌಡೇಶ್ವರಿ ದೇವಿಯ ಜಾತ್ರೆಯೂ ನಡೆಯುವುದರಿಂದ ಸಂತಸ ಇಮ್ಮಡಿಯಾಗಿದೆ. ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಲಾಗಿದೆ.ಭಕ್ತರಿಗೆ ನೀರು, ಪ್ರಸಾದ, ಮಜ್ಜಿಗೆ ವಿತರಣೆ
ದುಗ್ಗಮ್ಮನ ದರ್ಶನಕ್ಕೆ ಬರುವ ಭಕ್ತರಿಗಾಗಿ ಹಲವು ಸಂಘ ಸಂಸ್ಥೆಗಳು, ಸಾರ್ವಜನಿಕರು ಕುಡಿಯುವ ನೀರಿನ ಬಾಟಲ್, ನೀರಿನ ಪ್ಯಾಕೆಟ್, ಮಜ್ಜಿಗೆ, ದೋಸೆ, ಪಲಾವ್, ಮೊಸರನ್ನ, ಹಣ್ಣು, ಪಾನಕ ವ್ಯವಸ್ಥೆ ಮಾಡಿದ್ದು ಕಂಡು ಬಂದಿತು.ವಾಸವಿ ಯುವಜನ ಸಂಘದಿಂದ ಮಜ್ಜಿಗೆ ವಿತರಣೆ:
ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ವಾಸವಿ ಯುವಜನ ಸಂಘದವರಿಂದ ಮಾ.19 ರಿಂದ 24 ರವರೆಗೆ ಬೆಳಗ್ಗೆ 11 ಗಂಟೆಯಿಂದ ಭಕ್ತರು, ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಹಮ್ಮಿಕೊಂಡಿರುವುದಾಗಿ ಸಂಘದ ಅಧ್ಯಕ್ಷ ಎಸ್.ಸುನೀಲ್ ತಿಳಿಸಿದ್ದಾರೆ.ಪ್ರಗತಿ ಪಬ್ಲಿಕ್ ಟ್ರಸ್ಟಿಂದ ಮೊಸರನ್ನ ವಿತರಣೆ:
ಕಾಸಲ್ ವಿಠ್ಠಲ್ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸೇವಾ ಸಂಸ್ಥೆಯ ಪ್ರಗತಿ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಆರ್.ಆರ್.ರಮೇಶ್ ಬಾಬು ಹಾಗೂ ಕಾರ್ಯದರ್ಶಿ ಮಾಕಂ ನಾಗರಾಜ ಗುಪ್ತ, ಪದಾಧಿಕಾರಿಗಳ ನೇತೃತ್ವದಲ್ಲಿ ಮಾ.19 ರಿಂದ 24ರ ವರೆಗೆ ಪ್ರಸಾದ (ಮೊಸರನ್ನ) ವಿತರಣೆಯ ಭಕ್ತರಿಗೆ ಮಾಡಲಾಗುವುದು. ಕಳೆದ 30 ವರ್ಷಗಳಿಂದ ದಾನಿಗಳ ಸಹಕಾರದಿಂದ ಈ ಸೇವಾ ಕಾರ್ಯ ಮಾಡಿಕೊಂಡು ಬಂದಿರುವುದಾಗಿ ಟ್ರಸ್ಟ್‌ನ ಮಾಕಂ ನಾಗರಾಜ ಗುಪ್ತಾ ತಿಳಿಸಿದ್ದಾರೆ.