ಮೊದಲ ದಿನವೇ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ

KannadaprabhaNewsNetwork |  
Published : Oct 31, 2026, 01:45 AM IST
30ಎಚ್ಎಸ್ಎನ್12 : ಹಾಸನ ಉಪ ವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಜಗದೀಶ್‌ ಗಂಗಣ್ಣವರ್‌. | Kannada Prabha

ಸಾರಾಂಶ

ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವದ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದೆ. ಸುಗಮ ದರ್ಶನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ಬ್ಯಾರಿಕೇಡ್ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವದ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದೆ. ಸುಗಮ ದರ್ಶನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ಬ್ಯಾರಿಕೇಡ್ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್‌ ತಿಳಿಸಿದರು.

ಹಾಸನಾಂಬೆ ದೇವಾಲಯದ ಆವರಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿ, ಸಂಪ್ರದಾಯದಂತೆ ಬುಧವಾರ ಮಧ್ಯಾಹ್ನ ೧೨ ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಬಳಿಕ ಮಧ್ಯಾಹ್ನ ೩ ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಿ ಗರ್ಭಗುಡಿ ಸ್ವಚ್ಛತೆ, ಬಣ್ಣ ಬಳಿಯುವುದು ಹಾಗೂ ದೇವಿಯ ಆಸನಕ್ಕೆ ಅಲಂಕಾರ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಗುರುವಾರ ಬೆಳಗಿನ ಜಾವ ೪.೪೫ಕ್ಕೆ ಸಾರ್ವಜನಿಕ ದರ್ಶನಕ್ಕೆ ಅಧಿಕೃತವಾಗಿ ಬಾಗಿಲು ತೆರೆಯಲಾಯಿತು. ಈ ಬಾರಿ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ಸಾವಿರಾರು ಭಕ್ತರು ವಿಶ್ರಾಂತಿ ಪಡೆಯುತ್ತಿದ್ದರು. ಬೆಳಗಿನ ಜಾವ ಐದು ಗಂಟೆ ವೇಳೆಗೆ ಸಾಮಾನ್ಯ ಸರದಿ ಸಾಲು ಪ್ರವೇಶ ದ್ವಾರವನ್ನು ದಾಟಿ ವಿಸ್ತರಿಸಿತ್ತು. ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂತೆಪೇಟೆ ವೃತ್ತದಿಂದ ದೇವಸ್ಥಾನದವರೆಗೆ ಈಗಾಗಲೇ ನಿರ್ಮಿಸಿರುವ ಸುಮಾರು ೩೫೦ ಮೀಟರ್ ಬ್ಯಾರಿಕೇಡ್ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು ೪೦ರಿಂದ ೫೦ ಲಕ್ಷ ಆದಾಯ ಬಂದಿತ್ತು. ಈ ಬಾರಿ ಅದಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಿನ ಆದಾಯ ಬಂದಿದೆ. ಭಕ್ತರ ಸಂಖ್ಯೆಯಲ್ಲಿಯೂ ಎರಡರಿಂದ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನದ ಅವಧಿ ವಿಸ್ತರಣೆಗೆ ಚಿಂತನೆ

ಮೊದಲ ದಿನ ದೇವಿಗೆ ವಿಶೇಷ ಅಲಂಕಾರ ಹಾಗೂ ನೈವೇದ್ಯ ಇರುವ ಹಿನ್ನೆಲೆಯಲ್ಲಿ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಕುರಿತು ಅರ್ಚಕರು ವೇಳಾಪಟ್ಟಿ ನಿಗದಿಪಡಿಸಿದ್ದಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ದರ್ಶನದ ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಅರ್ಚಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಭಕ್ತರು ಹೆಚ್ಚು ಸಮಯ ಸರದಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಿ, ಯಾವುದೇ ತೊಂದರೆಯಾಗದಂತೆ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆದಿದೆ.* ಬಾಕ್ಸ್‌:::: ಆನ್‌ಲೈನ್ ಟಿಕೆಟ್‌ನಿಂದ ₹೧.೪೩ ಕೋಟಿ ಆದಾಯ

ಅ.೨೨ರಿಂದ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಆರಂಭಿಸಲಾಗಿದ್ದು, ವೆಬ್‌ಸೈಟ್, ಮೊಬೈಲ್ ಆಪ್ ಹಾಗೂ ವಾಟ್ಸ್‌ ಆಪ್ ಚಾಟ್‌ಬಾಟ್ ಮೂಲಕ ಭಕ್ತರು ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ವಾಟ್ಸ್‌ಆಪ್‌ ಚಾಟ್‌ಬಾಟ್ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗುತ್ತಿವೆ. ಭಕ್ತರು ತಮಗೆ ಅನುಕೂಲವಾದ ದಿನಾಂಕವನ್ನು ಆಯ್ಕೆ ಮಾಡಿಕೊಂಡು ದರ್ಶನಕ್ಕೆ ಬರಬಹುದಾಗಿದೆ. ಒಬ್ಬರು ಒಂದೇ ಬಾರಿಗೆ ಗರಿಷ್ಠ ೫೦ ಟಿಕೆಟ್‌ಗಳನ್ನು ಕಾಯ್ದಿರಿಸುವ ವ್ಯವಸ್ಥೆಯೂ ಇದೆ. ಅ.೨೨ರಿಂದ ಇಲ್ಲಿಯವರೆಗೆ ೧,೦೦೦ ಮುಖಬೆಲೆಯ ೧೦,೪೪೩ ಟಿಕೆಟ್‌ಗಳು ಮಾರಾಟವಾಗಿದ್ದು, ಇದರಿಂದ ೧.೦೬ ಕೋಟಿ ಆದಾಯ ಬಂದಿದೆ. ೩೦೦ ಮುಖಬೆಲೆಯ ೧೨,೪೦೦ ಟಿಕೆಟ್‌ಗಳ ಮಾರಾಟದಿಂದ ೩೬ ಲಕ್ಷ ಹಾಗೂ ಆನ್‌ಲೈನ್‌ನಲ್ಲಿ ಸುಮಾರು ೩,೫೦೦ ಲಾಡುಗಳ ಬುಕ್ಕಿಂಗ್‌ನಿಂದ ೧.೮೮ ಲಕ್ಷ ಆದಾಯ ಬಂದಿದೆ. ಒಟ್ಟಾರೆ ಟಿಕೆಟ್ ಮತ್ತು ಲಾಡು ಮಾರಾಟದಿಂದ ದೇವಸ್ಥಾನಕ್ಕೆ ₹ ೧.೪೩ ಕೋಟಿ ಆದಾಯ ಲಭಿಸಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ