ಭರತನಾಟ್ಯವೂ ಒಂದು ಪ್ರಕಾರದ ವ್ಯಾಯಾಮ: ಹರ್ಷಭಾನು

KannadaprabhaNewsNetwork | Published : Mar 16, 2025 1:52 AM

ಸಾರಾಂಶ

ಭರತನಾಟ್ಯ ಕಲೆಯು ಯೋಗದ ಒಂದು ಲಕ್ಷಣ. ನಿತ್ಯ ತರಬೇತಿಗೊಳ್ಳುವುದರಿಂದ ನಮ್ಮ ಶರೀರದ ವ್ಯಾಯಾಮ ಸಾಧ್ಯವಾಗುತ್ತದೆ.

ಯಲ್ಲಾಪುರ: ಭರತನಾಟ್ಯ ಕಲೆಯು ಯೋಗದ ಒಂದು ಲಕ್ಷಣ. ನಿತ್ಯ ತರಬೇತಿಗೊಳ್ಳುವುದರಿಂದ ನಮ್ಮ ಶರೀರದ ವ್ಯಾಯಾಮ ಸಾಧ್ಯವಾಗುತ್ತದೆ. ಇದು ಕೂಡ ಒಂದು ಯೋಗ. ಅಂತಹ ನೃತ್ಯಕಲೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಉಪರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ. ಹೇಳಿದರು.

ಅವರು ಪಟ್ಟಣದ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಮಾ.೮ರಂದು ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಭರತನಾಟ್ಯ ಒಂದು ಪ್ರಭಾವೀ ನೃತ್ಯಾರಾಧನೆ. ಇದರಲ್ಲಿ ಎಂತಹ ವ್ಯಕ್ತಿಗಳನ್ನು ಆಕರ್ಷಿಸುವ ಶಕ್ತಿ ಇದೆ. ಆ ನೆಲೆಯಲ್ಲಿ ಸಹನಾ ಭಟ್ಟ ನಮ್ಮ ಜಿಲ್ಲೆಯಲ್ಲಿ ಬಹುದೊಡ್ಡ ಶಿಷ್ಯಬಳಗ ಬೆಳೆಸಿದ್ದಾರೆ. ಅವರು ದೇಶ-ವಿದೇಶಗಳಲ್ಲೂ ನೃತ್ಯ ಪ್ರದರ್ಶನ ಮಾಡಿ, ಮೇರು ನೃತ್ಯ ಕಲಾವಿದೆಯಾಗಿದ್ದಾರೆ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಇಂತಹ ಕಲೆಗಳು ನಮಗೆ ಉತ್ತಮ ಸಂಸ್ಕಾರವನ್ನು ನೀಡುತ್ತದೆ. ಸಂಸ್ಕಾರದಿಂದ ಮಾತ್ರ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ನಾವು ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಕಸಾಪ ಬೆಂಗಳೂರು ಇದರ ಮಾರ್ಗದರ್ಶಿ ಸಮಿತಿ ಸದಸ್ಯ ವೇಣುಗೋಪಾಲ ಮದ್ಗುಣಿ ಶುಭ ಹಾರೈಸಿದರು. ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಿರ್ದೇಶಕಿ ಡಾ.ಸಹನಾ ಪ್ರದೀಪ ಭಟ್ಟ ತಮ್ಮ ಅನುಭವ ಹಂಚಿಕೊಂಡರು. ಸಂಸ್ಥೆಯ ಅಧ್ಯಕ್ಷ ಪ್ರದೀಪ ಭಟ್ಟ ಅಧ್ಯಕ್ಷತೆ ವಹಿಸಿದ್ದರು.

ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಶಿಷ್ಯ ವೃಂದದವರಿಂದ ಭರತನಾಟ್ಯ ಚೌಕಟ್ಟಿನ ನೃತ್ಯ ಬಂಧಗಳಾದ ಪುಷ್ಪಾಂಜಲಿ, ಅಲರಿಪು, ಜತಿಸ್ವರ, ಕೌತುಕಂ, ದೇವರನಾಮ, ವರ್ಣಂ ಮುಂತಾದವುಗಳ ಪ್ರದರ್ಶನ ಹಾಗೂ ವಿಶೇಷವಾಗಿ "ದಾಕ್ಷಾಯಿಣಿ " (ಏಕ ವ್ಯಕ್ತಿ ಪ್ರದರ್ಶನ) ಡಾ.ಸಹನಾ ಭಟ್ಟ ಇವರಿಂದ ಪ್ರದರ್ಶನಗೊಂಡು ಪ್ರಶಂಸೆಗೆ ಪಾತ್ರವಾಯಿತು. ವಿದುಷಿ ವಿನುತಾ ಭಟ್ಟ, ಶಿಕ್ಷಕ ರಾಘವೇಂದ್ರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ವೆಂಕಟರಮಣ ಮಠದಲ್ಲಿ "ದಾಕ್ಷಾಯಿಣಿ " ಭರತನಾಟ್ಯ ಪ್ರದರ್ಶನ ನಡೆಯಿತು.

Share this article