ಭಟ್ಕಳ ನಾಗಮಾಸ್ತಿ ಕ್ಷೇತ್ರದಲ್ಲಿ ಯುಗಾದಿ ಕವಿಗೋಷ್ಟಿ, ಉಪನ್ಯಾಸ
ಇಲ್ಲಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ನಾಗಮಾಸ್ತಿ ಕ್ಷೇತ್ರದಲ್ಲಿ ನಾಗಮಾಸ್ತಿ ಯೋಗ ಕೇಂದ್ರ ಹಾಗೂ ತಾಲೂಕು ಕಸಾಪ ಸಹಯೋಗದಲ್ಲಿ ಏರ್ಪಡಿಸಲಾದ ಯುಗಾದಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ನಾಗಮಾಸ್ತಿ ಕ್ಷೇತ್ರದ ಅಧ್ಯಕ್ಷ ಸತೀಶಕುಮಾರ್ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಟ್ಕಳ ತಾಲೂಕು ಕಸಾಪ ವಿದ್ಯಾರ್ಥಿಗಳು, ಶಿಕ್ಷಕ ಸಮೂಹ ಮತ್ತು ಸಾಮಾನ್ಯ ಜನರನ್ನೂ ತಲುಪುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ, ಸಾಹಿತ್ಯಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬಂದಿದೆ. ಭಟ್ಕಳ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತು ಎಲ್ಲರನ್ನು ತಲುಪುವಂತಾಗಿದೆ. ಮಾತ್ರವಲ್ಲ, ಜಿಲ್ಲೆಯಲ್ಲಿಯೇ ಗುರುತಿಸಲ್ಪಡುವ ಘಟಕವಾಗಿದೆ ಎಂದರು.ಈ ಸಂದರ್ಭ ನಾಗಮಾಸ್ತಿ ಕ್ಷೇತ್ರದಲ್ಲಿ ನಡೆಯುವ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮಗಳ ಕುರಿತು ತಿಳಿಸಿದರು.
ನಾಗಮಾಸ್ತಿ ಯೋಗಕೇಂದ್ರ ಆರಂಭಗೊಂಡು 1 ವರ್ಷ ಪೂರೈಸಿದ ಹಿನ್ನೆಲೆ ಯೋಗಗುರು ಗೋವಿಂದ ದೇವಾಡಿಗ ಹಾಗೂ ಯೋಗ ಶಿಕ್ಷಕಿ ಲತಾ ನಾಗರಾಜ ನಾಯಕ ಅವರನ್ನು ಸನ್ಮಾನಿಸಲಾಯಿತು. ನಾಗಮಾಸ್ತಿ ಯೋಗ ಕೇಂದ್ರದ ನಾಗರಾಜ ನಾಯ್ಕ ಸ್ವಾಗತಿಸಿದರೆ, ರೇಖಾ ಲೋಕೇಶ ನಾಯ್ಕ ವಂದಿಸಿದರು. ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ಕಾವ್ಯಮಯವಾಗಿ ಕಾರ್ಯಕ್ರಮ ನಿರೂಪಿಸಿದರು. ಲತಾ ನಾಯ್ಕ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಶ್ರೀಧರ್ ನಾಯ್ಕ, ನಾಗರಾಜ ನಾಯ್ಕ, ರಾಮನಾಥ ಬಳೆಗಾರ, ಲೋಕೇಶ್ ನಾಯ್ಕ, ರಾಜಶೇಖರ್, ನಾಗೇಶ್ ನಾಯ್ಕ, ರಾಜೇಶ, ಸುಬ್ರಾಯ ನಾಯ್ಕ ಹಾಗೂ ನಾಗಮಾಸ್ತಿ ಯೋಗ ಕೇಂದ್ರದ ನೂರಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.