- ಇತಿಹಾಸ ಸಂಶೋಧಕ ದಿ. ಭಾಸ್ಕರರಾವ್ ಮನೆಗೆ ಹೈಕೋರ್ಟ್ ನ್ಯಾ. ಹಂಚಾಟೆ ಭೇಟಿ । ಕುಟುಂಬಕ್ಕೆ ಸಾಂತ್ವನ
- ರೈತ ಹಾಗೂ ಶೋಷಿತರ ಧ್ವನಿಯಾಗಿದ್ದ ಭಾಸ್ಕರರಾವ್ ಮುಡಬೂಳ-----ಕನ್ನಡಪ್ರಭ ವಾರ್ತೆ ಶಹಾಪುರ
ದಿ. ಭಾಸ್ಕರರಾವ್ ಮೂಡಬೂಳ ಅವರು ತಮ್ಮ ವಕೀಲ ವೃತ್ತಿಯನ್ನು ಜೀವನದುದ್ದಕ್ಕೂ ಯಾರಿಗೂ ರಾಜಿಯಾಗದೆ ಸಗರನಾಡಿನ ರೈತರು ಹಾಗೂ ಇಲ್ಲಿನ ಶೋಷಿತ ಜನರ ಪರ ಹೋರಾಟ ಮಾಡುವ ಮೂಲಕ ಈ ಭಾಗದ ರೈತರ, ಶೋಷಿತರ ಧ್ವನಿಯಾಗಿ ನಿಂತವರು. ಅವರ ಜೀವನದ ಸಾತ್ವಿಕತೆಯನ್ನು ಮುಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಂಜೀವಕುಮಾರ್ ಹಂಚಾಟೆ ಹೇಳಿದರು.ಈಚೆಗೆ ಶಹಾಪುರ ನಗರದಲ್ಲಿ ನಿಧನರಾದ ಖ್ಯಾತ ವಕೀಲ, ರೈತ ಹೋರಾಟಗಾರ, ಶಿಕ್ಷಣ ಪ್ರೇಮಿ, ಖ್ಯಾತ ಸಂಶೋಧಕರಾದ ದಿ. ಭಾಸ್ಕರರಾವ್ ಮುಡಬೂಳ ಅವರ ಮನೆಗೆ ಹೈಕೋರ್ಟ್ ನ್ಯಾಯಾಧೀಶರು ಕುಟುಂಬ ಸಮೇತ ಭೇಟಿ ನೀಡಿ, ಮುಡಬೂಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು.
ಭಾಸ್ಕರರಾವ್ ತಮ್ಮ ವಕೀಲ ವೃತ್ತಿಯ ವೃತ್ತಿಯ ಜೊತೆ ರೈತರ ಬಗ್ಗೆ ಅವರಲ್ಲಿ ಅಪಾರ ಕಾಳಜಿ ಇತ್ತು. ರೈತ ಚಳವಳಿಗೆ ಶಕ್ತಿಯಾಗಿದ್ದರು. ಇತಿಹಾಸ ಸಂಶೋಧನೆ ಬಗ್ಗೆ ಅಪಾರ ಜ್ಞಾನ ಇರುವ ಅವರು ಈ ಭಾಗದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಅವರಲ್ಲಿ ಕಿಂಚಿತ್ತು ಅಹಂ ಇರಲಿಲ್ಲ. ಡಾ. ಸ್ವಾಮಿನಾಥ ವರದಿ ಜಾರಿಯಾದ ಹೊರತು ರೈತರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಹೋರಾಟದ ಮೂಲಕ ಅನೇಕ ಚರ್ಚೆಗಳನ್ನು ಮಾಡುವ ಮೂಲಕ ರೈತರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದವರು. ಅವರು ನಮ್ಮಿಂದ ಭೌತಿಕವಾಗಿ ದೂರವಾಗಿರಬಹುದು. ಮಾನಸಿಕವಾಗಿ ಅವರು ನಮ್ಮ ಜೊತೆಯಲ್ಲೇ ಇದ್ದು ನಮಗೆ ಅವರ ಕೆಲಸ ಕಾರ್ಯದ ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.ಅವರಿಂದ ಇನ್ನು ನಾವು ಬಹಳಷ್ಟು ಕಲಿಯಬೇಕಾಗಿದೆ. ಅವರು ಜೀವನದುದ್ದಕ್ಕೂ ಸಾರ್ವಜನಿಕರೊಂದಿಗೆ ಸದಾ ಹಸನ್ಮುಖಿಯಾಗಿ ಜೀವನ ನಡೆಸಿದ್ದಾರೆ. ಅವರ ಸಾತ್ವಿಕ ಜೀವನವೇ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ತಂದೆಯ ಹಾದಿಯಲ್ಲಿ ಜನ ಸೇವೆಯಲ್ಲಿ ತೊಡಗುವ ಮೂಲಕ ಅವರ ಹೆಸರನ್ನು ಉಳಿಸಬೇಕು ಎಂದರು.
ಶಹಾಪುರದ ಹಿರಿಯ ನ್ಯಾಯಾಧೀಶ ಸಿದ್ದರಾಮ ಟಿ.ಪಿ. ಮಾತನಾಡಿ, ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಅವರಲ್ಲಿನ ಉತ್ಸುಕತೆ ಮತ್ತು ಸರಳತೆ ನಮ್ಮಲ್ಲಿ ಹೊಸ ಚೈತನ್ಯ ತುಂಬುತ್ತದೆ. ಅವರ ಅಕಾಲಿಕ ನಿಧನದಿಂದ ಈ ಭಾಗದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದರು.ನಗರದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಶೋಭಾ, ಹೆಚ್ಚುವರಿ ನ್ಯಾಯಾಧೀಶ ಬಸವರಾಜ್, ಸಿಎಂಒ ಗುರುರಾಜ್ ದೇಶಪಾಂಡೆ, ಪ್ರಕಾಶ್, ದಿ. ಭಾಸ್ಕರರಾವ್ ಅವರ ಮಗ ನ್ಯಾಯವಾದಿ ಉಮೇಶ್, ಹಿರಿಯ ವಕೀಲರಾದ ಆರ್. ಚೆನ್ನಬಸ್ಸು, ಟಿ. ನಾಗೇಂದ್ರ, ಹೇಮರೆಡ್ಡಿ, ಅಮರೇಶ, ವಿಶ್ವನಾಥ್ ಪಿರಂಗಿ, ಶರಣಪ್ಪ ಪ್ಯಾಟಿ, ಲೀಲಾಧರ ಭಂಡಾರಿ, ಮಲ್ಲಯ್ಯ ಪೋಲಂಪಲ್ಲಿ, ಮಂಜುನಾಥ್ ಬಿರಾದಾರ್, ಬಸವರಾಜ ಕರೆಗಾರ, ಮಾನಪ್ಪ ಸೇರಿದಂತೆ ಅನೇಕರಿದ್ದರು.
-----27ವೈಡಿಆರ್17: ಶಹಾಪುರ ನಗರದಲ್ಲಿ ಈಚೆಗೆ ಹೃದಯಘಾತದಿಂದ ನಿಧನಾರಾದ ದಿ. ಭಾಸ್ಕರರಾವ್ ಮುಡಬೂಳ ಅವರ ಮನೆಗೆ ಹೈಕೋರ್ಟ್ ನ್ಯಾಯಾಧೀಶ ಹಂಚಾಟೆ ಸಂಜೀವ್ ಕುಮಾರ್ ಭೇಟಿ ನೀಡಿ, ಸಾಂತ್ವನ ಹೇಳಿದರು.
----27ವೈಡಿಆರ್18: ದಿ. ಭಾಸ್ಕರರಾವ್ ಮುಡಬೂಳ ಅವರ ಭಾವಚಿತ್ರವನ್ನು ವೀಕ್ಷಿಸುತ್ತಿರುವ ಹೈಕೋರ್ಟ್ ನ್ಯಾಯಾಧೀಶ ಹಂಚಾಟೆ ಸಂಜೀವ್ ಕುಮಾರ್.