ಗೌರಸಮುದ್ರ ಶ್ರೀಮಾರಮ್ಮ ದೇವಿ ಜಾತ್ರೆಯಲ್ಲಿ ಭಕ್ತಸಾಗರ

KannadaprabhaNewsNetwork |  
Published : Sep 05, 2024, 12:41 AM IST
ಪೋಟೋ೦೩ಸಿಎಲ್‌ಕೆ೧ಎ ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದ ತುಮಲು ಪ್ರದೇಶದಲ್ಲಿ ಗೌರಸಮುದ್ರ ಮಾರಮ್ಮ ದೇವಿಯ ಮುಂಭಾಗದಲ್ಲಿರುವ ಗರಡುಗಂಭಕ್ಕೆ ದೀಪ ಹಚ್ಚುತ್ತಿರುವ ಭಕ್ತರು.  | Kannada Prabha

ಸಾರಾಂಶ

ಗೌರಸಮುದ್ರ ಗ್ರಾಮದಿಂದ ತುಮಲು ಪ್ರದೇಶಕ್ಕೆ ಮಾರಮ್ಮ ದೇವಿಯನ್ನು ಮೆರವಣಿಗೆ ಮೂಲಕ ಕರೆತಂದ ಭಕ್ತರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರತಿವರ್ಷದಂತೆ ಈ ವರ್ಷವೂ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರದ್ಧೆ, ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು.

ಮಾರಮ್ಮದೇವಿ ದೇವಸ್ಥಾನ ಹಾಗೂ ತುಮಲ ಪ್ರದೇಶದ ಸುತ್ತಮುತ್ತಲು ಭಕ್ತರು ದಂಡೇ ಹರಿದುಬಂದಿತ್ತು. ಜಿಲ್ಲಾಡಳಿತದ ಸೂಚನೆ ಮೇರೆಗೆ ತಾಲೂಕು ಆಡಳಿತ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡು ಭಕ್ತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದರಲ್ಲದೆ, ಸಿದ್ಧತೆಗಳನ್ನು ಸಹ ಪೂರ್ಣಗೊಳಿಸಿದ್ದರು. ಕಳೆದ ಹಲವಾರು ದಶಕಗಳಿಂದ ಈ ಭಾಗದಲ್ಲಿ ನೆಲೆಸಿರುವ ಲಕ್ಷಾಂತರ ಭಕ್ತರ ಆರಾಧ್ಯ ದೈವವಾದ ಸಂಕಷ್ಟಗಳಿಗೆ ಪರಿಹಾರ ನೀಡುವ ಮಾರಮ್ಮ ದೇವಿ ದರ್ಶನ ಪಡೆದು ಭಕ್ತರು ಪುನಿತರಾದರು. ತಮ್ಮ ಆರಾಧ್ಯದೈವವನ್ನು ಕಣ್ತುಂಬಿಕೊಂಡರು.

ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ನಡೆಯುವ ಮೂಲ ಬುಡಕಟ್ಟು ಸಂಸ್ಕೃತಿಕ ಜಾತ್ರೆಗಳಲ್ಲಿ ಒಂದಾದ ಮಾರಮ್ಮ ದೇವಿ ಜಾತ್ರೆ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಭಾಗದಲ್ಲಿದ್ದು, ಆಂಧ್ರವೂ ಸೇರಿದಂತೆ ಗುಲ್ಬರ್ಗ, ಸುರಪುರ, ಬಳ್ಳಾರಿ ಹಲವಾರು ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ಪ್ರತಿವರ್ಷವೂ ಈ ಜಾತ್ರೆಗೆ ಹರಿಕೆ ಹೊತ್ತ ಮೂಲ ಭಕ್ತರು ಎತ್ತಿನ ಗಾಡಿಗಳಲ್ಲಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಿಕೆ ತೀರಿಸಿದರು.

ಪ್ರತಿ ವರ್ಷದಂತೆ ಮಧ್ಯಾಹ್ನ ದೇವಸ್ಥಾನದಿಂದ ತುಮಲು ಪ್ರದೇಶಕ್ಕೆ ಮಾರಮ್ಮ ದೇವಿಯ ಪೆಟ್ಟಿಗೆಯಲ್ಲಿ ಕೂಡಿಸಿ ಮಂಗಳವಾದ್ಯದೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ತುಮಲು ಪ್ರದೇಶಕ್ಕೆ ಕರೆತರಲಾಯಿತು.

ಬುಡಕಟ್ಟು ಸಂಪ್ರದಾಯದಂತೆ ಡೊಳ್ಳು, ಕೋಲಾಟ, ಕುಣಿತ, ಬರಿಮೈಗೆ ಚಾಟಿಯಲ್ಲಿ ಹೊಡೆದುಕೊಳ್ಳುವ ಮೂಲಕ ಭಕ್ತಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಗ್ರಾಮದಿಂದ ತುಮಲು ಪ್ರದೇಶವರೆಗೂ ಸುಮಾರು 3 ಕಿಮೀ ದೂರದ ರಸ್ತೆಯ ಇಕ್ಕಲಗಳಲ್ಲಿ ಲಕ್ಷಾಂತರ ಭಕ್ತರು ಕೈಮುಗಿದು ತಾವು ಬೆಳೆದ ಬೆಳೆಗಳು, ಈರುಳ್ಳಿ, ಕೋಳಿ, ಹೂ ತೂರುವ ಮೂಲಕ ಹರಿಕೆ ತೀರಿಸಿದರು.

ನಂತರ ತುಮಲು ಪ್ರದೇಶಕ್ಕೆ ಆಗಮಿಸಿ ಇಲ್ಲಿ ಹಾಲಿ ಇರುವ ಮೂಲ ದೇವಸ್ಥಾನದ ಸುತ್ತಲು ಸುತ್ತಿದ ನಂತರ ದೇವಿಯನ್ನು ಅಲ್ಲಿ ಪ್ರತಿಷ್ಠಾಪಿಸಿ ಪೂಜೆ ಕಾರ್ಯಗಳನ್ನು ನಡೆಸಲಾಯಿತು.

ಪ್ರತಿವರ್ಷದ ವಾಡಿಕೆಯಂತೆ ದೇವಸ್ಥಾನದ ಮುಂದಿರುವ ಗರಡು ಗಂಭದ ಮೇಲೆ ದೀಪ ಹಚ್ಚಿದ ನಂತರ ಜಾತ್ರೆ ಸಂಪನ್ನವಾಯಿತು. ಕಂಬ ಏರಿ ದೀಪ ಹಚ್ಚುವ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡು ದೀಪಹಚ್ಚಿ ವಾಪಾಸ್ ಮರಳುವಾಗ ಎಲ್ಲರೂ ಒಟ್ಟಿಗೆ ದೇವಿಗೆ ಜೈಯಕಾರ ಹಾಕಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ಮುಖಂಡರಾದ ಬಾಳೆಮಂಡಿ ರಾಮದಾಸ್, ಈ.ರಾಮರೆಡ್ಡಿ, ಎನ್.ಒಬಳೇಶ್, ಚನ್ನಗಾನಹಳ್ಳಿ ಮಲ್ಲೇಶ್, ಪ್ರಕಾಶ್‌ರೆಡ್ಡಿ, ನಾರಾಯಣ ರೆಡ್ಡಿ, ಪಾಪಣ್ಣ, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿ.ಎಸ್.ಮಂಜುನಾಥ, ಡಾ.ಬಿ.ಯೋಗೇಶ್‌ಬಾಬು, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಸಿ.ಎಂ.ಕಾರ್ತಿಕ್, ತಹಸೀಲ್ದಾರ್ ರೇಹಾನ್ ಪಾಷ, ಇಒ ಎಚ್.ಶಶಿಧರ, ಡಿವೈಎಸ್‌ಪಿ ಟಿ.ಬಿ.ರಾಜಣ್ಣ, ದಿವಾಕರ್, ಇನ್ಸೆಪೆಕ್ಟರ್ ಎನ್.ತಿಮ್ಮಣ್ಣ, ರಾಜಫಕೃದ್ದೀನ್‌ದೇಸಾಯಿ, ಗ್ರಾಪಂ ಅಧ್ಯಕ್ಷ ಓಬಣ್ಣ ಸೇರಿ

ಹಲವಾರು ಮುಖಂಡರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ