ಹಾವೇರಿ: ಭಕ್ತಿಯನ್ನು ಜ್ಞಾನೋಪಾಸನೆ, ಮನೋವಿಕಾಸ, ಸಾಮಾಜಿಕ ಪರಿಶುದ್ಧತೆಯ ಲೋಕಜ್ಞಾನದ ನೆಲೆಯಲ್ಲಿ ವಿವೇಚಿಸುವುದು ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಸಾಂಸ್ಕೃತಿಕ ಚಲನಶೀಲತೆಗೆ ಭಕ್ತಿ ಪರಂಪರೆಯು ತನ್ನದೇಯಾದ ಅಮೂಲ್ಯ ಕೊಡುಗೆ ನೀಡುತ್ತದೆ ಎಂದು ಬೆಂಗಳೂರಿನ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅಭಿಪ್ರಾಯಪಟ್ಟರು.
ಕೆಎಲ್ಇ ಸಂಸ್ಥೆಯ ಸ್ಥಾನಿಕ ಮಂಡಳಿ ಅಧ್ಯಕ್ಷ ಡಾ. ಎಸ್.ಎಲ್. ಬಾಲೆಹೊಸೂರ ಮಾತನಾಡಿ, ಭಕ್ತಿ ಎಂಬ ಪದವಿಲ್ಲದೇ ಒಬ್ಬ ವ್ಯಕ್ತಿ, ಸಮಾಜ ಎಂದೂ ಬದುಕುಳಿಯಲಾರದು. ಭಕ್ತಿ ನೆಲೆಗೊಂಡಾಗ ಮಾತ್ರ ವ್ಯಕ್ತಿಯ ವಿಕಸನದೊಂದಿಗೆ ಸಮಾಜದ ಪ್ರಗತಿಯು ಧನಾತ್ಮಕ ಚಿಂತನೆಯ ಮೂಲಕ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಕುಮಾರೇಶ್ವರ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಚ್. ಹೊಳೆಯಣ್ಣನವರ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯಕ್ಕೆ ಕನಕದಾಸ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕೆಂದು ಸರ್ಕಾರದಲ್ಲಿ ಬೇಡಿಕೆ ಇಡಬೇಕೆಂದು ವಿನಂತಿಸಿದರು.ಡಾ. ಎಸ್.ಪಿ. ಗೌಡರ್ ಮಾತನಾಡಿ, ಭಕ್ತಿ ಭಾವನ್ಮಾತಕ ಸಂಕೀರ್ಣವಾದ ವಿಷಯ. ಈ ಭಕ್ತಿ ಚಳವಳಿ ಎನ್ನುವುದು ಸರ್ವ ವ್ಯಾಪಕವಾಗಿದೆ. ಭಕ್ತಿ ಪಂಥದ ನಿಲುವುಗಳು ಭಿನ್ನ ಭಿನ್ನವಾದ ಹರವುಗಳನ್ನು ಒಳಗೊಂಡಿದೆ. ಇಡೀ ಭಕ್ತಿ ಪರಂಪರೆ ಅವಲೋಕಿಸಿದಾಗ ತಳಸಮುದಾಯದ ಪಾತ್ರ ಕಂಡುಬರುತ್ತದೆ ಎಂದರು.
ಸಂಘಟನಾ ಕಾರ್ಯದರ್ಶಿ ಡಾ. ಸಂಜೀವ ನಾಯಕ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ದೀಪಕ ಕೊಲ್ಹಾಪುರೆ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಸತೀಶ ಕುಲಕರ್ಣಿ, ಪ್ರೊ. ರಾಮರೆಡ್ಡಿ, ಪ್ರೊ. ನಾಗರಾಜ ಮುಚ್ಚಟಿ ವೇದಿಕೆಯಲ್ಲಿದ್ದರು.