ಭಟ್ಕಳ ಪುರಸಭೆ: ₹4.72 ಲಕ್ಷ ಉಳಿತಾಯ ಬಜೆಟ್ ಮಂಡನೆ

KannadaprabhaNewsNetwork | Published : Mar 7, 2025 12:46 AM

ಸಾರಾಂಶ

₹4.72 ಲಕ್ಷ ಉಳಿತಾಯ ಮುಂಗಡ ಪತ್ರ ಮಂಡಿಸಲಾಯಿತು.

ಭಟ್ಕಳ: ಇಲ್ಲಿನ ಪುರಸಭೆಯ 2025-26ನೇ ಸಾಲಿನ ₹4.72 ಲಕ್ಷ ಉಳಿತಾಯ ಮುಂಗಡ ಪತ್ರವನ್ನು ಪ್ರಭಾರ ಅಧ್ಯಕ್ಷ ಮೊಹ್ದೀನ್ ಅಲ್ತಾಫ್‌ ಖರೂರಿ ಮಂಡಿಸಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದರು.

2025-26ನೇ ಸಾಲಿಗೆ ಅಂದಾಜು ಪುರಸಭೆಯ ₹15.16 ಕೋಟಿ ಆದಾಯ ಮತ್ತು ₹15.11 ಕೋಟಿ ಖರ್ಚು ಸೇರಿ ₹4.72 ಲಕ್ಷ ಉಳಿತಾಯ ಮುಂಗಡ ಪತ್ರ ಮಂಡಿಸಲಾಯಿತು. 2025-26ನೇ ಸಾಲಿಗೆ ಆಸ್ತಿ ತೆರಿಗೆಯಿಂದ ₹1.44 ಕೋಟಿ, ನೀರು ಸರಬರಾಜು ಶುಲ್ಕದಿಂದ ₹53 ಲಕ್ಷ, ಪುರಸಭೆ ವಾಣಿಜ್ಯ ಮಳಿಗೆಗಳಿಂದ ₹38.81 ಲಕ್ಷ, ಜಾಹೀರಾತು ಶುಲ್ಕದಿಂದ ₹1.15 ಲಕ್ಷ, ಎಸ್ಎಪ್ಸಿ ಮುಕ್ತ ನಿಧಿ ಅನುದಾನದಡಿ ₹60 ಲಕ್ಷ, 5ನೇ ಹಣಕಾಸು ಅನುದಾನದಿಂದ ₹1.25 ಕೋಟಿ, ಬರಗಾಲ ನಿಧಿಯಡಿ ಕುಡಿಯುವ ನೀರಿನ ಅನುದಾನ ₹15 ಲಕ್ಷ, ಎಸ್‌ಬಿಎಂ ಕೇಂದ್ರ ಸರ್ಕಾರದ ಅನುದಾನ ಸೇರಿ ₹50 ಲಕ್ಷ, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ₹20 ಲಕ್ಷ ಆದಾಯ ನಿರೀಕ್ಷೆ ಮಾಡಲಾಗಿದೆ.

2025-26ನೇ ಸಾಲಿಗೆ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ಅನುದಾನ ಮತ್ತು ಪುರಸಭೆ ನಿಧಿಯಿಂದ ₹34 ಲಕ್ಷ, ಪಟ್ಟಣದ ಬಡಜನರ ಅಭಿವೃದ್ಧಿಗಾಗಿ ₹6 ಲಕ್ಷ, ವಿಕಲಚೇತನರ ಕಲ್ಯಾಣಕ್ಕಾಗಿ ₹1.50 ಲಕ್ಷ, ಕ್ರೀಡಾ ಚಟುವಟಿಕೆಗಾಗಿ ₹0.10 ಲಕ್ಷ, ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷ, ರಸ್ತೆ ನಿರ್ಮಾಣಕ್ಕೆ ₹65 ಲಕ್ಷ, ಚರಂಡಿ ಹಾಗೂ ಕಲ್ವರ್ಟ ನಿರ್ಮಾಣಕ್ಕೆ ₹20 ಲಕ್ಷ, ಬೀದಿ ದೀಪ ನಿರ್ವಹಣೆಗೆ ₹20 ಲಕ್ಷ, ಯಂತ್ರೋಪಕರಣ ಖರೀದಿಗೆ ₹10 ಲಕ್ಷ, ಘನತ್ಯಾಜ್ಯ ಮತ್ತು ಇತರೆ ಸ್ಥಿರಾಸ್ತಿಗಳಿಗೆ ₹62 ಲಕ್ಷ, ನೀರು ವಿತರಣಾ ವ್ಯವಸ್ಥೆಗೆ ₹20 ಲಕ್ಷ, ಕಚೇರಿಗೆ ಅವಶ್ಯವಿರುವ ಉಪಕರಣ ಖರೀದಿಗೆ 11 ಲಕ್ಷ, ಗಾರ್ಡ್‌ ಅಭಿವೃದ್ಧಿಗೆ ₹5 ಲಕ್ಷವನ್ನು ಮುಂಗಡ ಪತ್ರದಲ್ಲಿ ಮೀಸಲಿರಿಸಲಾಗಿದೆ. ಮುಂಗಡಪತ್ರ ಮಂಡಿಸುವ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖೈಸರ್ ಮೊಹಿತೆಶ್ಯಾಂ, ಮುಖ್ಯಾಧಿಕಾರಿ ವೆಂಕಟೇಶ ನಾವುಡ ಸೇರಿದಂತೆ ಪುರಸಭೆಯ ಅಧಿಕಾರಿಗಳು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.ಭಟ್ಕಳ ಪುರಸಭೆಯ ಮುಂಗಡಪತ್ರವನ್ನು ಪ್ರಭಾರ ಅಧ್ಯಕ್ಷ ಮೊಹ್ದೀನ್ ಅಲ್ತಾಫ್‌ ಖರೂರಿ ಮಂಡಿಸಿದರು.

Share this article